










ಕೊಕ್ಕಡ: ಅರಸಿನಮಕ್ಕಿ ಸಮೀಪದ ಮದ್ದಡ್ಕ ಎಂಬಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ಎರಡು ದಿನಗಳಿಂದ ನಿರಂತರವಾಗಿ ಕೃಷಿ ತೋಟಗಳಿಗೆ ದಾಳಿ ನಡೆಸುತ್ತಿರುವ ಘಟನೆ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ.
ಮದ್ದಡ್ಕದ ಶ್ರೀಧರ್ ಎಸ್. ಹಾಗೂ ಸುಬ್ರಹ್ಮಣ್ಯ ಅವರಿಗೆ ಸೇರಿದ ಅನ್ನಪೂರ್ಣ ಫಾರ್ಮ್ ಮೇಲೆ ಕಾಡಾನೆಗಳು ರಾತ್ರಿ ವೇಳೆ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ. ಆನೆಗಳ ದಾಳಿಯಿಂದ ಸುಮಾರು 10 ತೆಂಗಿನ ಮರಗಳು, 150ಕ್ಕೂ ಹೆಚ್ಚು ಫಸಲಿಗೆ ಬಂದಿದ್ದ ಬಾಳೆ ಗಿಡಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ತೋಟದ ನೀರಾವರಿ ವ್ಯವಸ್ಥೆಗೆ ಅಳವಡಿಸಿದ್ದ ಪೈಪ್ಗಳು ಸಹ ಜಖಂಗೊಂಡಿವೆ. ಇದರಿಂದ ರೈತರಿಗೆ ಅಪಾರ ನಷ್ಟ ಉಂಟಾಗಿದೆ.
ಇತ್ತೀಚಿನ ದಿನಗಳಲ್ಲಿ ಅರಸಿನಮಕ್ಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗಿದ್ದು, ಪ್ರತಿದಿನ ರಾತ್ರಿ ಕೃಷಿ ತೋಟಗಳಿಗೆ ನುಗ್ಗಿ ಬೆಳೆಗಳನ್ನು ತುಳಿದು ನಾಶಪಡಿಸುತ್ತಿವೆ. ವರ್ಷಪೂರ್ತಿ ಶ್ರಮವಹಿಸಿ ಬೆಳೆ ಬೆಳೆಸಿದ ರೈತರಿಗೆ ಇದೀಗ ಕಾಡಾನೆಗಳ ಹಾವಳಿ ದೊಡ್ಡ ಹೊಡೆತ ನೀಡಿದ್ದು, ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ತೋಟಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿ, ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಅಲ್ಲದೆ, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಶಾಶ್ವತ ತಡೆ ಕ್ರಮಗಳನ್ನು ಕೈಗೊಂಡು, ರೈತರ ಜೀವ ಹಾಗೂ ಕೃಷಿ ಆಸ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಯೋಜನೆ ಜಾರಿಗೆ ತರಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ಕಾಡಾನೆಗಳ ನಿರಂತರ ದಾಳಿಯಿಂದ ರೈತರು ಭಯದ ವಾತಾವರಣದಲ್ಲಿ ಕೃಷಿ ಮಾಡುವಂತಾಗಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಒತ್ತಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.



