ಬಂಟ್ವಾಳ: ಬಿ.ಸಿ.ರೋಡ್ ಯುವತಿ ಹತ್ಯೆ ಪ್ರಕರಣ: ಆರೋಪಿ ಪೊಲೀಸ್ ವಶಕ್ಕೆ; ವಿಷ ಸೇವಿಸಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲು

ಶೇರ್ ಮಾಡಿ

 

ಬಂಟ್ವಾಳ: ಬಿ.ಸಿ.ರೋಡ್ ಯುವತಿ ಹತ್ಯೆ ಪ್ರಕರಣ: ಆರೋಪಿ ಪೊಲೀಸ್ ವಶಕ್ಕೆ; ವಿಷ ಸೇವಿಸಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲು

ಬಂಟ್ವಾಳ: ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ (21) ಅವರನ್ನು ಭೀಕರವಾಗಿ ಕತ್ತಿಯಿಂದ ಕಡಿದು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚೇತನ್ (23)ನನ್ನು ಬಂಟ್ವಾಳ ನಗರ ಪೊಲೀಸರು ಶುಕ್ರವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ ತಾಲೂಕಿನ ಕಕ್ಯಪದವು ನಿವಾಸಿಯಾದ ಲಾವಣ್ಯ ಅವರನ್ನು ಗುರುವಾರ ಸಂಜೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಎದುರೇ ಕತ್ತಿಯಿಂದ ಮನಬಂದಂತೆ ಕಡಿದು ಹತ್ಯೆ ಮಾಡಿದ್ದ ಆರೋಪಿ ಘಟನೆ ಬಳಿಕ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಬಂಟ್ವಾಳ ನಗರ ಪೊಲೀಸರು ತಕ್ಷಣವೇ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆಯುವ ವೇಳೆ ಆತ ಇಲಿಪಾಷಾಣ (ವಿಷ ಪದಾರ್ಥ) ಸೇವಿಸಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರು ಆತನನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ನೀಡುವಂತೆ ಕ್ರಮ ಕೈಗೊಂಡಿದ್ದಾರೆ.

ಆರೋಪಿಯಿಂದ ಹತ್ಯೆಗೆ ಬಳಸಿದ ಆಯುಧ, ಕೃತ್ಯದ ನಿಖರ ಕಾರಣ ಹಾಗೂ ಘಟನೆಯ ಹಿಂದಿನ ಉದ್ದೇಶ ಸೇರಿದಂತೆ ಹಲವು ಮಾಹಿತಿಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಚಾರಣೆಯ ನಂತರವೇ ಪ್ರಕರಣದ ಸಂಪೂರ್ಣ ಮಾಹಿತಿ ಬಹಿರಂಗವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೀಕರ ಹತ್ಯೆ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

 

Leave a Reply

error: Content is protected !!