










ಉಜಿರೆ: ಪ್ರತಿಭೆಗಳನ್ನು ಬಳಸಲು ಅವಕಾಶ ಸಿಕ್ಕಿದಾಗ ಅದನ್ನ ಸರಿಯಾಗಿ ಬಳಸಿಕೊಂಡು ಬೆಳೆಸಿಕೊಂಡರೆ ಅದ್ಭುತ ಅವಕಾಶದ ಬಾಗಿಲು ತೆರೆದುಕೊಳ್ಳುತ್ತದೆ. ಭಿತ್ತಿ ಪತ್ರಿಕೆಗಳ ಜೊತೆ ನೀವು ಇಷ್ಟಪಟ್ಟು ತೊಡಗಿಸಿಕೊಂಡರೆ ಮುಂದೆ ಕಲೆ ಮತ್ತು ಬರವಣಿಗೆಯ ಮಾಧ್ಯಮ ದಲ್ಲಿ ಅದೇ ನಿಮ್ಮನ್ನು ಬೆಳೆಸುತ್ತದೆ. ಭಿತ್ತಿ ಪತ್ರಿಕೆಗಳು ಆಕರ್ಷಕವಾಗಿ ಮಾತ್ರವಲ್ಲದೆ ಸ್ವಂತಿಕೆ ಮತ್ತು ಸೃಜನಾತ್ಮಕತೆಯಿಂದ ಕೂಡಿರಲಿ ಎಂದು ಉಜಿರೆ ಶ್ರೀ ಧ.ಮಂ.ಕಾಲೇಜು( ಸ್ವಾಯತ್ತ) ಇಲ್ಲಿನ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಮುಖ್ಯಸ್ಥ ಪ್ರಸ್ತುತ “ಮಂಜುವಾಣಿ” ಪತ್ರಿಕೆಯ ಸಂಪಾದಕ ಡಾ.ಭಾಸ್ಕರ ಹೆಗಡೆ ಅವರು ತಿಳಿಸಿದರು.

ಉಜಿರೆ ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜುನಲ್ಲಿ ಭಿತ್ತಿಪತ್ರಿಕೆ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾದ ಮಾಹಿತಿಪೂರ್ಣವಾದ ಸಂಗತಿಗಳನ್ನು ಮತ್ತು ತಮ್ಮ ಅನುಭವಕ್ಕೆ ಬಂದ ವಿದ್ಯಾರ್ಥಿ ಸಾಧಕರ ಬಗ್ಗೆ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಒಳ್ಳೆಯ ಭಾವನೆಗಳನ್ನು, ವಿಚಾರಗಳನ್ನು, ಅನಿಸಿಕೆಗಳನ್ನು ಪ್ರಕಟಿಸಲು ಭಿತ್ತಿ ಪತ್ರಿಕೆಯನ್ನು ವೇದಿಕೆಯಾಗಿ ಬಳಸಿಕೊಳ್ಳಿ. ಆ ಮೂಲಕ ನಿಮ್ಮ ಪ್ರತಿಭೆ ಹೊರಬರಲಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಉಪಪ್ರಾಂಶುಪಾಲ ಡಾ.ರಾಜೇಶ್ ಬಿ ಹಾಗೂ ಕಾರ್ಯಕಾರಿ ಸಮಿತಿ ಮುಖ್ಯಸ್ಥೆ ವೈದೇಹಿ ಎಸ್, ಸದಸ್ಯರಾದ ಸುಭಾಷ್ ರಾವ್ ಬೋಳೂರು, ಮನೋಹರ್ ಶೆಟ್ಟಿ, ಅಶ್ವಿನಿ ಎಚ್ ಆರ್, ಅಂಬಿಕಾ.ಕೆ ಹಾಗೂ ಪ್ರಾಧ್ಯಾಪಕ ವೃಂದ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಚಾರಿತ್ರ ಜೈನ್ ಕಾರ್ಯಕ್ರಮ ನಿರೂಪಿಸಿ, ರಚನ ಬಿ.ಜೆ.ಅತಿಥಿ ಪರಿಚಯ ನೀಡಿದರು, ಭಾಗ್ಯಲಕ್ಷ್ಮಿ ಸ್ವಾಗತಿಸಿದರು, ಸ್ಮೃತಿ ಧನ್ಯವಾದ ಸಲ್ಲಿಸಿದರು.



