










ಕೊಕ್ಕಡ: ನೆಲ್ಯಾಡಿಯ ಬೆಥನಿ ವಿದ್ಯಾಸಂಸ್ಥೆಗೆ ಸೇರಿದ ಶಾಲಾ ಬಸ್ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿ ಸವಾರೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಕೊಕ್ಕಡ ಸಮೀಪದ ಅಡೈ ಎಂಬಲ್ಲಿ ನಡೆದಿದೆ.
ಗಾಯಗೊಂಡ ಸ್ಕೂಟಿ ಸವಾರೆಯನ್ನು ಸಿಬಂತಿ ನಿವಾಸಿ ಪ್ರಣಮ್ಯ(21) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರ ನೆರವಿನಿಂದ ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾಲಾ ಬಸ್ ನೆಲ್ಯಾಡಿಯಿಂದ ವಿದ್ಯಾರ್ಥಿಗಳನ್ನು ಅವರ ಮನೆಗಳಿಗೆ ಬಿಡುವ ಉದ್ದೇಶದಿಂದ ಪಟ್ರಮೆ ಕಡೆಗೆ ತೆರಳುತ್ತಿತ್ತು. ಇದೇ ವೇಳೆ ಸ್ಕೂಟಿಯಲ್ಲಿ ಕೊಕ್ಕಡದ ಕಡೆಗೆ ಬರುತ್ತಿದ್ದ ಪ್ರಣಮ್ಯ ಅವರ ವಾಹನ ಮತ್ತು ಶಾಲಾ ಬಸ್ ನಡುವೆ ಅಡೈ ಎಂಬಲ್ಲಿ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ.
ಅಪಘಾತ ಸಂಭವಿಸಿದ ವೇಳೆ ಪ್ರದೇಶದಲ್ಲಿ ಭಾರೀ ಮಳೆ ಬರುತ್ತಿತ್ತು. ರಸ್ತೆ ಸಂಪೂರ್ಣ ಹದಗೆಟ್ಟ ಸ್ಥಿತಿಯಲ್ಲಿತ್ತು. ಅಲ್ಲದೆ, ರಸ್ತೆ ಇಕ್ಕಟ್ಟಿನಿಂದ ಕೂಡಿರುವುದರಿಂದ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗುತ್ತಿತ್ತು. ಮಳೆ, ರಸ್ತೆ ದುಸ್ಥಿತಿ ಹಾಗೂ ಇಕ್ಕಟ್ಟಿನ ರಸ್ತೆ ಅಪಘಾತಕ್ಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ತಕ್ಷಣ ಗಾಯಾಳುವಿಗೆ ನೆರವಾಗಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಕುರಿತು ತನಿಖೆ ಮುಂದುವರಿದಿದೆ.



