ನೆಲ್ಯಾಡಿ: ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್‌ 75ನೇ ಸಂಭ್ರಮಾಚರಣೆಗೆ ಸಿದ್ಧತೆ; ಸೆ.6ರಂದು ಪೂರ್ವ ವಿದ್ಯಾರ್ಥಿಗಳ ಮೆಗಾ ಗೆಟ್‌-ಟುಗೆದರ್

ಶೇರ್ ಮಾಡಿ

 

ನೆಲ್ಯಾಡಿ: ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್‌ 75ನೇ ಸಂಭ್ರಮಾಚರಣೆಗೆ ಸಿದ್ಧತೆ; ಸೆ.6ರಂದು ಪೂರ್ವ ವಿದ್ಯಾರ್ಥಿಗಳ ಮೆಗಾ ಗೆಟ್‌-ಟುಗೆದರ್

ನೆಲ್ಯಾಡಿ: ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 75ನೇ ವರ್ಷದ ಸಂಭ್ರಮಾಚರಣೆಯ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಸಮಿತಿಯ ಸಭೆಯು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ದಿನಕರ್ ಅವರ ಉಪಸ್ಥಿತಿಯಲ್ಲಿ ಹಾಗೂ 75ನೇ ಸಂಭ್ರಮಾಚರಣೆ ಸಮಿತಿಯ ಅಧ್ಯಕ್ಷ ಶಾಜಿ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಸಭೆಯಲ್ಲಿ ಶಾಲೆಯ ಅಭಿವೃದ್ಧಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯನ್ನು ದೊರಕಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಲಾಯಿತು. ಇದೇ ವೇಳೆ, ಸೆಪ್ಟೆಂಬರ್‌ 6ರಂದು ಶಾಲೆಯ ಪೂರ್ವ ವಿದ್ಯಾರ್ಥಿಗಳ ಮೆಗಾ ಗೆಟ್‌-ಟುಗೆದರ್ ಆಯೋಜಿಸಿ, ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲ ಹಿರಿಯ ಶಿಕ್ಷಕರನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ 75ನೇ ವರ್ಷದ ಸಂಭ್ರಮಾಚರಣೆಗೆ ಅಧಿಕೃತ ಚಾಲನೆ ನೀಡಲು ತೀರ್ಮಾನಿಸಲಾಯಿತು. ಅದೇ ದಿನ ಪೂರ್ವ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ನಿರ್ಧಾರ ಕೈಗೊಳ್ಳಲಾಯಿತು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.

ಸಭೆಯಲ್ಲಿ ವಿಜಯ ಕರ್ನಾಟಕದ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನಕ್ಕೆ ಬೆಂಬಲ ಸೂಚಿಸಿ, ಸಮಿತಿಯ ವತಿಯಿಂದ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಪತ್ರಿಕೆಗಳನ್ನು ಒದಗಿಸಲು ದಾನಿಗಳನ್ನು ಸಂಪರ್ಕಿಸುವುದಾಗಿ ತೀರ್ಮಾನಿಸಲಾಯಿತು. ಸೆಪ್ಟೆಂಬರ್‌ 6ರ ಕಾರ್ಯಕ್ರಮದ ಕುರಿತು ಆಗಸ್ಟ್‌ 8ರಂದು ಪತ್ರಿಕಾಗೋಷ್ಠಿ ನಡೆಸಲು ಹಾಗೂ ಅದೇ ದಿನ ಕಾರ್ಯಕ್ರಮದ ಸಿದ್ಧತೆ ಮತ್ತು ಮುಂದಿನ ಕಾರ್ಯಯೋಜನೆ ಕುರಿತು ಚರ್ಚಿಸಲು ಸಂಭ್ರಮಾಚರಣೆ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಕರೆಯಲು ನಿರ್ಧರಿಸಲಾಯಿತು.

ಸಭೆಯಲ್ಲಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸರ್ವೋತ್ತಮ ಗೌಡ, ಮುಖ್ಯಶಿಕ್ಷಕ ಶ್ರೀಧರ್ ಎಸ್., ಶಿಕ್ಷಕ ವಿಮಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಶ್ರೀಧರ್ ಎಸ್. ಸ್ವಾಗತಿಸಿದರು. ಶಿಕ್ಷಕ ವಿಮಲ್ ಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ 75ನೇ ಸಂಭ್ರಮಾಚರಣೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

CALL NOW 8606485844

 

Leave a Reply

error: Content is protected !!