










ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಸ್ವಚ್ಛ ಹಾಗೂ ಪರಿಸರ ಸ್ನೇಹಿಯಾಗಿ ಉಳಿಸುವ ಉದ್ದೇಶದಿಂದ ಸುಬ್ರಹ್ಮಣ್ಯ ರೋಟರಿ ಕ್ಲಬ್ ಹಾಗೂ ಡಾ.ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ (ರಿ.) ವತಿಯಿಂದ ಭಾನುವಾರ ಕುಮಾರಧಾರ ಸ್ನಾನಘಟ್ಟ, ಕುಮಾರಧಾರ ಸೇತುವೆ ಹಾಗೂ ಕುಲಕುಂದ ಕಾಲನಿವರೆಗೆ ವ್ಯಾಪಕ ಸ್ವಚ್ಛತಾ ಅಭಿಯಾನ ನಡೆಸಲಾಯಿತು.
ಸಾಕಷ್ಟು ಜಾಗೃತಿ ಮೂಡಿಸಿದರೂ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ತಟ್ಟೆ ಹಾಗೂ ಇತರೆ ತ್ಯಾಜ್ಯವನ್ನು ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಎಸೆಯುತ್ತಿರುವುದು ಕಂಡುಬಂದಿದ್ದು, ಸ್ವಯಂಸೇವಕರು ಇವುಗಳನ್ನು ಸಂಗ್ರಹಿಸಿ ಸ್ಥಳವನ್ನು ಸ್ವಚ್ಛಗೊಳಿಸಿದರು. ಕುಮಾರಧಾರ ಸೇತುವೆಯ ಇಕ್ಕೆಲಗಳು ಹಾಗೂ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿದ್ದ ಪ್ಲಾಸ್ಟಿಕ್ ಮತ್ತು ಇತರೆ ಕಸವನ್ನೂ ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ರೋಹಿತ್ ಬಿ.ಬಿ., “ಯಾರೂ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ನಿಯಮ ಉಲ್ಲಂಘಿಸುವವರ ವಿರುದ್ಧ ಗ್ರಾಮ ಪಂಚಾಯತ್ ಸ್ಥಳದಲ್ಲೇ ದಂಡ ವಿಧಿಸುವ ವ್ಯವಸ್ಥೆ ಜಾರಿಯಾಗಬೇಕು. ಜೊತೆಗೆ ಭಕ್ತರಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು” ಎಂದು ಹೇಳಿದರು.
ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಡಾ. ರವಿ ಕಕ್ಕೆಪದವು ಮಾತನಾಡಿ, “ನಾವು ನಿರಂತರವಾಗಿ 538ನೇ ವಾರದ ಸ್ವಚ್ಛತಾ ಸೇವೆಯನ್ನು ನಡೆಸುತ್ತಿದ್ದೇವೆ. ನಮ್ಮ ಸ್ವಯಂಸೇವಕರು ಪ್ರತೀ ಭಾನುವಾರ ಉತ್ಸಾಹದಿಂದ ಈ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಕ್ತರು ಎಲ್ಲೆಂದರಲ್ಲಿ ಕಸ ಎಸೆಯದೆ ಕಸದ ತೊಟ್ಟಿಗೆ ಹಾಕಬೇಕು ಅಥವಾ ತಮ್ಮ ವಾಹನದಲ್ಲೇ ಕಸವನ್ನು ಕೊಂಡೊಯ್ದು ಸೂಕ್ತ ತ್ಯಾಜ್ಯ ವಿಲೇವಾರಿ ಕೇಂದ್ರಕ್ಕೆ ತಲುಪಿಸಬೇಕು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಸ್ವಚ್ಛವಾಗಿಡಲು ಪ್ರತಿಯೊಬ್ಬರೂ ಸಹಕರಿಸಬೇಕು” ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷ ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿ, ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಸ್ವಚ್ಛತಾ ಅಭಿಯಾನದಲ್ಲಿ ರೋಟರಿ ಕ್ಲಬ್ ಸದಸ್ಯರು, ಟ್ರಸ್ಟ್‌ನ ಸ್ವಯಂಸೇವಕರು ಹಾಗೂ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.



