










ಬೆಳ್ತಂಗಡಿ: ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪ ಐದೂವರೆ ಕೋಟಿ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಂಡ ಬಹುಕೋಟಿ ಮಾದಕ ಜಾಲ ಪ್ರಕರಣದಲ್ಲಿ ಬೆಳ್ತಂಗಡಿಯ ಅಂಬುಲೆನ್ಸ್ ಚಾಲಕ ಜಲೀಲ್ ಬಾಬಾ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಆತ ಕಳೆದ ಏಳು ದಿನಗಳಿಂದ ತಲೆಮರೆಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಥಮ ವರ್ತಮಾನದ ಮುಂದಿನ ವರದಿಯಲ್ಲಿ ಜಲೀಲ್ ಬಾಬಾನನ್ನು ಮತ್ತೋರ್ವ ಆರೋಪಿಯಾಗಿ ಉಲ್ಲೇಖಿಸಿದ್ದು, ಆತನ ಬಂಧನ ಬಾಕಿಯಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ತಾಫ್ (28), ಉಜಿರೆ ಹಳೆಪೇಟೆಯ ಮೊಹಮ್ಮದ್ ಮುಸ್ತಫಾ (28), ಇಂದಬೆಟ್ಟು ಗ್ರಾಮದ ದೇವನಾರಿ ನಿವಾಸಿ ಅಲ್ಫಾಜ್ ಹಾಗೂ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ ಅಣ್ಣಪ್ಪ ಸ್ವಾಮಿಯನ್ನು ಆರಂಭದಲ್ಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಉಳಿದ ಆರೋಪಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣದ ತನಿಖೆ ವೇಳೆ ಜಲೀಲ್ ಬಾಬಾ ಎಂಬಾತನ ಹೆಸರು ಬೆಳಕಿಗೆ ಬಂದಿದ್ದು, ಆತನನ್ನು ಇದೀಗ ಪ್ರಕರಣದ ಮತ್ತೋರ್ವ ಆರೋಪಿಯಾಗಿ ಸೇರ್ಪಡೆ ಮಾಡಲಾಗಿದೆ. ಪ್ರಕರಣದ ಆರಂಭದಲ್ಲಿ ಸಿಸಿಬಿ ಪೊಲೀಸರು ಮಂಗಳೂರಿನ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಯಲ್ಲಿ ದಾಳಿ ನಡೆಸಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನಿಂದ 15.17 ಗ್ರಾಂ ಎಂಡಿಎಂಎ ಹಾಗೂ ಸುಮಾರು ₹1.50 ಲಕ್ಷ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ವೇಳೆ ಮಾದಕ ವಸ್ತು ಪೂರೈಕೆ ಜಾಲದ ಮಹತ್ವದ ಸುಳಿವು ಲಭಿಸಿತ್ತು.
ತನಿಖೆಯಲ್ಲಿ ದೆಹಲಿಯಿಂದ ಎಂಡಿಎಂಎ ಖರೀದಿಸಿ ಬೆಂಗಳೂರಿಗೆ ಸಾಗಿಸುತ್ತಿದ್ದ ಜಾಲದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಜುಲೈ 15ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಯಲ್ ಇನ್ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಅವರಿಂದ ಅಂದಾಜು ₹5.5 ಕೋಟಿ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ, ಕಾರು, ಬ್ಯಾಗ್ ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಪೊಲೀಸರ ಮಾಹಿತಿ ಪ್ರಕಾರ, ಪ್ರಮುಖ ಆರೋಪಿ ಮೊಹಮ್ಮದ್ ಅಲ್ತಾಫ್ ವಿರುದ್ಧ ಈ ಹಿಂದೆ 2024ರಲ್ಲಿ ಕೊಣಾಜೆ ಪೊಲೀಸ್ ಠಾಣೆ ಹಾಗೂ 2026ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣಗಳು ದಾಖಲಾಗಿದ್ದವು. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕಾರಿನ ಮೂಲಕ ದೆಹಲಿಯಿಂದ ಎಂಡಿಎಂಎ ತಂದು, ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ವಿವಿಧ ಭಾಗಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದರು ಎಂಬುದು ಬಹಿರಂಗವಾಗಿದೆ. ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಲ್ಲಿ ತನಿಖೆ ಮುಂದುವರಿದಿದೆ.
ಪೊಲೀಸ್ ವಿಚಾರಣೆ ವೇಳೆ ಬಂಧಿತ ಆರೋಪಿಗಳು ನೀಡಿದ ಮಾಹಿತಿಯಂತೆ, ಜಲೀಲ್ ಬಾಬಾ ತನ್ನ ಅಂಬುಲೆನ್ಸ್ ವಾಹನವನ್ನು ಮಾದಕ ವಸ್ತು ಸಾಗಾಟಕ್ಕೆ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ಅಲ್ಲದೆ, ದೆಹಲಿಗೆ ತೆರಳಿ ಎಂಡಿಎಂಎ ಖರೀದಿಸಿದ್ದ ಮೂವರು ಆರೋಪಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ, ವಿಶೇಷವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುವ ಜಾಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಜಲೀಲ್ ಬಾಬಾ ಕಳೆದ ಏಳು ದಿನಗಳಿಂದ ತಲೆಮರೆಸಿಕೊಂಡಿದ್ದು, ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಸಾಮಾನ್ಯವಾಗಿ ನಿರ್ವಹಿಸುತ್ತಿದ್ದ ತುರ್ತು ಅಂಬುಲೆನ್ಸ್ ಸೇವೆಯ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ತಿಳಿದುಬಂದಿದೆ.
ಆರೋಪಿಯ ಬಂಧನಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ.
ಈ ಸಂಬಂಧ ಮಂಗಳೂರು ನಗರ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಸುದೀಪ್ ಎಂ.ವಿ. ಹಾಗೂ ಸುರತ್ಕಲ್ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಬ್ ಇನ್ಸ್ಪೆಕ್ಟರ್ ಜನಾರ್ದನ ನಾಯ್ಕ ಅವರು ಸರ್ಕಾರದ ಪರವಾಗಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ನಿವೇದನೆಯಲ್ಲಿ ಪ್ರಕರಣದ ಆರಂಭಿಕ ತನಿಖೆಯ ವಿವರಗಳನ್ನು ಉಲ್ಲೇಖಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮಾದಕ ಜಾಲದಲ್ಲಿ ಇನ್ನಷ್ಟು ಮಂದಿಯ ಪಾತ್ರ ಬೆಳಕಿಗೆ ಬರುವ ಸಾಧ್ಯತೆ ಇದೆ.



