










ಬೆಂಗಳೂರು: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಮತ್ತು ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆ ಬೆನ್ನಲ್ಲೇ ಕರ್ನಾಟಕದಲ್ಲಿ ನೀಟ್ ವಿರುದ್ಧದ ಆಕ್ರೋಶ ಮತ್ತಷ್ಟು ಜೋರಾಗಿದ್ದು, ‘ನಮಗೆ NEET ಬೇಡ, ನಮ್ಮ K-CET ಬೇಕು’ ಎಂಬ ಹೊಸ ಸಹಿ ಅಭಿಯಾನಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.
ಕವಿರಾಜ್ ನೇತೃತ್ವದಲ್ಲಿ ಬೃಹತ್ ಸಹಿ ಅಭಿಯಾನ
ಚಿತ್ರ ಸಾಹಿತಿ ಕವಿರಾಜ್ ಅವರ ನೇತೃತ್ವದಲ್ಲಿ ನಾಡಿನ ಸಾಹಿತಿಗಳು, ಹೋರಾಟಗಾರರು, ವಿದ್ಯಾರ್ಥಿಗಳು ಹಾಗೂ ಪೋಷಕರು ಒಂದಾಗಿ ಈ ಸೈನ್ ಪಿಟಿಷನ್ ಅಭಿಯಾನವನ್ನು ಕೈಗೆತ್ತಿಕೊಂಡಿದ್ದಾರೆ. ಅಭಿಯಾನ ಶುರುವಾದ ಕೇವಲ ಒಂದೇ ದಿನದಲ್ಲಿ 2,000ಕ್ಕೂ ಅಧಿಕ ಜನರು ಸಹಿ ಸಂಗ್ರಹಿಸುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ವೈದ್ಯಕೀಯ ಸೀಟುಗಳ ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಸಿಇಟಿ ಪರೀಕ್ಷೆಯನ್ನೇ ಆಧಾರವಾಗಿಟ್ಟುಕೊಳ್ಳಬೇಕು ಎಂಬುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
KEA ಮಾದರಿಯೇ ಬೆಸ್ಟ್: ಸಿಇಟಿಗೆ ಪಟ್ಟು
ಎಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆಯನ್ನು ಯಾವುದೇ ಲೋಪದೋಷಗಳಿಲ್ಲದೆ ಅತ್ಯಂತ ಯಶಸ್ವಿಯಾಗಿ ಹಾಗೂ ಪಾರದರ್ಶಕವಾಗಿ ನಡೆಸುತ್ತಿರುವ ಕರ್ನಾಟಕ ಸಿಇಟಿ ಮಾಡಲ್ ಇಡೀ ದೇಶಕ್ಕೇ ಬೆಸ್ಟ್ ಮಾಡಲ್ ಆಗಿದೆ. ಹೀಗಾಗಿ, ಕಷ್ಟಪಟ್ಟು ಓದುವ ರಾಜ್ಯದ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಠಕವಾಗುತ್ತಿರುವ ಕೇಂದ್ರದ ನೀಟ್ ವ್ಯವಸ್ಥೆಯನ್ನು ರದ್ದುಗೊಳಿಸಿ, ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕೆಇಎ ಮೂಲಕವೇ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಬೇಕೆಂದು ರಾಜ್ಯಾದ್ಯಂತ ಆಗ್ರಹ ವ್ಯಕ್ತವಾಗುತ್ತಿದೆ.
ವೈದ್ಯಕೀಯ ಪ್ರವೇಶಕ್ಕೆ ನೀಟ್ ಏಕೆ ರದ್ದಾಗಬೇಕು?
ರಾಜ್ಯ ಪಠ್ಯಕ್ರಮಕ್ಕೆ ಅನ್ಯಾಯ: ಶೇ 90ರಷ್ಟು ಸ್ಥಳೀಯ ವಿದ್ಯಾರ್ಥಿಗಳು ರಾಜ್ಯ ಪಠ್ಯಕ್ರಮದಲ್ಲಿದ್ದು, NEET ಸಂಪೂರ್ಣವಾಗಿ CBSE/NCERT ಆಧಾರಿತವಾಗಿದೆ.
ಕೋಚಿಂಗ್ ದಂಧೆ: ದುಬಾರಿ ಕೋಚಿಂಗ್ ಜಾಲದಿಂದ ಬಡ, ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳು ಕೈಗೆಟುಕುತ್ತಿಲ್ಲ.
ಅಕ್ರಮ ಹಾಗೂ ಕೇಂದ್ರೀಕೃತ ಲೋಪ: ಪ್ರಶ್ನೆಪತ್ರಿಕೆ ಸೋರಿಕೆ, ನಕಲಿ ದಾಖಲೆ ಮತ್ತು ED ಆರೋಪಗಳು ಕೇಂದ್ರೀಕೃತ ವ್ಯವಸ್ಥೆಯ ಪಾರದರ್ಶಕತೆಯನ್ನು ಪ್ರಶ್ನಿಸುವಂತೆ ಮಾಡಿದ್ದು, ವಿದ್ಯಾರ್ಥಿಗಳನ್ನು ಹತಾಶೆಗೆ ದೂಡಿದೆ.
ಸ್ಥಳೀಯರಿಗೆ ಸೀಟು ಕೊರತೆ: ದೇಶವ್ಯಾಪಿ ಪೈಪೋಟಿಯಿಂದ ಕರ್ನಾಟಕದ ಮಕ್ಕಳಿಗೆ ಕೈಗೆಟಕುವ ಶುಲ್ಕದ ಸೀಟುಗಳು ಸಿಗುತ್ತಿಲ್ಲ. ಜತೆಗೆ, ಕನ್ನಡ ಬಾರದ ವೈದ್ಯರಿಂದ ಗ್ರಾಮೀಣ ಆರೋಗ್ಯ ಸೇವೆಗೂ ಧಕ್ಕೆಯಾಗುತ್ತಿದೆ.
ಪ್ರಮುಖ ಬೇಡಿಕೆಗಳೇನು?
ದೇಶಾದ್ಯಂತ ಕಡ್ಡಾಯಗೊಳಿಸಿರುವ NEET ಅನ್ನು ತಕ್ಷಣವೇ ರದ್ದುಗೊಳಿಸಬೇಕು. ವೈದ್ಯಕೀಯ ಪ್ರವೇಶಾತಿ ಹಕ್ಕನ್ನು ರಾಜ್ಯಗಳಿಗೆ ಮರಳಿಸಿ, ಕರ್ನಾಟಕದಲ್ಲಿ KEA-CET ಮರುಸ್ಥಾಪಿಸಬೇಕು. ಶಿಕ್ಷಣವನ್ನು ಸಂಪೂರ್ಣವಾಗಿ ರಾಜ್ಯ ಪಟ್ಟಿಗೆ ಮರಳಿ ತರಬೇಕು ಮತ್ತು ಕೇಂದ್ರದ ಪಾತ್ರವನ್ನು ಕೇವಲ ಗುಣಮಟ್ಟದ ನಿಯಮ ರೂಪಿಸುವುದಕ್ಕೆ ಸೀಮಿತಗೊಳಿಸಬೇಕು ಎಂಬುದೆ ಅಭಿಯಾನದ ಹಿಂದಿನ ಪ್ರಮುಖ ಬೇಡಿಕೆಗಳಾಗಿವೆ.



