










ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಯ ಪಾಲಕರ ವಾರ್ಷಿಕ ಮಹಾಸಭೆ ಹಾಗೂ ಪುನಶ್ಚೇತನ ಕಾರ್ಯಕ್ರಮವು ಶುಕ್ರವಾರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಅವರು ಸುಮಾರು 49 ವರ್ಷಗಳ ಹಿಂದೆ ಪೂಜ್ಯ ಬಿಷಪ್ ಅವರ ಆಶೀರ್ವಾದ ಹಾಗೂ ಈ ಭಾಗದ ಜನರ ಶಿಕ್ಷಣದ ಅಗತ್ಯವನ್ನು ಮನಗಂಡು ಸಂತ ಜಾರ್ಜ್ ವಿದ್ಯಾಸಂಸ್ಥೆಯನ್ನು ಆರಂಭಿಸಲಾಯಿತು. ಆರಂಭದಲ್ಲಿ ಕೇವಲ 8ನೇ ತರಗತಿಗೆ 48 ವಿದ್ಯಾರ್ಥಿಗಳೊಂದಿಗೆ ಶುರುವಾದ ಈ ಸಂಸ್ಥೆ, ಇಂದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯ ಜ್ಞಾನ ಸಾಕಾಗುವುದಿಲ್ಲ. ಉತ್ತಮ ಸಂಸ್ಕಾರ, ಶಿಸ್ತು, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ. ಅದಕ್ಕಾಗಿ ಪಾಲಕರು ಮಕ್ಕಳೊಂದಿಗೆ ಆತ್ಮೀಯವಾಗಿ ಸಮಯ ಕಳೆಯಬೇಕು. ಅವರ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು. ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯಲ್ಲಿ ಆಸಕ್ತಿ ವಹಿಸಿ ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಅವರು ಸಲಹೆ ನೀಡಿದರು.
ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ಮನೆ ಮತ್ತು ಶಾಲೆ ಎರಡೂ ಸಮಾನ ಜವಾಬ್ದಾರಿಯನ್ನು ಹೊಂದಿವೆ. ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಎಷ್ಟು ಗಟ್ಟಿಯಾಗಿರುತ್ತದೆಯೋ ಅಷ್ಟೇ ಉತ್ತಮ ಫಲಿತಾಂಶವನ್ನು ವಿದ್ಯಾರ್ಥಿ ಸಾಧಿಸಲು ಸಾಧ್ಯವಾಗುತ್ತದೆ. ಶಿಕ್ಷಣವು ಅಂಕಗಳಿಗೆ ಮಾತ್ರ ಸೀಮಿತವಾಗದೆ ಉತ್ತಮ ವ್ಯಕ್ತಿತ್ವ ರೂಪಿಸುವ ಸಾಧನವಾಗಬೇಕು ಎಂದು ಅಬ್ರಹಾಂ ವರ್ಗೀಸ್ ಅಭಿಪ್ರಾಯಪಟ್ಟರು.
ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು ಹಾಗೂ ಜೀವನ ಮೌಲ್ಯಗಳನ್ನು ಕಲಿಸುವ ಹೊಣೆಗಾರಿಕೆ ಮೊದಲಿಗೆ ಪಾಲಕರ ಮೇಲಿದೆ. ಮಕ್ಕಳೊಂದಿಗೆ ಪ್ರತಿದಿನ ಮುಕ್ತವಾಗಿ ಮಾತನಾಡಬೇಕು, ಅವರ ಸಮಸ್ಯೆಗಳನ್ನು ಆಲಿಸಬೇಕು ಹಾಗೂ ಅವರ ಸ್ನೇಹಿತರಾಗಬೇಕು, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಉಂಟಾಗುತ್ತಿರುವ ವ್ಯಸನ, ಏಕಾಗ್ರತೆಯ ಕೊರತೆ ಹಾಗೂ ನಡವಳಿಕೆಯ ಬದಲಾವಣೆಗಳ ಬಗ್ಗೆ ಪಾಲಕರು ಎಚ್ಚರಿಕೆ ವಹಿಸಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುವುದರೊಂದಿಗೆ ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶಾಲೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಯಾವುದೇ ಸಮಸ್ಯೆ ಎದುರಾದಾಗ ಶಿಕ್ಷಕರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಪಾಲಕರು ಶಾಲೆಯನ್ನು ತಮ್ಮ ಮನೆಯ ವಿಸ್ತರಣೆಯಾಗಿ ಪರಿಗಣಿಸಬೇಕು. ಶಿಕ್ಷಕರನ್ನು ಗೌರವಿಸಿ, ಅವರೊಂದಿಗೆ ಸಹಕಾರದ ಮನೋಭಾವ ಬೆಳೆಸಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಮನೆ ಮತ್ತು ಶಾಲೆಯ ನಡುವೆ ಉತ್ತಮ ಹೊಂದಾಣಿಕೆ ಇದ್ದರೆ ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು ಹಾಗೂ ಜವಾಬ್ದಾರಿಯುತ ವ್ಯಕ್ತಿತ್ವ ಬೆಳೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂತನ ಶಿಕ್ಷಕ–ರಕ್ಷಕ ಸಂಘವನ್ನು ರಚಿಸಲಾಯಿತು. ಸಂಘದ ಅಧ್ಯಕ್ಷರಾಗಿ ವಿದ್ಯಾಸಂಸ್ಥೆಯ ಸಂಚಾಲಕ ಫಾ.ನೋಮಿಸ್ ಕುರಿಯಾಕೋಸ್, ಉಪಾಧ್ಯಕ್ಷರಾಗಿ ಪ್ರಾಚಾರ್ಯ ಏಲಿಯಾಸ್ ಎಂ.ಕೆ. ಹಾಗೂ ರವಿ ಕುಮಾರ್ ಕೆಮ್ಮಣ್ಣಮಕ್ಕಿ, ಕಾರ್ಯದರ್ಶಿಯಾಗಿ ತೋಮಸ್ ಎಂ.ಐ., ಜೊತೆ ಕಾರ್ಯದರ್ಶಿಯಾಗಿ ಹರಿಪ್ರಸಾದ್ ಪಿಲತ್ತಿಂಜ, ಕೋಶಾಧಿಕಾರಿಯಾಗಿ ಪ್ರಮೀಳಾ , ಸದಸ್ಯರಾಗಿ ನ್ಯಾನ್ಸಿ ಮಸ್ಕರೇನ್ಹಸ್, ರಫೀಕ್ ಉಳಿತೊಟ್ಟು, ಆನಂದ ಪಿಲವೂರ್, ಭಾರತಿ, ನವೀನ್ ಪಿ.ವಿ. ಶ್ರೀಕಟೀಲು, ರೈಸಾ ಹಾಗೂ ಶಿಕ್ಷಕರ ಪ್ರತಿನಿಧಿಗಳಾಗಿ ವಿಶ್ವನಾಥ ಶೆಟ್ಟಿ, ಗೀತಾ, ವರ್ಗೀಸ್ ಫ್ರಾನ್ಸಿಸ್, ರಾಬಿಯಾ, ಶೈಬಿ ಮತ್ತು ಶ್ರದ್ಧಾ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಸಂಚಾಲಕ ಫಾ.ನೋಮಿಸ್ ಕುರಿಯಾಕೋಸ್, ಪ್ರಾಚಾರ್ಯ ಏಲಿಯಾಸ್ ಎಂ.ಕೆ., ಕನ್ನಡ ವಿಭಾಗದ ಮುಖ್ಯಶಿಕ್ಷಕ ತೋಮಸ್ ಎಂ.ಐ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪ್ರಾಚಾರ್ಯ ಏಲಿಯಾಸ್ ಎಂ.ಕೆ. ಸ್ವಾಗತಿಸಿದರು. ತೋಮಸ್ ಎಂ.ಐ. ವಂದಿಸಿದರು. ವಿಶ್ವನಾಥ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.



