ರೆಖ್ಯ: ಕಾಡಾನೆ ದಾಳಿಗೆ ಕಾರ್ಮಿಕ ಬಾಲಕೃಷ್ಣ ಗೌಡ ಬಲಿ; ಮೃತದೇಹ ಪತ್ತೆ, ಸ್ಥಳದಲ್ಲಿ ಅಧಿಕಾರಿಗಳ ಪರಿಶೀಲನೆ

ಶೇರ್ ಮಾಡಿ

 

ರೆಖ್ಯ: ಕಾಡಾನೆ ದಾಳಿಗೆ ಕಾರ್ಮಿಕ ಬಾಲಕೃಷ್ಣ ಗೌಡ ಬಲಿ; ಮೃತದೇಹ ಪತ್ತೆ, ಸ್ಥಳದಲ್ಲಿ ಅಧಿಕಾರಿಗಳ ಪರಿಶೀಲನೆ

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕ ಎಂಬಲ್ಲಿ ಕಾಡಾನೆ ದಾಳಿಗೆ ದಿನಗೂಲಿ ಕಾರ್ಮಿಕರೊಬ್ಬರು ಬಲಿಯಾದ ದಾರುಣ ಘಟನೆ ಶನಿವಾರ ಸಂಜೆ ನಡೆದಿದೆ. ಮೃತರನ್ನು ಇಡ್ಮಾಲು ನಿವಾಸಿ ಬಾಲಕೃಷ್ಣ ಗೌಡ (55) ಎಂದು ಗುರುತಿಸಲಾಗಿದೆ.

ಬಾಲಕೃಷ್ಣ ಗೌಡ ಅವರು ಎಂದಿನಂತೆ ಕೆಲಸ ಮುಗಿಸಿ ಸಂಜೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾಡಾನೆ ದಾಳಿಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿ. ಅವರು ರಾತ್ರಿ ವೇಳೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದರು.

ಹುಡುಕಾಟದ ವೇಳೆ ಅವರು ಧರಿಸಿದ್ದ ಪ್ಲಾಸ್ಟಿಕ್ ರೈನ್‌ಕೋಟ್ ದಾರಿಯ ಮಧ್ಯೆ ಬಿದ್ದಿರುವುದು ಕಂಡುಬಂದಿದ್ದು, ಅದರ ಸಮೀಪದಲ್ಲೇ ಕಾಡಾನೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಇದರಿಂದ ಕಾಡಾನೆ ದಾಳಿ ನಡೆಸಿರುವ ಅನುಮಾನ ಬಲಗೊಂಡಿತ್ತು. ಬಳಿಕ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸಿದಾಗ ಸಮೀಪದ ಕಣಿಯೊಂದರಲ್ಲಿ ಬಾಲಕೃಷ್ಣ ಗೌಡ ಅವರ ಮೃತದೇಹ ಪತ್ತೆಯಾಯಿತು.

ಭಾನುವಾರದಂದು ಘಟನಾ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ., ಉಪವಲಯ ಅರಣ್ಯಾಧಿಕಾರಿಗಳು, ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಗಾಣಿಗೇರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಸಿನಮಕ್ಕಿ–ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅವಿನಾಶ್ ಭಿಡೆ, ರಮೇಶ್ ಬೈರಕಟ್ಟ ಹಾಗೂ ಸದಸ್ಯರು ಸದಸ್ಯರು, ಸ್ಥಳೀಯ ಸಾರ್ವಜನಿಕರು ಸ್ಥಳದಲ್ಲಿ ಬೀಡು ಬಿಟ್ಟಿದ್ದು.

ಮೃತದೇಹವನ್ನು ಸ್ಥಳದಲ್ಲೇ ಮಹಜರು ನಡೆಸಿ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ರವಾನಿಸಲಾಗಿದೆ. ಘಟನೆ ಕುರಿತು ಅರಣ್ಯ ಇಲಾಖೆ ಹಾಗೂ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

Leave a Reply

error: Content is protected !!