ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಪಾಲೆತ್ತಡಿ ಶ್ರೀ ಪಾಲೆಶ್ರೀ ಅಮ್ಮನವರ ಕ್ಷೇತ್ರದಲ್ಲಿ ಪ್ರತಿಷ್ಠಾ ಕಾರ್ಯ ಹಾಗೂ ದೈವಗಳ ನೇಮೋತ್ಸವ

ಶೇರ್ ಮಾಡಿ

ನೇಸರ ಎ:09: ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಪಾಲೆತ್ತಡಿ ಪಾಲೆಶ್ರೀ ಅಮ್ಮನವರು ಮತ್ತು ಪರಿವಾರ ದೈವಗಳು ಹಾಗೂ ಶ್ರೀ ನಾಗದೇವರ ಪ್ರತಿಷ್ಠಾ ಕಾರ್ಯ ಮತ್ತು ದೈವಗಳ ನೇಮ ಎ.9ರಿಂದ ಎ.11ರ ವರೆಗೆ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ದಾನ ಶಾಲಾ ಮಠ ಕಾರ್ಕಳ, ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯ ಮಠ, ಪೂಜ್ಯ ರಾಜರ್ಷಿ ಡಾ|ಡಿ.ವಿರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ, ಪ್ರತಿಷ್ಠಾಚಾರ್ಯರಾದ ಶ್ರೀ ಪದ್ಮಪ್ರಭಾ ಇಂದ್ರ ಅಳದಂಗಡಿ ಅವರ ನೇತೃತ್ವದಲ್ಲಿ ಸ್ಥಳ ಪುರೋಹಿತ ಶ್ರೀ ಜಿನೇಂದ್ರ ಇಂದ್ರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಭರದಿಂದ ನಡೆಯುತ್ತಿದೆ.

ಎ.9ರಂದು ಬೆಳಗ್ಗೆ ಗಂಟೆ 9ಕ್ಕೆ ಉಗ್ರಾಣ ಮುಹೂರ್ತ ನಡೆದು ,ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಭಟ್ ಪಾದಲಡ್ಕ, ಭೂಷನ್ ಕುಮಾರ್ ಮರ್ಧಾಳ ಬಸದಿ, ಜಿನಚಂದ್ರ ಶೆಟ್ಟಿ ಬಾಳ್ತಿಲ, ನೂಜಿಬಾಳ್ತಿಲ ಗ್ರಾ.ಪಂ. ಸದಸ್ಯರಾದ ವಿನಯಕುಮಾರಿ ಬಳಕ್ಕ, ಚಂದ್ರಾವತಿ ಜಾಲು, ಸಂಜೀವ ಶೆಟ್ಟಿ ಅತ್ಯಡ್ಕ ಹೊಸಮಠ ಉಪಸ್ಥಿತರಿರಲಿದ್ದಾರೆ. ಬಳಿಕ ಕಾರ್ಯಲಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕೇಪು ಶ್ರೀ ಲಕ್ಷ್ಮೀ ಜನಾರ್ಧನ ಆಂಜನೇಯ ಕ್ಷೇತ್ರದ ಅಧ್ಯಕ್ಷ ಶಿವರಾಮ ಶೆಟ್ಟಿ, ನೂಜಿಬಾಳ್ತಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಗುರುವ, ಬಾಬು ಗೌಡ ಕುಕ್ಕುತ್ತಡಿ, ಅಚ್ಚತ್ತ ಪಾಡ್ಲ, ದೇಜಪ್ಪ ಪೂಜಾರಿ ಕಂಪ, ಸದಾನಂದ ಗೌಡ ಸಾಂತ್ಯಡ್ಕ, ಭಾಸ್ಕರ ಗೌಡ ಎಳುವಾಲೆ, ಕೆಂಚಪ್ಪ ಗೌಡ ಕೆರ್ನಡ್ಕ ಉಪಸ್ಥಿತರಿರಲಿದ್ದಾರೆ.

ಸಂಜೆ ಗಂಟೆ 3ಕ್ಕೆ ಕ್ಷೇತ್ರಕ್ಕೆ ಪುರೋಹಿತರ ಆಗಮನ, ಗಂಟೆ 4ಕ್ಕೆ ದೇವತಾ ಪ್ರಾರ್ಥನೆ ತೋರಣ ಮುಹೂರ್ತ, ಪ್ರಕಾರ ಶುದ್ಧಿ, ವಾಸ್ತು ರಕ್ಷೆ, ನವಗ್ರಹರಕ್ಷೊಗ್ನಹೋಮ, ಪ್ರಕಾರಬಲಿ, ಆದಿವಾಸ ನಡೆಯಲಿದೆ. ಎ.10ರಂದು ಬೆಳಗ್ಗೆ ಗಂಟೆ 9.21ರ ವೃಷಭ ಲಗ್ನದಲ್ಲಿ ಶ್ರೀನಾಗಬ್ರಹ್ಮದೇವರ ಪ್ರತಿಷ್ಠೆ, ನವಕಲಶಾಭಿಷೇಕ, ಪ್ರತಿಷ್ಠಾಹೋಮ, ಆಶ್ಲೇಷಬಲಿ, ಪ್ರಸನ್ನ ಪೂಜೆ, ಮಹಾಪೂಜೆ, ವಟು ಆರಾಧನೆ, ಪ್ರಸಾದ ವಿತರಣೆ ನಡೆಯಲಿದೆ. ಮದ್ಯಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಎ.11ರಂದು ಬೆಳಗ್ಗೆ ಗಂಟೆ 11.45ರ ಮಿಥುನ ಲಗ್ನದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ದೈವ ಶ್ರೀ ಪಾಲೆಶ್ರೀ ಮತ್ತು ಬ್ರಹ್ಮ ದೈವಗಳಿಗೆ ನೂತನವಾಗಿ ನಿರ್ಮಿಸಿರುವ ಶಿಲಾಮಯ ಗುಡಿಯಲ್ಲಿ ಪ್ರಕಾರಶುದ್ಧಿ, ವಾಸ್ತುರಕ್ಷೆ, ರಕ್ಷೋಘ್ನಹೋಮ, ಪ್ರಕಾರಬಲಿ, ಕೇತ್ರದಲ್ಲಿರುವ ಶ್ರೀ ಪಿಲಿಚಾಮುಂಡಿ, ಶ್ರೀ ಉಳ್ಳಾಕುಲು ಶ್ರೀ ಗುಳಿಗ ದೈವಗಳ ಪ್ರತಿಷ್ಠಾ ಕಾರ್ಯ ಹಾಗೂ ನವಕ ಪ್ರಧಾನ, ಪ್ರತಿಷ್ಠಾಹೋಮ, ಶಿಖರ ಸ್ಥಾಪನೆ, ತಂಬಿಲ ಸೇವೆ ನಡೆಯಲಿದೆ.

ಧಾರ್ಮಿಕ ಸಭೆ

ಎ.11ರಂದು ಪೂರ್ವಾಹ್ನ ಗಂಟೆ 11.30ಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಇಚ್ಲಂಪಾಡಿ ಬೀಡಿನ ಉದ್ಯಪ್ಪ ಅರಸರಾದ ಶುಭಾಕರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಶುಭಾರ್ಶೀವಾದ ನೀಡಲಿದ್ದಾರೆ. ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಅಧ್ಯಕ್ಷ ಮೃತ್ಯುಂಜಯ ಬಿಢೆ ಕೆರೆತೋಟ, ಮಹಾವೀರ ಜೈನ್ ಡೆಪ್ಪುಣಿಗುತ್ತು, ರಾಜೇಂದ್ರ ಕುಮಾರ್ ಆಳ್ವ ಪೊಯ್ಯದಡ್ಡ ಮರ್ದಾಳ, ಪ್ರಕಾಶ್ಚಂದ್ರ ರೈ ಮರ್ಧಾಳ ಬೀಡು, ಡಾ|ರವೀಂದ್ರ ಪಡ್ಡಾಯೂರು ಗುತ್ತು, ಯುವರಾಜ ಬಲ್ಲಾಳ್ ಇಚ್ಲಂಪಾಡಿ ಗುತ್ತು, ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷೆ ಗಂಗಮ್ಮ, ಸಮಂತ್ ನೆಲ್ಯಾಡಿ ಬಸದಿ, ನೂಜಿಬಾಳ್ತಿಲ ಬೆಥನಿ ಹೈಸ್ಕೂಲ್ ಮುಖ್ಯಗುರು ಸುಬ್ರಹ್ಮಣ್ಯ ಭಟ್, ಅನೂಪ್ ಕುಮಾರ್ ಮರ್ಧಾಳ ಬೀಡು, ಅಶೋಕ್ ಜೈನ್ ನೂಜಿಗುತ್ತು, ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಪ್ರಧಾನ ಪರಿಚಾರಕ ವಿಜಯಕುಮಾರ್ ಕೇಪುಂಜ ಉಪಸ್ಥಿತರಿರಲಿದ್ದಾರೆ. ಮದ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಎ.11ರ ರಾತ್ರಿ ಗಂಟೆ 7ರಿಂದ ನೂಜಿಬಾಳ್ತಿಲ ಸ.ಉ.ಹಿ.ಪ್ರಾ.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 9ಕ್ಕೆ ಭಂಡಾರ ತೆಗೆದು ಬಳಿಕ ದೈವಗಳ ನೇಮ ನಡೆಯಲಿದೆ. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಪ್ರತಿಷ್ಠಾ ಕಾರ್ಯಕ್ರಮ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಸಮಿಯವರು, ಗ್ರಾಮಸ್ಥರು, ಊರವರು, ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಅಭಿವೃದ್ಧಿ ಕೆಲಸ, ಪೂರ್ವಭಾವಿ ಕೆಲಸಗಳು ಭರದಿಂದ ನಡೆಯುತ್ತಿದೆ. ಪ್ರತಿನಿತ್ಯ ಶ್ರಮದಾನದ ಮೂಲಕ ಭಕ್ತರು ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಪಾಲೆತ್ತಡಿ ಬೈಲಿನಲ್ಲಿರುವ ವನ (ಬನ) ಆಧಾರಿತ ಪವಿತ್ರ ಸ್ಥಳವೊಂದಿದ್ದು ಇದರ ಇತಿಹಾಸವನ್ನು ಅಷ್ಟ ಮಂಗಲ ಪ್ರಶ್ನೆಯಲ್ಲಿ ಚಿಂತಿಸಿ ತಿಳಿದ ಪ್ರಕಾರ ಪುರಾತನ ಕಾಲದಲ್ಲಿ ಘೋರ (ಬೃಹತ್) ವನವಾಗಿದ್ದ ಪಾಲೆತ್ತಡಿ ಎಂಬ ಸ್ಥಳದಲ್ಲಿ ಪಾಲೆ ಮರದಲ್ಲಿ ಇದ್ದಿರುವುದೂ ಈ ಭಾಗದಲ್ಲಿ ಹೋಗುವವರನ್ನೂ ಕಾಣಲು ಸುಂದರಿಯಾದ ಸ್ತ್ರೀ ಸ್ವರೂಪದ ವೇಷ ಧರಿಸಿ ವಶೀಕರಣದ ರೀತಿಯಲ್ಲಿ ಪಾಲೆ (ಹಾಲೆ) ಮರದಡಿಗೆ ಎಳೆದು ತಂದು ಕೊಲೆ ಮಾಡಿ ರಕ್ತ ಮಾಂಸವನ್ನು ಭೋಜಿಸಿ ಈ ಪಾಲೆಮರದಲ್ಲಿ ವಾಸ್ತವ್ಯವಿದ್ದ ಕಾಲಘಟ್ಟವು ಸುಮಾರು 875 ವರ್ಷಕ್ಕಿಂತ ಹಿಂದೆ ಉತ್ತರ ಭಾಗದಿಂದ ದಕ್ಷಿಣ ಭಾಗಕ್ಕೆ ಸಂಚಾರಕ್ಕೆ ಇಳಿದ ಸಿದ್ದರೂ ಮಾಂತ್ರಿಕರೂ ಆದ ಬ್ರಾಹ್ಮಣ ಶ್ರೇಷ್ಠರಾದ ಮಹಾಪುರುಷರೊಬ್ಬರು ಈ ವನದ ಭಾಗಕ್ಕೆ ಸಂಚಾರ ಬೆಳೆಸಿದ ಸಂದರ್ಭದಲ್ಲಿ ಪಾಲೆಮರದ ಹತ್ತಿರ ತಲುಪುವ ಸಂದರ್ಭದಲ್ಲಿ ಯಕ್ಷಿ ಸುಂದರಿಯಾದ ಸ್ತ್ರೀ ವೇಷದಲ್ಲಿ ಬ್ರಾಹ್ಮಣನ ಸಮೀಪಿಸಿ ತಾಂಬೂಲ ಕೇಳಿದ್ದು ರಾತ್ರಿ ಕಾಲದಲ್ಲಿ ಸ್ತ್ರೀಯನ್ನು ಕಂಡ ಈ ಬ್ರಾಹ್ಮಣನಿಗೆ ಸಂಶಯವಾಗಿ ಚೂರಿಯಲ್ಲಿ ಸುಣ್ಣ ಕೊಟ್ಟರು. ಇದನ್ನು ಸ್ಪರ್ಷಿಸಲು ಸಾಧ್ಯವಾಗದ ಯಕ್ಷಿ ಕೋಪಿಷ್ಟೆಯಾದಳು.

ಇದನ್ನು ಅರಿತ ಬ್ರಾಹ್ಮಣ ತನ್ನ ಮಂತ್ರ ಶಕ್ತಿಯಲ್ಲಿ ಯಕ್ಷಿಯನ್ನು ಸ್ತ್ರೀಯಾಗಿ ಬದಲಾಯಿಸಿದರು. ಈ ಸಂದರ್ಭದಲ್ಲಿ ಸ್ತ್ರೀಯ ಹಣೆಗೆ ಕಬ್ಬಿಣದ ಆಣಿಯನ್ನು ಹೊಡೆದು ಸನಿಹದಲ್ಲಿ “ಪಾಲೆತ್ತಡಿ” ಎಂಬ ಆರೂಢದಲ್ಲಿ ಕೊಂಡು ಹೋಗಿ ಸ್ತ್ರೀಯನ್ನು ಅಲ್ಲಿದ್ದಂತಹ ಅಜ್ಜಿಗೆ ಒಪ್ಪಿಸಿ ನಾನು ಹಿಂತಿರುಗಿ ಬರುವವರೆಗೆ ಇವಳನ್ನು ಇಲ್ಲಿ ಸಂರಕ್ಷಿಸಬೇಕೆಂದು ಕೇಳಿಕೊಂಡರು. ಬ್ರಾಹ್ಮಣರು ದೇಶ ಸಂಚಾರಕ್ಕೆ ಹೊರಟರು. ಕೆಲವು ವರ್ಷಗಳು ಕಳೆದು ಒಂದು ದಿನ ಅಜ್ಜಿಯ ತೊಡೆಯಲ್ಲಿ ಮಲಗಿಸಿ ತಲೆಬಾಚುವ ಸಂದರ್ಭದಲ್ಲಿ ಅಜ್ಜಿಯು ಆ ಸ್ತ್ರೀಯ ತಲೆಯಲ್ಲಿದ್ದ ಆಣಿಯನ್ನು ತೆಗೆದರು. ಈ ಆಣಿಯು ಬ್ರಾಹ್ಮಣ ಮಂತ್ರಿಸಿ ಹೊಡೆದದ್ದು ಎಂಬುದು ತಿಳಿದಿರಲಿಲ್ಲ. ಈ ಪರಿಣಾಮ ಸ್ತ್ರೀ ಪೂರ್ವ ಸ್ಥಿತಿಯಲ್ಲಿ ರೂಪವನ್ನು ತಾಳಿ ವಾಸಸ್ಥಾನವಾದ ಪಾಲೆಮರದಡಿಯಲ್ಲಿ ನೆಲೆ ನಿಂತಿತು. ಹಿಂದಿನ ಹಾಗೆಯೇ ಜನರಿಗೆ ತೊಂದರೆ ಕೊಡಲು ಪ್ರಾರಂಭಿಸಿತು.

ಸುಮಾರು 12 ವರ್ಷಗಳ ನಂತರ ಹಿಂತಿರುಗಿ ಬಂದ ಮಾಂತ್ರಿಕರಾದ ಬ್ರಾಹ್ಮಣರು ಸ್ತ್ರೀಯನ್ನು ಕೇಳಿದಾಗ ನಡೆದಂತಹ ಘಟನೆಯನ್ನು ಆರೂಢದ ಮನೆಯವರಾದ ಪಾಲೆತ್ತಡಿ ಮನೆಯ ಹಿರಿಯ ಅಜ್ಜಿ ವಿಷಯ ತಿಳಿಸಿದರು. ಈ ಸಂದರ್ಭದಲ್ಲಿ ಪಾಲೆಮರದಡಿಯಲ್ಲಿ ಹೋಮ ನಡೆಸಿ ಯಕ್ಷಿಯನ್ನು ಆಹ್ವಾನಿಸಿ ಹೋಮಾಗ್ನಿಯಲ್ಲಿ ಶಮನಗೊಳಿಸಿ ಪಾಲೆಶ್ರೀ ಎಂಬ ದೇವಿಯನ್ನಾಗಿ ಚೈತನ್ಯಗೊಳಿಸಲಾಯಿತು. ಯಕ್ಷಿಯ ಕೋಪಾಗ್ನಿಯಲ್ಲಿ ದಹಿಸಿದ ಬ್ರಾಹ್ಮಣ ಶ್ರೇಷ್ಠ ಬ್ರಾಹ್ಮಣ ಭೂತ (ಬಟ್ರು ಭೂತ)ವಾಗಿ ಬದಲಾವಣೆಯಾಯಿತು. ಈ ಸ್ಥಳದ 2 ಶಕ್ತಿಗಳನ್ನು ಈ ಭಾಗದ ಜೈನ ರಾಜವಂಶಸ್ಥರು ಪುರೋಹಿತರ ಮುಖೇನ ಆರಾಧಿಸಿದರು. ಪ್ರಥಮವಾಗಿ ಯಕ್ಷಿಯನ್ನು ತಂದು ಆರೈಕೆ ಮಾಡಿದ ಮನೆಯವರಾದ ಪಾಲೆತ್ತಡಿ ತರವಾಡು ಮನೆಯಲ್ಲಿ ಶ್ರೀ ಪಾಲೆಶ್ರೀ ಅಮ್ಮನನ್ನು ಮತ್ತು ಭಟ್ರು ದೈವವನ್ನು ಆರಾಧಿಸಿದರು.

ಕಾಲಾಂತರದಲ್ಲಿ ಜೈನ ರಾಜರಿಂದ ಸ್ಥಳವು ಅನ್ಯರ ಪಾಲಾಯಿತು. ನಂತರ ಈ ಪಾಲೆಮರದ ಪಕ್ಕದ ಆರಾಧನೆಗೆ ಅಡ್ಡಿ ಬಂತು. ಇದರಿಂದಾಗಿ ಊರಿಗೆ ಆಪತ್ತು ಸಂಭವಿಸಲು ಕಾರಣವಾಯಿತು. ಈ ಬಗ್ಗೆ ಊರ ಹತ್ತು ಸಮಸ್ತರು ಸೇರಿ ದೈವಜ್ಞರ ಮುಖೇನ ಪ್ರಶ್ನೆ ಚಿಂತನೆ ನಡೆಸಿ ಪರಿಹಾರ ನಡೆಸಲು ಯೋಚಿಸಲಾಗಿ ಅಷ್ಟಮಂಗಳದಲ್ಲಿ ವಿಮರ್ಶಿಸಿ ಕಂಡು ಬಂದಂತೆ ಪರಿವಾರ ದೈವಗಳಾಗಿ ಉಳ್ಳಾಕುಲು, ಪಿಲಿಚಾಮುಂಡಿ, ಗುಳಿಗ ಹಾಗೂ ನಾಗಬ್ರಹ್ಮ ಈ ಸಾನಿಧ್ಯಗಳನ್ನು ಸಂಕಲ್ಪಿಸಿ ಕಟ್ಟೆ ನಿರ್ಮಿಸಿ ಆರಾಧಿಸಬೇಕೆಂದು ಕಂಡು ಬಂದಿದೆ. ಪ್ರಧಾನ ದೈವವಾಗಿ ಶ್ರೀ ಪಾಲೆಶ್ರೀ ಅಮ್ಮನೆಂದು ಇದರೊಟ್ಟಿಗೆ ಭಟ್ರು ದೈವವನ್ನು ಚಾವಡಿ ನಿರ್ಮಿಸಿ ಮಂಚಮದಲ್ಲಿ ಸ್ಥಾಪನೆ ಮಾಡಲು ಸೂಚಿಸಲಾಗಿದೆ

ನೇಸರ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ🙏

👇👇👇👇👇

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ದೇವಿ ಮಹಾತ್ಮೆ

—ಜಾಹೀರಾತು—

Leave a Reply

error: Content is protected !!