ನೇಸರ ಎ.10: ಸರಕಾರ ಮಾಜಿ ಸೈನಿಕರಿಗೆ ಮಂಜೂರು ಮಾಡಿ ಹಕ್ಕು ಪತ್ರ ನೀಡಿದ ಜಾಗಕ್ಕೆ ಮಾಜಿ ಸೈನಿಕರು ಬೇಲಿ ಹಾಕಲು ಹೊರಟರೆ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಭಾನುವಾರ ಬೇಲಿ ತೆರವು ಮಾಡಲು ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಲ್ಲೇ ಠಿಕಾಣಿ ಹೂಡಿ ಮಾಜಿ ಸೈನಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ನಿವೃತ್ತ ಸೈನಿಕರಿಗೆ ಆಲಂಕಾರಿನಲ್ಲಿ ಖಾದಿರಿಸಲಾಗಿದ್ದ ಭೂಮಿಯನ್ನು 12 ಮಂದಿ ನಿವೃತ್ತ ಸೈನಿಕರಿಗೆ ಕಂದಾಯ ಇಲಾಖೆಯಿಂದ ನೀಡಿ, ಸರ್ವೆ ಇಲಾಖೆಯಿಂದ ಗಡಿ ಗುರುತು ಮಾಡಿದ ಬಳಿಕ ಮಾಜಿ ಸೈನಿಕರು ಗಡಿ ಗುರುತು ಮಾಡಲಾದ ಜಾಗದಲ್ಲಿ ಬೇಲಿ ನಿರ್ಮಾಣ ಮಾಡಿದ್ದು, ಇದೀಗ ಅರಣ್ಯ ಇಲಾಖೆಯವರು ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಬೇಲಿ ಹಾಕುವ ಕೆಲಸಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸೈನಿಕರು ಹಾಗೂ ಅರಣ್ಯಾಧಿಕಾರಿಯವರ ಮಧ್ಯೆ ಮಾತಿನ ಚಕಮುಖಿ ಕೂಡಾ ನಡೆಯಿತು. ಮಾಜಿ ಸೈನಿಕರು ತಮ್ಮ ಹಕ್ಕು ಪತ್ರ ತೋರಿಸಿ, ನಿಮ್ಮ ದಾಖಲೆ ತೋರಿಸಿ ಎಂದರೆ ಮರುತ್ತರ ನೀಡದೆ ಕೇವಲ ದರ್ಪ ಮೆರೆದ್ದಾರೆ ಎಂದು ಮಾಜಿ ಸೈನಿಕರು ಆರೋಪಿಸಿದ್ದಾರೆ. ಸೋಮವಾರ ಕಡಬ ತಹಸೀಲ್ದಾರ್ ಕಛೇರಿಯಲ್ಲಿ ಎರಡು ತಂಡಗಳ ಮಧ್ಯೆ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಕಂದಾಯ ಇಲಾಖೆಯ ಐತ್ತೂರು ಗ್ರಾಮ ವಾಸ್ತವ್ಯದಲ್ಲಿ 12 ಮಂದಿ ಮಾಜಿ ಸೈನಿಕ ಫಲಾನುಭವಿಗಳಿಗೆ ಸಚಿವ ಎಸ್. ಅಂಗಾರ ಅವರು ಹಕ್ಕು ಪತ್ರ ಹಸ್ತಾಂತರ ಮಾಡಿದ್ದರು. ಬಳಿಕ ಈ ಜಾಗದ ಗಡಿ ಗುರುತು ಕೂಡ ಮಾಡಲಾಗಿತ್ತು, ಈ ಹಿನ್ನಲೆಯಲ್ಲಿ ಮಾಜಿ ಸೈನಿಕರು ತಮಗೆ ನೀಡಲಾದ ಜಾಗಕ್ಕೆ ಬೇಲಿ ಹಾಕುವ ಕಾಮಗಾರಿ ಪ್ರಾರಂಭಿಸಿದ್ದರು.
ಅರಣ್ಯ ಇಲಾಖೆ ಈ ಜಾಗವು ಮೀಸಲು ಅರಣ್ಯ ಪ್ರದೇಶವಾಗಿದ್ದು ಇದನ್ನು ಕೆ.ಸಿ.ಡಿ.ಸಿ.ಯವರಿಗೆ ಗೇರು ಅಭಿವೃದ್ದಿಗೆ ನೀಡಲಾಗಿದೆ. ಇಲ್ಲಿ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಯ ಗಮನಕ್ಕೆ ತಾರದೆ ಮಾಜಿ ಸೈನಿಕರಿಗೆ ನಿವೇಶನ ಖಾದಿರಿಸಲಾಗಿದೆ ಎಂದು ವಾದಿಸುತ್ತಿದೆ.
ಭಾನುವಾರ ಸ್ಥಳಕ್ಕೆ ಉಪವಲಯರಣ್ಯಾಧಿಕಾರಿಗಳಾದ ಸಂತೋಷ್, ಅಜಿತ್, ಜಯಕುಮಾರ್, ಕೆ.ಸಿ.ಡಿ.ಸಿ. ಅಧೀಕ್ಷಕ ರವಿ ಪ್ರಸಾದ್, ಸಿಬ್ಬಂದಿಗಳಾದ ಸುರೇಶ್ ಕುಮಾರ್, ಶೇಖರ ಪೂಜಾರಿ, ಅರಣ್ಯ ಪಾಲಕರಾದ ಸುಬ್ರಹ್ಮಣ್ಯ, ಮಹೇಶ್,ಬಾಲಚಂದ್ರ ಮಾಜಿ ಸೈನಿಕರಾದ ಹರೀಶ್.ಯು, ವಿಶ್ವನಾಥ ಪಿ, ರವಿಚಂದ್ರ, ಶಿವಪ್ಪ ಗೌಡ, ಸುರೇಂದ್ರ ಕುಮಾರ್, ಶೇಷಪ್ಪ ಗೌಡ, ಚೆನ್ನಪ್ಪ ಗೌಡ ಮೊದಲಾದವರು ಸ್ಥಳದಲ್ಲಿದ್ದು ಬೇಲಿ ನಿರ್ಮಾಣ ಮಾಡಲು ಅವಕಾಶ ನೀಡಲಿಲ್ಲ. ಕಂದಾಯ ಇಲಾಖೆ ನೀಡಿದರೂ ಅರಣ್ಯ ಇಲಾಖೆಯಿಂದ ಅಡ್ಡಿ-ಆರೋಪ.
ಮಾಜಿ ಸೈನಿಕರ ನಿರಂತರ ಹೋರಾಟದ ಬಳಿಕ 12 ಜನ ಮಾಜಿ ಸೈನಿಕರಿಗೆ 50 ಸೆಂಟ್ಸ್ ನಂತೆ ವಿಂಗಡಿಸಿ ಕಂದಾಯ ಇಲಾಖೆ ಮಾಜಿ ಸೈನಿಕರಿಗೆ ಹಕ್ಕು ಪತ್ರ ನೀಡಿ, ಪಹಣಿ ಪತ್ರ ಕೂಡ ದಾಖಲು ಮಾಡಲಾಗಿದೆ. ಇದೀಗ ಅರಣ್ಯ ಇಲಾಖೆಯವರ ಆಕ್ಷೇಪದಿಂದ ಮಾಜಿ ಸೈನಿಕರು ಹಕ್ಕುಪತ್ರ ಇದ್ದರೂ ಜಾಗ ಕೈಗೆ ಸಿಗದೆ ಕಂಗಲಾಗಿದ್ದೇವೆ ಎಂದು ಮಾಜಿ ಸೈನಿಕರು ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಡಬ ತಾಲೂಕಿನ ಆಲಂಕಾರು ಗ್ರಾಮದ ನೆಕ್ಕಿಲಾಡಿ ಸಮೀಪ ಇರುವ ಸ.ನಂ 215 ರಲ್ಲಿ ಒಟ್ಟು 9.55 ಎಕ್ರೆ ಸರಕಾರಿ ಜಾಗವಿದೆ, ಇದರಲ್ಲಿ 0.05 ಸೆಂಟ್ಸ್ ಜಾಗ ಅರಣ್ಯಕ್ಕೆ ಸಂಬಂಧಿಸಿದೆ. ಈ ಜಾಗವನ್ನು ಬಿಟ್ಟು, ಹತ್ತಿರದಲ್ಲೇ ಹೋಗುವ ಎರಡು ರಸ್ತೆ ಕೂಡಾ ಇದೇ 9.55 ಎಕ್ರೆಯಲಿದ್ದು ಅದನ್ನೂ ಹೊರತು ಪಡಿಸಿ, ಉಳಿದಂತೆ ಈಗಾಗಲೇ ಮಂಜೂರು ಮಾಡಿದ ಜಾಗದ ಮಧ್ಯೆ ಒಂದು ರಸ್ತೆಗೆ ಜಾಗವನ್ನು ಬಿಟ್ಟು ಉಳಿದ ಆರು ಎಕ್ರೆ ಜಾಗದಲ್ಲಿ 12 ಜನ ಮಾಜಿ ಸೈನಿಕರಿಗೆ ತಲಾ 0.50 ಸೆಂಟ್ಸ್ ನಂತೆ ಹಂಚಿಕೆ ಮಾಡಿ ಜಿಲ್ಲಾಧಿಕಾರಿಗಳ ಆದೇಶದಂತೆ ಜಾಗ ಮಂಜೂರು ಮಾಡಲಾಗಿದೆ.
ಇಲಾಖೆಯಿಂದಲೇ ಜಾಗ ಮಂಜೂರು ಮಾಡಿ ಹಕ್ಕು ಪತ್ರ ನೀಡಿ, ಬಳಿಕ ಸರಕಾರಿ ಸರ್ವೆಯರ್ ನಿಂದ ಗಡಿ ಗುರುತು ಮಾಡಿ ಫಲಾನುಭವಿಗಳಿಗೆ ನೀಡಿದ ಬಳಿಕ 12 ಜನ ಮಾಜಿ ಮಾಜಿ ಸೈನಿಕರು ಜಾಗಕ್ಕೆ ಬೇಲಿ ನಿರ್ಮಾಣ ಮಾಡಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಮಧ್ಯಪ್ರವೇಶಿಸಿ ಜಾಗ ಅರಣ್ಯ ಇಲಾಖೆದ್ದು ಎಂದು ಹೇಳಿದರೆ ಫಲಾನುಭವಿಗಳು ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರಿಸಬೇಕಾಗಿದೆ.
ಜಾಗ ಮಂಜೂರು ಮಾಡುವ ಮೊದಲೇ ಕಂದಾಯ ಹಾಗೂ ಅರಣ್ಯ ಇಲಾಖೆ ಒಟ್ಟಿಗೆ ಸೇರಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು, ಇದೀಗ ಕಂದಾಯ ಇಲಾಖೆ ಸರಕಾರಿ ಜಾಗ ಮಾಜಿ ಸೈನಿಕರಿಗೆ ಮೀಸಲು ಇಡಲಾಗಿದೆ ಎಂದರೆ, ಅರಣ್ಯ ಇಲಾಖೆ ಜಾಗ ನಮ್ಮದು ಎಂದು ಹೇಳುತ್ತಿರುವುದು ಒಟ್ಟು ಇಲಾಖೆಗಳ ನಡುವಿನ ಗೊಂದಲಕ್ಕೆ ಫಲಾನುಭವಿಗಳು ಪರದಾಡುವಂತಾಗಿದೆ.
—ಜಾಹೀರಾತು—