ಸಚಿ​ವ ಸ್ಥಾನಕ್ಕೆ ಕೆ. ಎಸ್. ಈಶ್ವರಪ್ಪ ರಾಜೀನಾಮೆ ಘೋಷಣೆ..!

ಶೇರ್ ಮಾಡಿ

ನೇಸರ ಎ.14: ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣ ಕೊನೆಗೂ ಕೆ.ಎಸ್​.ಈಶ್ವರಪ್ಪ ಅವರ ಮಂತ್ರಿ ಸ್ಥಾನ ಕಸಿದಿದೆ. ನನ್ನ ಸಾವಿಗೆ ಈಶ್ವರಪ್ಪ ಕಾರಣ. 40% ಕಮಿಷನ್​ ಕೊಡುವಂತೆ ಒತ್ತಾಯಿಸಿದ್ದರು ಎಂದು ನೇರ ಆರೋಪ ಮಾಡಿದ್ದ ಸಂತೋಷ್​ ಮಂಗಳವಾರ ಬೆಳಗ್ಗೆ ಉಡುಪಿಯ ಲಾಡ್ಜ್​ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು.
ಇದಕ್ಕೂ ಮುನ್ನ ವಾಟ್ಸ್ಆ್ಯಪ್​ ಮೂಲಕ ಮಾಧ್ಯಮದವರಿಗೆ ಸಂದೇಶ ರವಾನಿಸಿದ್ದ ಸಂತೋಷ್​, ತಾನು ಸಾಯುತ್ತಿರುವುದಾಗಿ ಹಾಗೂ ಇದಕ್ಕೆ ಈಶ್ವರಪ್ಪ ಕಾರಣ ಎಂದೂ ದೂರಿದ್ದರು. ಆದರೆ ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದ ಈಶ್ವರಪ್ಪ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ನಾನು ಯಾವ ತಪ್ಪನ್ನೂ ಮಾಡಿಲ್ಲ ಎಂದಿದ್ದರು.
ಸಂತೋಷ್​ ಆತ್ಮಹತ್ಯೆ ಪ್ರಕರಣ ರಾಜ್ಯಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈಶ್ವರಪ್ಪನನ್ನು ಬಂಧಿಸಬೇಕು, ಮೃತನ ಕುಟುಂಬಕ್ಕೆ ಸರ್ಕಾರ 1 ಕೋಟಿ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್​ ನಾಯಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರು. ಇಂದೂ ಕೂಡ ಸಂತೋಷ್ ಶವ ಇಟ್ಟುಕೊಂಡು ಕಾಂಗ್ರೆಸ್​ ಪ್ರತಿಭಟನೆ ನಡೆಸಿತ್ತು. ಬೆಂಗಳೂರಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದ ತಂಡ, ವಿಧಾನಸೌಧ ಆವರಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿತ್ತು. ಇಷ್ಟಲ್ಲಾ ಬೆಳವಣಿಗೆ ಬಳಿಕ ಕೊನೆಗೂ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದಾರೆ.

—ಜಾಹೀರಾತು—

Leave a Reply

error: Content is protected !!