ನೇಸರ ಜೂ.13: ಕಡಬ ತಾಲೂಕಿನ ಬಲ್ಯ ಗ್ರಾಮದ ಕೇರ್ಪುಡೆ, ಏನಡ್ಕ, ಕೆರನಡ್ಕ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಏನಡ್ಕ ಸಮೀಪ ಅನಗತ್ಯವಾಗಿ ಮೊರಿ ನಿರ್ಮಿಸಿ ಜನರಿಗೆ ತೊಂದರೆ ನೀಡಲಾಗಿದೆ ಎಂದು ಆರೋಪಿಸಿ ಬಲ್ಯ ಗ್ರಾಮಸ್ಥರು ಕಡಬ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ಉಪ್ಪಿನಂಗಡಿ-ಕಡಬ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ ಸುಮಾರು 350 ಮೀಟರ್ ದೂರದ ಏನಡ್ಕ ಸಮೀಪ ಅವಶ್ಯಕತೆಯೇ ಇಲ್ಲದ ಜಾಗಕ್ಕೆ ಮೋರಿ ನಿರ್ಮಾಣ ಮಾಡಿರುವುದರಿಂದ ರಸ್ತೆಯಲ್ಲಿ ಕೆಸರು ತುಂಬಿ ಸಂಚರಿಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ತಕ್ಷಣ ಮೋರಿ ತೆರವು ಮಾಡಬೇಕು ಎಂದು ಗ್ರಾಮಸ್ಥರು ದೂರಿನಲ್ಲಿ ಮನವಿ ಮಾಡಿದ್ದಾರೆ.
ಕಾಮಗಾರಿಯನ್ನು ಎಪ್ರಿಲ್ 23 ಕ್ಕೆ ಪ್ರಾರಂಭಿಸಿದ್ದು, ಗ್ರಾಮ ಪಂಚಾಯಿತಿ ನಮ್ಮ ಬೇಡಿಕೆಯ ಕಾಮಗಾರಿಯನ್ನು ಮಾಡುವ ಬದಲು ನೀರು ಹರಿಯದ ಕಡೆ ಮೋರಿಯೊಂದನ್ನು ನಿರ್ಮಿಸಿದೆ. ಕಾಮಗಾರಿ ಬಗ್ಗೆ ಸ್ಥಳೀಯರಿಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಪಂಚಾಯಿತಿ ಅಧ್ಯಕ್ಷರಿಗೆ ಕೇಳಿದರೆ ಅಲ್ಲಿ ಕಾಮಗಾರಿ ನಿರ್ವಹಿಸಿರುವುದಕ್ಕೆ ನಾವು ಹೊಣೆಗಾರರಲ್ಲ, ಆ ವಾರ್ಡಿನ ಸದಸ್ಯರು ಹಾಗೂ ಗುತ್ತಿಗೆದಾರರೇ ಹೊಣೆಗಾರರು ಎಂದು ತಿಳಿಸಿದ್ದಾರೆ. ಕಾಮಗಾರಿಯ ಪರಿಶೀಲನೆ ಮಾಡಿ ಎಂದು ಸ್ಥಳೀಯರು ಮನವಿ ಮಾಡಿದರೂ ಪಂಚಾಯಿತಿಯಿಂದ ಯಾವುದೇ ಸ್ಪಂದನೆ ಇಲ್ಲ. ಮಾತ್ರವಲ್ಲ ಈ ಕಾಮಗಾರಿಯ ಗುಣಮಟ್ಟ ಮತ್ತು ಬಾಳ್ವಿಕೆಯ ಬಗ್ಗೆ ಅನುಮಾನವಿದೆ. ಈ ಕಾಮಗಾರಿಯಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿರುವುದರಿಂದ ತಕ್ಷಣ ಮೋರಿ ತೆರವು ಮಾಡಬೇಕು ಎಂದು ದೂರಿನಲ್ಲಿ ಅಗ್ರಹಿಹಿಸಲಾಗಿದೆ.
ಜಾಹೀರಾತು