ನೇಸರ ಜೂ.30: ಹಳೆ ವೈಷಮ್ಯ ಹಿನ್ನೆಲೆ ವ್ಯಕ್ತಿಯೊಬ್ಬ ಮತ್ತೊರ್ವನಿಗೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಶಿಶಿಲ ಗ್ರಾಮದ ಕಾರೆಗುಡ್ಡೆ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಶಿಶಿಲ ಗ್ರಾಮದ ಪುರುಷೋತ್ತಮ(40) ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದು, ಶಿಶಿಲದವರೇ ಆದ ಕಿರಣ್(40) ಎಂಬಾತ ಹಲ್ಲೆ ನಡೆಸಿರುವುದಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಘಟನೆಯಲ್ಲಿ ಪುರುಷೋತ್ತಮನ ತಲೆಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಖಾಸಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿರಣ್ ಹಾಗೂ ಪುರುಷೋತ್ತಮ ಹಳೆ ಸ್ನೇಹಿತರಾಗಿದ್ದು, ಕೆಲ ವರ್ಷಗಳ ಹಿಂದೆ ಕಾರಣಾಂತರಗಳಿಂದ ಬೇರೆ ಬೇರೆಯಾಗಿದ್ದರು. ಎರಡು ವಾರಗಳ ಹಿಂದೆ ಶಿಶಿಲ ಪೇಟೆಯ ಮಧ್ಯಭಾಗದಲ್ಲಿ ಇಬ್ಬರು ಕೈಕೈ ಮಿಲಾಯಿಸಿಕೊಂಡಿದ್ದು, ನೆರೆದಿರುವ ನೂರಾರು ಗ್ರಾಮಸ್ಥರು ಇದಕ್ಕೆ ಸಾಕ್ಷಿಯಾಗಿದ್ದರು. ಕಿರಣ್ ಮತ್ತು ಪುರುಷೋತ್ತಮ ಮಧ್ಯೆ ಆಗಾಗ್ಗೆ ಜಗಳಗಳು ನಡೆಯುತ್ತಲೇ ಇದ್ದವು.
ಘಟನೆಗೆ ಪೊಲೀಸ್ ಇಲಾಖೆಯೇ ನೇರ ಹೊಣೆ: ಗ್ರಾಮಸ್ಥರ ಆರೋಪ
ಶಿಶಿಲದಲ್ಲಿ ಈ ರೀತಿಯ ಹಲ್ಲೆಗಳು ಹೊಸತೇನಲ್ಲ. ಕಳೆದೊಂದು ವರ್ಷಗಳಿಂದ ಈ ಪ್ರದೇಶದಲ್ಲಿ ಇವರಿಬ್ಬರೂ ಪರಸ್ಪರ ಹಲ್ಲೆ ನಡೆಸುತ್ತಿದ್ದು ಪೊಲೀಸ್ ಗಮನಕ್ಕೆ ತಂದರೂ, ಇಲಾಖೆ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಶಿಶಿಲದಲ್ಲಿ ಹಲ್ಲೆ ಪ್ರಕರಣಗಳು ನಡೆಯುವ ಸಂದರ್ಭ ಪೊಲೀಸ್ ಇಲಾಖೆಗೆ ತಿಳಿಸಿದರೂ ಸ್ಥಳಕ್ಕೆ ಭೇಟಿ ನೀಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಈ ರೀತಿಯ ಪ್ರಕರಣಗಳಿಂದ ಬೇಸತ್ತ ಗ್ರಾಮಸ್ಥರು.
ಹದಿನೈದು ದಿನಗಳ ಹಿಂದೆ ಗ್ರಾಮ ಪಂಚಾಯಿತಿನಲ್ಲಿ ನಿರ್ಣಯ ಮಂಡಿಸಿ ಗೃಹ ಸಚಿವರಿಗೆ, ಪೊಲೀಸ್ ಇಲಾಖೆ ನಿರ್ಲಕ್ಷದ ಬಗ್ಗೆ ಮನವಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಅವಘಡಗಳು ಸಂಭವಿಸಿದರೆ ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ನಮೂದಿಸಿದ್ದರು. ಮನವಿ ಸ್ವೀಕೃತವಾಗಿರುವ ಬಗ್ಗೆ ಗೃಹ ಇಲಾಖೆಯಿಂದ ಸ್ವೀಕೃತಿಯು ಗ್ರಾಮಸ್ಥರಿಗೆ ದೊರೆತಿದೆ.