ನೇಸರ ಜೂ.29: ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಬಜೆಟ್ನಲ್ಲಿ ಘೋಷಣೆ ಮಾಡಿ ಅನುದಾನ ಕಾದಿರಿಸಿದ ಕೊೈಲ ಪಶುವೈದ್ಯಕೀಯ ಕಾಲೇಜಿನ ಕಟ್ಟಡ ಕಾಮಗಾರಿ ಅಂತಿಮಹಂತದಲ್ಲಿದ್ದು, ಶೀಘ್ರ ಕಾಲೇಜು ಲೋಕಾರ್ಪಣೆಯಾಗಲಿದೆ ಎಂದು ರಾಜ್ಯ ಪಶುಸಂಗೋಪನಾ ಇಲಾಖಾ ಸಚಿವ ಪ್ರಭು ಚವ್ವಾಣ್ ಹೇಳಿದರು.
ಅವರು ಬುಧವಾರ ಕೊೈಲ ಪಶು ಸಂಗೋಪನಾ ಕ್ಷೇತ್ರದಲ್ಲಿ 145 ಕೋಟಿ ರೂ ವೆಚ್ಚದಲ್ಲಿ ಅನುಷ್ಠಾನವಾಗುತ್ತಿರುವ ಪಶುವೈದ್ಯಕೀಯ ಕಾಲೇಜಿನ ಕಾಮಗಾರಿ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಲೇಜಿಗೆ ಶಂಕುಸ್ಥಾಪನೆ ನಡೆದು ಐದು ವರ್ಷಗಳಾಗುತ್ತಾ ಬಂದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಇನ್ನು ಯಾರ ಕಾಲಕ್ಕೆ ಇದರ ಅನುಷ್ಠಾನವಾಗುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ಸದಾನಂದ ಗೌಡರು ಬಜೆಟ್ನಲ್ಲಿ ಘೋಷಣೆ ಮಾಡುತ್ತಾರೆ, ಅದನ್ನು ಸಿದ್ದರಾಮಯ್ಯ ಬಂದು ಶಂಕುಸ್ಥಾಪನೆ ಮಾಡುತ್ತಾರೆ, ಕಾಮಗಾರಿ ಪೂರ್ತಿಗೊಳಿಸಲು ಮತ್ತೆ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಬರಬೇಕಾಯಿತು, ಪ್ರಭು ಚವ್ವಾಣ್ ಕಾಮಗಾರಿ ಮುಗಿಸಿಬಿಡುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಕೊೈಲ ಪಶುವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಕಳೆದ ಬಜೆಟ್ನಲ್ಲಿ ಹದಿನೆಂಟು ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದೇನೆ. ಶೀಘ್ರದಲ್ಲಿ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು. ಕಟ್ಟಡ ಕಾಮಗಾರಿಗಳು ಕಳಪೆಯಾಗಿವೆ ಎನ್ನುವ ಆರೋಪದ ಬಗ್ಗೆ ಉತ್ತರಿಸಿದ ಸಚಿವರು ಕಟ್ಟಡ ಹಸ್ತಾಂತರ ಆಗಬೇಕಾದರೆ ತಾಂತ್ರಿಕ ಪರೀಕ್ಷೆ ನಡೆಸಲಾಗುವುದು, ಕಟ್ಟಡಗಳು ಸಮರ್ಪಕವಾಗಿ ಇವೆ ಎಂದು ಖಾತರಿಯಾದ ಬಳಿಕವೇ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಎಂದು ಉತ್ತರಿಸಿದರು.
ಸಚಿವರೊಂದಿಗೆ ಶಾಸಕ ಸಂಜೀವ ಮಠಂದೂರು, ಕಡಬ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಯಂತಿ ಆರ್ ಗೌಡ, ಕೊೈಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್, ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.