ನೇಸರ ಜು.04: ಬೆಳ್ತಂಗಡಿ ತಾಲೂಕಿನಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಸುರಿದ ಭಾರಿ ಮಳೆಗೆ ಮೃತ್ಯುಂಜಯ, ನೇತ್ರಾವತಿ, ಕಪಿಲಾ, ಸೋಮಾವತಿ, ಫಲ್ಗುಣಿ ಗಳ, ಅಣಿಯೂರು, ನೆರಿಯ ಹೊಳೆ ಹಾಗೂ ಇವುಗಳ ಸಂಪರ್ಕ ಹಳ್ಳಗಳ ನೀರಿನ ಮಟ್ಟದಲ್ಲಿ ಸೋಮವಾರ ಬೆಳಿಗ್ಗೆ ಹೆಚ್ಚಿನ ಏರಿಕೆ ಕಂಡುಬಂದಿತು. ತಗ್ಗು ಪ್ರದೇಶದ ಹಲವಾರು ತೋಟಗಳು ಜಲಾವೃತವಾದವು.
ಮಿತ್ತಬಾಗಿಲು ಗ್ರಾಮದ ನೇತ್ರಾವತಿ ನದಿಯ ಬೆಳ್ತಂಗಡಿ-ಬಂಗಾಡಿ ಸಂಪರ್ಕದ ಕೊಪ್ಪದ ಗಂಡಿ ಸೇತುವೆ, ಚಾರ್ಮಾಡಿ ಗ್ರಾಮದ ಮೃತ್ಯುಂಜಯ ನದಿಯ ಅರಣಿಪಾದೆ ಕಿರು ಸೇತುವೆಗಳ ಮೇಲ್ಭಾಗದಲ್ಲಿ ನದಿ ನೀರು ಹರಿದು ವಾಹನ ಸಂಪರ್ಕ ವ್ಯತ್ಯಯ ಉಂಟಾಯಿತು. ಹಲವಾರು ಕಿಂಡಿ ಅಣೆಕಟ್ಟುಗಳಲ್ಲಿ ಮರಮಟ್ಟು ತ್ಯಾಜ್ಯ ಸಿಲುಕಿಕೊಂಡಿದ್ದು ನದಿಗಳ ನೀರಿನ ಮಟ್ಟ ಇಳಿಕೆಯಾದ ಬಳಿಕವಷ್ಟೇ ಸಂಪೂರ್ಣ ಚಿತ್ರಣ ದೊರೆಯಲಿದೆ. ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಬೇಕಾಬಿಟ್ಟಿ ಮಳೆ ನೀರು ಹರಿದು ವಾಹನ ಸವಾರರು ಪರದಾಟ ನಡೆಸಿದರು.
ಇದು ಈ ವರ್ಷ ಮಳೆ ಆರಂಭದ ಬಳಿಕ ನದಿಗಳ ನೀರಿನ ಮಟ್ಟದ ಅತಿ ಹೆಚ್ಚಿನ ಏರಿಕೆಯಾಗಿದೆ.
ಜನರಲ್ಲಿ ಆತಂಕ:
2019ರ ನೆರೆಯ ಬಳಿಕ ಇಲ್ಲಿನ ನದಿಗಳ ನೀರಿನ ಪ್ರಮಾಣದಲ್ಲಿ ಕೊಂಚ ಏರಿಕೆಯಾದರು ನದಿ ಪ್ರದೇಶದ ಜನರು ಆತಂಕಕ್ಕೆ ಒಳಗಾಗುತ್ತಾರೆ. ತಾಲೂಕಿನ ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ದಾವರ, ಚಾರ್ಮಾಡಿ, ಮುಂಡಾಜೆ, ಕಲ್ಮಂಜ ಮೊದಲಾದ ಭಾಗಗಳಲ್ಲಿ ಸೋಮವಾರ ಬೆಳಿಗ್ಗೆ ನದಿ ನೀರು ಏರಿಕೆಯಾಗುತ್ತಿದ್ದಂತೆ ಜನರಲ್ಲಿ ಸ್ವಲ್ಪ ಮಟ್ಟಿನ ಆತಂಕ ಉಂಟಾಯಿತು. ಆದರೆ ಮಧ್ಯಾಹ್ನ 11 ಗಂಟೆ ಹೊತ್ತಿಗೆ ನೀರು ಇಳಿಯತೊಡದಿದ್ದರಿಂದ ಸಮಾಧಾನದ ವಾತಾವರಣ ಕಂಡುಬಂತು.
2019ರ ನೆರೆ ಬಳಿಕ ಇಲ್ಲಿನ ನದಿಗಳು ಪರಿಸರದಲ್ಲಿ ಮಳೆ ಇಲ್ಲದಿದ್ದರೂ ಕೆಲವೊಮ್ಮೆ ತುಂಬಿ ಹರಿಯುತ್ತವೆ. 2021ರ ಮಳೆಗಾಲದಲ್ಲಿ ಇಂತಹ ಪ್ರಸಂಗಗಳು ಅನೇಕ ಬಾರಿ ಸಂಭವಿಸಿತ್ತು.
ಶಾಲೆಗಳಿಗೆ ರಜೆ:
ಸೋಮವಾರ ಬೆಳಿಗ್ಗೆ ವಿಪರೀತ ಮಳೆ ಇದ್ದ ಕಾರಣ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ತನಕದ ಮಕ್ಕಳಿಗೆ ರಜೆ ನೀಡಲಾಗಿತ್ತು. ಕಾಲೇಜುಗಳು ಕಾರ್ಯನಿರ್ವಹಿಸಿದರು ವಿದ್ಯಾರ್ಥಿಗಳ ಸಂಖ್ಯೆ ಕೊಂಚ ಕಡಿಮೆಯಾಗಿತ್ತು.
“ತಾಲೂಕಿನ ಅಗತ್ಯ ಪ್ರದೇಶಗಳಲ್ಲಿ ಸಾಂತ್ವನ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಮಳೆ ಹಾಗೂ ನದಿಗಳ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದ ತಕ್ಷಣ ಕೇಂದ್ರಗಳ ನೋಡಲ್ ಅಧಿಕಾರಿಗಳಿಗೆ ಹಾಗೂ ತಂಡಕ್ಕೆ ಸೂಚನೆ ರವಾನಿಸಲಾಗಿದೆ. ಸಾಂತ್ವನ ಕೇಂದ್ರಗಳ ತಂಡಗಳು ಸನ್ನದ್ಧ ಸ್ಥಿತಿಯಲ್ಲಿದ್ದು ಅಗತ್ಯ ಸಂದರ್ಭ ಸಹಕಾರ ಪಡೆಯಲು ಕೋರಲಾಗಿದೆ”