- ನಾರಾಯಣ ಗುರುಗಳಿಂದಾಗಿ ಕೇರಳದಲ್ಲಿ ಹಿಂದೂ ಸಮಾಜ ಉಳಿದಿದೆ – ಸತ್ಯಜಿತ್ ಸುರತ್ಕಲ್
- ಕೇರಳ ರಾಜ್ಯ ದೇವರ ರಾಜ್ಯವಾಗಲು, ಶಿಕ್ಷಣ ಪಡೆದ ರಾಜ್ಯವಾಗಲು ಕಾರಣೀಕರ್ತರು ನಾರಾಯಣ ಗುರುಗಳು – ಮಾಜಿ ಶಾಸಕ ಕೆ.ವಸಂತ ಬಂಗೇರ
- ಪಠ್ಯದಲ್ಲಿ ಸಮಾಜಕ್ಕೆ ಯಾವುದು ಅಗತ್ಯವಿದೆಯೋ ಅದನ್ನು ಬಿಟ್ಟು ಅವರಿಗೆ ಬೇಕಾದ ಹಾಗೆ ತಿದ್ದುಪಡಿ ಮಾಡಿದ್ದಾರೆ – ಪದ್ಮರಾಜ್ ಆರ್

ನೇಸರ ಜು.04: ನಾರಾಯಣ ಗುರುಗಳಿಂದಾಗಿ ಕೇರಳದಲ್ಲಿ ಹಿಂದೂ ಸಮಾಜ ಉಳಿದಿದೆ. ಅವರಿಗೆ ಪಠ್ಯ ಪುಸ್ತಕದಲ್ಲಿ ಅವಮಾನ ಆಗಿರುವುದನ್ನು ನೋಡಿಯೂ ಸಮಸ್ತ ಹಿಂದೂ ಸಂಘಟನೆ ಸುಮ್ಮನಿರುವುದು ವಿಷಾದದ ಸಂಗತಿಯಾಗಿದೆ. ಸಮಾಜ ವಿಜ್ಞಾನ ವಿಷಯದಲ್ಲಿ ನಾರಾಯಣ ಗುರು ಪಠ್ಯ ಸೇರಿಸದಿದ್ದರೆ ಉಗ್ರ ಹೋರಾಟಕ್ಕೆ ಸಿದ್ಧರಾಗಬೇಕಾಗಿದೆ ಎಂದು ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.
ಅವರು ಸೋಮವಾರ ಬೆಳ್ತಂಗಡಿ ಬಸ್ ನಿಲ್ಲಾಣದ ಬಳಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಸಮಸ್ತ ಬಿಲ್ಲವ ಸಂಘಟನೆಗಳು ಹಾಗೂ ಗ್ರಾಮ ಸಮಿತಿಗಳ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪಠ್ಯವನ್ನು ತೆಗೆದು ಕೇವಲ 20% ರಷ್ಟು ವಿದ್ಯಾರ್ಥಿಗಳು ಓದುವ 10ನೇ ತರಗತಿಯ ಕನ್ನಡ(ಐಚ್ಛಿಕ) ಪಠ್ಯದಲ್ಲಿ ಸೇರಿಸಿ ಗುರುಗಳಿಗೆ ಮತ್ತು ಗುರುಗಳ ಅನುಯಾಯಿಗಳಿಗೆ ಅವಮಾನ ಮಾಡಿರುವುದರ ವಿರುದ್ಧ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.

‘ಪಠ್ಯ ಪುಸ್ತಕದ ವಿಚಾರದಲ್ಲಿ ಮೊದಲಿಗೆ ನಾರಾಯಣ ಗುರುಗಳ ವಿಚಾರವನ್ನು ಸೇರಿಸಬೇಕು ಎಂದು ಹೇಳಿದವರು ಬಿಲ್ಲವರು. ಆದರೆ ಪಠ್ಯ ಪುಸ್ತಕದಲ್ಲಿ ತಪ್ಪಾದ 85 ವಿಚಾರಗಳನ್ನು ಪರಿಷ್ಕರಿಸುವ ಕೆಲಸ ಮಾಡಿರುವ ಸರ್ಕಾರ ನಾರಾಯಣ ಗುರುಗಳ ವಿಚಾರದಲ್ಲಿ ಅಸಡ್ಡೆ ಭಾವನೆಯನ್ನು ಮುಂದುವರಿಸಿದೆ. ವಿಶ್ವ ಗುರುಗಳಾದ ನಾರಾಯಣ ಗುರುಗಳಿಗೆ ಆಗಿರುವ ಅವಮಾನವನ್ನು ನೋಡಿ ಇಡೀ ಹಿಂದೂ ಸಮಾಜ ಸುಮ್ಮನಿರುವುದು ನಾಚಿಕೆ ಪಡಬೇಕಾದ ವಿಚಾರ. ನಾರಾಯಣ ಗುರುಗಳ ಅವಧಿಯಲ್ಲಿ ಮೇಲ್ವರ್ಗ ಮಾಡಿರುವ ಅನ್ಯಾಯ ಅನಾಚಾರಗಳು ಮಕ್ಕಳಿಗೆ ತಿಳಿಯುವುದು ಬೇಡ ಎಂದು ರೋಹಿತ್ ಚಕ್ರತೀರ್ಥನ ಹುನ್ನಾರವಾಗಿದೆ’ ಎಂದರು.
‘ನಾರಾಯಣ ಗುರುಗಳಿಗೆ ಪದೇ ಪದೇ ಸರ್ಕಾರ ಮಾಡುತ್ತಿರುವ ಅವಮಾನದಿಂದಾಗಿ ಅವರ ಅನುಯಾಯಿಗಳಾದ ಬಿಲ್ಲವರು ಇಂದು ರಸ್ತೆಯಲ್ಲಿ ನಿಂತು ಪ್ರತಿಭಟಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೆಲವರು ವಾಟ್ಸಪ್ ಸಂದೇಶ ಹರಡಿಸುವ ಮೂಲಕ ಬಿಲ್ಲವ ಸಮಾಜವನ್ನು ಒಡೆಯುವ ಕೆಲಸವಾಗುತ್ತಿದೆ. ದುಡ್ಡು ಕೊಟ್ಟು ಸಮಾಜವನ್ನು ಮಂಗ ಮಾಡಲು ಕೆಲವು ನಾಯಕರು ಮುಂದಾಗಿದ್ದಾರೆ. ಸ್ವಾಭಿಮಾನಿ ಬಿಲ್ಲವರು ಇಂತಹ ಆಮಿಷಗಳಿಗೆ ಬಲಿಯಾಗದೆ ತಪ್ಪುಗಳಾದಾಗ ತಲೆ ಎತ್ತಿ ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಮನೋಧರ್ಮವನ್ನು ಬದುಕಿನುದ್ದಕ್ಕೂ ರೂಪಿಸಿಕೊಳ್ಳಬೇಕು’ ಎಂದರು.


ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ,ಮಾಜಿ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ‘ಕೇರಳ ರಾಜ್ಯ ದೇವರ ರಾಜ್ಯವಾಗಲು, ಶಿಕ್ಷಣ ಪಡೆದ ರಾಜ್ಯವಾಗಲು ಕಾರಣೀಕರ್ತರು ನಾರಾಯಣ ಗುರುಗಳು. ಅವರು ವಿಶ್ವ ಗುರುಗಳಾಗಿದ್ದಾರೆ. ಅಂತಹ ಗುರುಗಳಿಗೆ ಅವಮಾನಿಸುವ ಕೆಲಸವನ್ನು ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಸಂದರ್ಭ, ರಾಜ್ಯ ಸರ್ಕಾರ ಪಠ್ಯ ಪರಿಷ್ಕರಣೆ ಸಂದರ್ಭ ಮಾಡಿದೆ. ನಾರಾಯಣ ಗುರುಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಅವರ ಗೌರವವನ್ನು ಉಳಿಸಬೇಕು. ಇಲ್ಲದಿದ್ದಲ್ಲಿ 26 ಪಂಗಡಗಳು ಒಟ್ಟು ಸೇರಿಕೊಂಡು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್ ಮಾತನಾಡಿ, ‘ಪಠ್ಯದಲ್ಲಿ ಸಮಾಜಕ್ಕೆ ಯಾವುದು ಅಗತ್ಯವಿದೆಯೋ ಅದನ್ನು ಬಿಟ್ಟು ಅವರಿಗೆ ಬೇಕಾದ ಹಾಗೆ ತಿದ್ದುಪಡಿ ಮಾಡಿದ್ದಾರೆ. ನಾರಾಯಣ ಗುರುಗಳು ಹಿಂದುಳಿದ ವರ್ಗದವರಾಗಿರ ಬಹುದು. ಆದರೆ ಅವರು ಮಾಡಿರುವ ಕ್ರಾಂತಿ ಪ್ರತಿಯೊಬ್ಬರಿಗೂ ಪ್ರೇರಣಾದಾಯಕವಾಗಿರುವುದು. ಮತ್ತೆ ಪಠ್ಯದಲ್ಲಿ ನಾರಾಯಣ ಗುರುಗಳ ವಿಚಾರ ಬರುತ್ತದೆ ಎಂಬ ಭರವಸೆ ಇದೆ. ಇಲ್ಲದಿದ್ದಲ್ಲಿ ತಕ್ಕ ಹೋರಾಟ ಮುಂದಿನ ದಿನಗಳಲ್ಲಿ ನಡೆಯುವುದು ಎಂದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಮಾಜಿ ಅಧ್ಯಕ್ಷರುಗಳಾದ ಪದ್ಮನಾಭ ಮಾಣಿಂಜ, ಪಿ.ಕೆ. ರಾಜು ಪೂಜಾರಿ, ಭಗೀರಥ ಜಿ, ಯೋಗೀಶ್ ಕುಮಾರ್, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಜಿತಾ ವಿ ಬಂಗೇರ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಮಂಡಳಿಯ ರವಿ ಪೂಜಾರಿ ಚಿಲಿಂಬಿ, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ, ವೇಣೂರು ಘಟಕದ ಅಧ್ಯಕ್ಷ ಯೋಗೀಶ್ ಬಿಕ್ರೊಟ್ಟು, ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಉಪಾಧ್ಯಕ್ಷ ಹರೀಶ್ ಬೈಲಬರಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಸಂಘದ ಕೋಶಾಧಿಕಾರಿ ಅಭಿನಂದನ್ ಹರೀಶ್ ಕುಮಾರ್, ತುಳುನಾಡ ಬಿರುವೆರ್ ಅಧ್ಯಕ್ಷ ಲೋಕೇಶ್ ಕೋಡಿಕೆರೆ, ಬಿಲ್ಲವ ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ವಿವಿಧ ಗ್ರಾಮ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.
ಗುರುನಾರಾಯಣ ಸಭಾಭವನದಲ್ಲಿ ಗುರುಪೂಜೆ ಬಳಿಕ ಪ್ರತಿಭಟನೆ ನಡೆಯಿತು. ಬಳಿಕ ಮೆರವಣಿಗೆಯಲ್ಲಿ ಸಾಗಿ ತಹಶೀಲ್ದಾರರಿಗೆ ಮನವಿ ನೀಡಲಾಯಿತು.
ಸಂಘದ ಮಾಜಿ ಉಪಾಧ್ಯಕ್ಷ ಮನೋಹರ್ ಕುಮಾರ್ ಇಳಂತಿಲ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಜಯವಿಕ್ರಮ ಕಲ್ಲಾಪು ಸ್ವಾಗತಿಸಿ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಹೆಚ್ ಕುಕ್ಕೇಡಿ ವಂದಿಸಿದರು.


