ನೇಸರ ಜು.13: ಕೃಷಿ ಹಲವರಿಗೆ ಜೀವನ ಆಧಾರವಾಗಿದ್ದರೆ ಇನ್ನು ಕೆಲವರಿಗೆ ಹವ್ಯಾಸದ ಭಾಗ ಎಂದರೆ ತಪ್ಪಲ್ಲ. ಕರಾವಳಿಯ ಹಲವು ಜನರ ಬದುಕು ಕೃಷಿಯನ್ನೇ ನಂಬಿಕೊಂಡು ಮುಂದುವರಿಯುತ್ತಾ ಬರುತ್ತಿದೆ. ಸಂಪ್ರದಾಯಸ್ಥ ಕೃಷಿ ಪದ್ಧತಿಯನ್ನು ಅಳವಡಿಸುವುದರ ಜೊತೆಗೆ ಕೆಲವೊಮ್ಮೆ ಕಾಲಕ್ಕೆ ತಕ್ಕಂತೆ ಆಧುನಿಕತೆಯನ್ನು ಆಳವಡಿಕೊಳ್ಳುವ ಪ್ರಮೇಯ ಇಂದಿನ ಸ್ಥಿತಿಯಲ್ಲಿ ಅವಶ್ಯಕವಾಗಿದೆ. ಕೃಷಿ ಪದ್ಧತಿಯಲ್ಲಿ ಹೈಟೆಕ್ ಸ್ಪರ್ಶ ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ಕಾಣ ಬರುತ್ತಿದೆ. ಅಂತಹದೊಂದು ಪ್ರಯತ್ನವನ್ನು ಮಾಡಿದ್ದಾರೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಹಾರನಿವಾಸಿ ವಿನಯ್ ಹೆಚ್. ಮನೆಯಿಂದ ತೋಟಕ್ಕೆ ಹೋಗುವ ದಾರಿ ಮಧ್ಯೆ ಇರುವ ಹಳ್ಳವನ್ನು ದಾಟಲು ನವೀನ ಮಾದರಿಯ ಸೇತುವೆಯನ್ನು ಸ್ವಂತ ಖರ್ಚಿನಲ್ಲಿಯೇ ನಿರ್ಮಿಸಿಕೊಂಡಿದ್ದಾರೆ.
ಪ್ರತೀ ವರ್ಷವೂ ವಿನಯ್, ತಮ್ಮ ಮನೆಯಿಂದ ಕೃಷಿ ತೋಟಕ್ಕೆ ಹೋಗಲು ಅಡಿಕೆ ಮರದ ಸೇತುವೆಯನ್ನು ನಿರ್ಮಿಸಿಕೊಳ್ಳುತ್ತಿದ್ದರು. ಆದರೆ ವರ್ಷಂಪ್ರತಿ ಇದರ ನಿರ್ವಹಣೆ ಹಾಗೂ ಪುನರ್ ನಿರ್ಮಾಣ ಸಮಸ್ಯೆಯಾಗಿ ಕಾಡಿತು. ಹಾಗಾಗಿ ದೀರ್ಘಕಾಲದವರೆಗೆ ಬಾಳಿಕೆ ಬರುವಂತಹ ಸೇತುವೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ನೋಡಲು ಸುಂದರವಾಗಿರುವ ಈ ಸೇತುವೆಗೆ ಗ್ರಾಮಸ್ಥರಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಹೇಗಿದೆ ಈ ಸೇತುವೆ
50 ಫೀಟ್ ಉದ್ದ, 2 ಫೀಟ್ ಅಗಲವಿರುವ ಈ ಸೇತುವೆಯ ಕೆಳಭಾಗಕ್ಕೆ ಆಧಾರವಾಗಿ ಕಾಂಕ್ರೀಟಿನ 2 ಪಿಲ್ಲರ್‌ಗಳನ್ನು ಅಳವಡಿಸಲಾಗಿದೆ. ಮೇಲ್ಭಾಗಕ್ಕೆ ಎಡ ಮತ್ತು ಬಲ ಬದಿಗೆ ಕಬ್ಬಿಣದ 2 ದಪ್ಪನೆಯ ಹಾಗೂ 2 ಸಾಧಾರಣ ಆಯತಾಕೃತಿಯ ಪಟ್ಟಿ (ಸರಳು)ಗಳನ್ನು ಉದ್ದಕ್ಕೆ ವೆಲ್ಡ್ ಮಾಡಲಾಗಿದೆ. ಬಳಿಕ ಅಡ್ಡಲಾಗಿ ಅಂತರಗಳನ್ನು ಕಾಯ್ದುಕೊಂಡು ಕಬ್ಬಿಣದ ಪಟ್ಟಿಗಳನ್ನು ವೆಲ್ಡ್ ಮಾಡಲಾಗಿದೆ. ಬಳಿಕ ಸರಳುಗಳಿಗೆ ತುಕ್ಕು ಹಿಡಿಯದಂತೆ ಎರಡು ಸುತ್ತು ಪೆಯಿಂಟ್ ಬಳಿಯಲಾಗಿದೆ, ನಂತರ ಇದರ ಮೇಲೆ ಬಿದಿರಿನ ಪಟ್ಟಿಯನ್ನು ಹೊಂದಿಕೊಳ್ಳುವಂತೆ ಜೋಡಿಸಲಾಗಿದೆ.
ಖರ್ಚು-ವೆಚ್ಚ-ಬಾಳಿಕೆ
ಮಳೆಗಾಲದಲ್ಲಿ ಸಂಚರಿಸಲು ಅನಿವಾರ್ಯವಿರುವ ಈ ಸೇತುವೆಗೆ ಒಟ್ಟು 10,000ರೂ ವೆಚ್ಚ ತಗುಲುತ್ತದೆ. ಸಣ್ಣ ಅಳತೆಯದ್ದಾದರೆ ಇನ್ನು ಕಡಿಮೆ ವೆಚ್ಚದಲ್ಲಿ ಮಾಡಬಹುದು. ವರ್ಷಂಪ್ರತಿ ಬದಲಾಯಿಸುವ ಪ್ರಮೇಯವಿಲ್ಲ. ಕನಿಷ್ಟವೆಂದರೂ 5 ರಿಂದ 8 ವರ್ಷವರೆಗೆ ಇದು ಬಾಳಿಕೆ ಬರುತ್ತದೆ. ಮರದ ಸೇತುವೆಯಾದರೆ ಇಂತಿಷ್ಟೇ ಭಾರ ಹೊರುವ ಸಾಮರ್ಥ್ಯವೆಂದಿರುತ್ತದೆ. ಆದರೆ ಇದರಲ್ಲಿ ಹಾಗಿಲ್ಲ ಏಕಕಾಲದಲ್ಲಿ ಎಷ್ಟು ಜನ ಬೇಕಾದರೂ ಸಂಚರಿಸಬಹುದು.
ಬದಲಾದ ಕೃಷಿ ಪದ್ದತಿಯಲ್ಲಿ ಕೃಷಿಕ ಒಂದೊಂದು ಬಾರಿ ಆಳುಗಳಿಲ್ಲದೆಯೂ ಕೃಷಿಯನ್ನು ಮುಂದುವರಿಸಿಕೊಂಡು ಹೋಗುವ ಪರಿಸ್ಥಿತಿ ಇರುತ್ತದೆ. ಪರ್ಯಾಯ ವ್ಯವಸ್ಥೆಗಳ ಪ್ರಯತ್ನ ಇಂದಿನ ಕೃಷಿಕನಿಗೆ ಅನಿವಾರ್ಯವೂ ಹೌದು. ಮರದ ಸೇತುವೆಗಾದರೆ ಕನಿಷ್ಟ 4 ರಿಂದ 5 ಸಾವಿರ ಕೂಲಿ ತಗಲುತ್ತದೆ. ಅದೂ ಕೂಡಾ ಬಾಳಿಕೆ ಕೇವಲ ಒಂದರಿಂದ 2 ವರ್ಷ. ಆ ನಿಟ್ಟಿನಲ್ಲಿ ಈ ರೀತಿಯ ಪ್ರಯತ್ನ ಕೃಷಿಕನಿಗೆ ತಕ್ಕಮಟ್ಟಿಗೆ ನಿರಾಳತೆಯನ್ನು ತಂದುಕೊಡುತ್ತದೆ.
ವಿನಯ್ ಕುಮಾರ್ ಹೆಚ್. ಕೃಷಿಕ, ಹಾರ ಮನೆ. ಪುತ್ಯೆ ಕೊಕ್ಕಡ.