ನೇಸರ ಜು.15: ರಾಜ್ಯ ಹಾಗೂ ಕೇಂದ್ರ ಸರಕಾರದ ನಾನಾ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುತ್ತಿರುವ ಅಂಚೆ ಇಲಾಖೆಗೆ, ಜನ ಸಾಮಾನ್ಯರ ಸೇವೆಯೇ ಮುಖ್ಯ ಉದ್ದೇಶ. ಜನನ, ಮರಣ ಪ್ರಮಾಣ ಪತ್ರಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ನೂತನ ಯೋಜನೆ ಹಳ್ಳಿ ಪ್ರದೇಶದ ಜನರಿಗೆ ಹೆಚ್ಚಿನ ಅನುಕೂಲ ನೀಡಲಿದೆ ಎಂದು ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕಿ ಡಾ.ಏಂಜಲ್ ರಾಜ್ ಹೇಳಿದರು.
ಅವರು ಶುಕ್ರವಾರ ಬೆಳ್ತಂಗಡಿ ನಗರ ಪಂಚಾಯಿತಿ ಹಾಗೂ ಅಂಚೆ ಕಚೇರಿಯ ಸಹಯೋಗದ ಮನೆ ಬಾಗಿಲಿಗೆ ಜನನ ಮರಣ ಪ್ರಮಾಣ ಪತ್ರ ತಲುಪಿಸುವ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದರು.
ತಾಲೂಕಿನ ಕೊಕ್ಕಡ, ಶಿಶಿಲ, ಪಟ್ರಮೆ, ನೆರಿಯ, ಪುದುವೆಟ್ಟು, ಎಳನೀರು, ದಿಡುಪೆ, ಬಾಂಜಾರುಮಲೆ ಮೊದಲಾದ ಭಾಗಗಳು ತಾಲೂಕು ಕೇಂದ್ರದಿಂದ ಹೆಚ್ಚು ಅಂತರದಲ್ಲಿದ್ದು ಈ ಯೋಜನೆಯಿಂದ ಅಲ್ಲಿನ ಜನರು ಜನನ ಮರಣ ಪ್ರಮಾಣ ಪತ್ರ ಗಳಿಗೆ ತಾಲೂಕು ಕೇಂದ್ರವನ್ನು ಅಲೆಯುವುದು ತಪ್ಪುತ್ತದೆ. ಗ್ರಾಮೀಣ ಪ್ರದೇಶದ ಜನರ ದೃಷ್ಟಿಯಲ್ಲಿ ರೂಪಿಸಿರುವ ಈ ಯೋಜನೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಬೆಳ್ತಂಗಡಿ ಅಂಚೆ ನಿರೀಕ್ಷಕ ಸುಜಯ್ ಹೇಳಿದರು.
ನ.ಪಂ.ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ,ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್, ಸದಸ್ಯರಾದ ಜಗದೀಶ, ಕೇಶವ ಬೆಳ್ತಂಗಡಿ ಅಂಚೆ ಕಚೇರಿ ಮುಖ್ಯಸ್ಥೆ ಜ್ಯೋತಿ ಎಂ.ಆರ್.ಮತ್ತಿತರರು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು, ಪುತ್ತೂರು, ಸುಳ್ಯ ಮೊದಲಾದ ಕಡೆ ಈಗಾಗಲೇ ಆರಂಭವಾಗಿರುವ ಈ ಯೋಜನೆ, ಇನ್ನು ಬೆಳ್ತಂಗಡಿಯಲ್ಲು ಇರಲಿದೆ. ಜನನ ಮರಣ ಪ್ರಮಾಣ ಪತ್ರ ಅಗತ್ಯ ಉಳ್ಳವರು ಹೆಚ್ಚುವರಿ ಅರ್ಜಿಗೆ ಸಹಿ ಹಾಕಿ ಯೋಜನೆಯ ಪ್ರಯೋಜನ ಪಡೆಯಬಹುದು. ರೂ.100 ಶುಲ್ಕ ಪಾವತಿ ಮಾಡಬೇಕಾಗಿದ್ದು ಸ್ಪೀಡ್ ಪೋಸ್ಟ್ ಮೂಲಕ ದಾಖಲೆಯನ್ನು ಅಂಚೆ ಇಲಾಖೆ ಗ್ರಾಹಕರ ಮನೆಗೆ ತಲುಪಿಸುತ್ತದೆ.