ಮಲವಂತಿಗೆ ಗ್ರಾಮದ ಬಲ್ಲರಾಯನದುರ್ಗ ಕೆಳಭಾಗದಲ್ಲಿ ಸ್ಫೋಟದ ಸದ್ದು? ಮಕ್ಕಿ, ಪರ್ಲದ 16 ಮನೆಗಳು ಆತಂಕದಲ್ಲಿ

ಶೇರ್ ಮಾಡಿ

ನೇಸರ ಜು.15: ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಂಚಿನಲ್ಲಿರುವ ಬಲ್ಲಾಳರಾಯನದುರ್ಗದ ಕೆಳಭಾಗದಿಂದ ಭಾರಿ ಸ್ಫೋಟದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿರುವ ಕುರಿತು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಮಕ್ಕಿ, ಪರ್ಲ, ದೈಪಿತ್ತಿಲು, ಎಲ್ಯರಕಂಡ ಸಹಿತ ಸುತ್ತಮುತ್ತ 16 ಕ್ಕೂ ಅಧಿಕ ಮನೆಗಳಿವೆ. 2019 ಆಗಸ್ಟ್ ಅವಧಿಯಲ್ಲಿ ಈ ಪ್ರದೇಶದಲ್ಲಿ ಭಾರಿ ಭೂ ಕುಸಿತ ಉಂಟಾದ ಹಿನ್ನೆಲೆ ಇಲ್ಲಿನ 40 ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಿ ಬೇರೆಡೆ ಆಶ್ರಯ ನೀಡಲಾಗಿತ್ತು.
ಜು.14 ರಂದು ರಾತ್ರಿ ವೇಳೆಗೆ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಇಂದು ಇದೇ ಪ್ರದೇಶದಲ್ಲಿ ಹಾದು ಬರುವ ಏಳುವರೆ ಹಳ್ಳವು ಮಣ್ಣುಮಿಶ್ರಿತ ನೀರು ಬರುತ್ತಿರುವುದಾಗಿ ಸ್ಥಳೀಯರಾದ ಕೇಶವ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ 250 ಹೆಕ್ಟೇರ್ ಅಧಿಕ ಕೃಷಿ ಹೊಂದಿದ್ದು, ಕಳೆದ ಮೂರು ವರ್ಷಗಳ ಹಿಂದೆ ಭೂ ಕುಸಿತ ಉಂಟಾದ ಬಳಿಕ ಅರಣ್ಯ ಇಲಾಖೆಯು ಇಲ್ಲಿನ ಕುಟುಂಬಗಳನ್ನು ಪರಿಹಾರ ಒದಗಿಸಿ ಸ್ಥಳಾಂತರಿಸಲು ನಿರ್ಧರಿಸಿತ್ತು. ಈ ನೆಲೆಯಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಸರ್ವೇ ಕಾರ್ಯ ನಡೆಸಿ ಬಳಿಕ ಯಾವುದೇ ಸ್ಪಂದನೆ ನೀಡದೆ ಮೌನವಹಿಸಿತ್ತು. ಇದರಿಂದ ಇಲ್ಲಿನ ಮಂದಿ ಅತ್ತ ಸ್ಥಳಾಂತರಗೊಳ್ಳದೆ, ಇತ್ತ ಅಲ್ಲಿಯೂ ವಾಸಿಸಲು ಆಗದೆ ಭಯದಲ್ಲೆ ಕಾಲಕಳೆಯುವಂತಾಗಿದೆ.
ಕಳೆದ ಎರಡು ದಿನಗಳಿಂದ ಘಟ್ಟ ಪ್ರದೇಶದ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಇದೀಗ ಮಲವಂತಿಗೆ ಸಮೀಪ ಬಲ್ಲರಾಯನದುರ್ಗದ ಭಾಗದಲ್ಲಿ ಭೂಕುಸಿತ ಉಂಟಾಗಿರುವ ಸಾಧ್ಯತೆ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ನದಿ ಹಳ್ಳಗಳಲ್ಲಿ ರಭಸವಾಗಿ ನೀರು ಹರಿಯುವಾಗ ಬಂಡೆಗಳು ನೀರಿನ ಜತೆ ಕೊಚ್ಚಿಕೊಂಡು ಹೋಗುವಾಗಲೂ ಇಂತಹ ಸದ್ದು, ಕಂಪನದ ಅನುಭವ ಉಂಟಾಗುತ್ತದೆ. ಭೂ ಕುಸಿತದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ತಂಡ ಗ್ರಾಮದ ಸುತ್ತ ಅಪಾಯಕಾರಿ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದು ಹೆಚ್ಚಿನ ನಿಗಾ ವಹಿಸಿದೆ ಎಂದು ಮಲವಂತಿಗೆ ಗ್ರಾಪಂ ಉಪಾಧ್ಯಕ್ಷ ದಿನೇಶ್ ಗೌಡ ತಿಳಿಸಿದ್ದಾರೆ
.

Leave a Reply

error: Content is protected !!