ನೇಸರ ಜು.16: ಖಾಸಗಿ ಬಸ್ಸು ಹಾಗೂ ಇನೋವಾ ಕಾರುಗಳ ಮಧ್ಯೆ ಕೋಡಿಂಬಾಳ ತಿರುವಿನಲ್ಲಿ ಅಪಘಾತ ಸಂಭವಿಸಿದ ಘಟನೆ ಜುಲೈ 16ರ ಮುಂಜಾನೆ ನಡೆದಿದೆ.
ಪಂಜ ಕಡೆಗೆ ಹೋಗುತ್ತಿದ್ದ ಇನೋವ ಕಾರು ಹಾಗೂ ಬೆಂಗಳೂರಿನಿಂದ ಪಂಜ ಮಾರ್ಗವಾಗಿ ಕಡಬಕ್ಕೆ ಬರುತ್ತಿದ್ದ ಸುಗಮ ಸಂಸ್ಥೆಗೆ ಸೇರಿದ ಬಸ್ ನಡುವೆ ಈ ಅಪಘಾತ ಸಂಭವಿಸಿದ್ದು. ಕಾರು ಚಾಲಕ ಲೋಲಾಕ್ಷ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಅವರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಗಲ ಕಿರಿದಾದ ರಸ್ತೆಯಲ್ಲಿ ತಿರುವುಗಳ ಅರಿವು ಇಲ್ಲದೇ ಘನ ವಾಹನ ಸಂಚರಿಸಿದ್ದೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇನ್ನೋವಾ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು ಅವರು ಧರ್ಮಸ್ಥಳದ ಕಾಯರಡ್ಕದವರು ಎಂದು ತಿಳಿದು ಬಂದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ .
ಕಡಬ ಠಾಣಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಶಿರಾಡಿ ಘಾಟಿಯಲ್ಲಿ ಭೂ ಕುಸಿತ ಉಂಟಾದ ಪರಿಣಾಮ ಹಾಸನ ಜಿಲ್ಲಾಡಳಿತ ಆ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಘಾಟ್ ರಸ್ತೆಯನ್ನು ಬಿಟ್ಟು ಬೇರೆ ಅಗಲ ಕಿರಿದಾದ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸುತ್ತಿದೆ. ಬಸ್ಸು ಸಕಲೇಶಪುರ ಬಳಿ ಬಿಸಿಲೆ ಘಾಟ್ ಮೂಲಕ ಸುಬ್ರಹ್ಮಣ್ಯಕ್ಕೆ ಬಂದು ಬಳಿಕ ಅಲ್ಲಿಂದ ಪುತ್ತೂರು ಸಬ್ರಹ್ಮಣ್ಯ ರಸ್ತೆಯಲ್ಲಿ ಪಂಜಕ್ಕೆ ತೆರಳಿದೆ. ಉಪ್ಪಿನಂಗಡಿ ಭಾಗದ ಪ್ರಯಾಣಿಕರು ಆ ಬಸ್ಸಿನಲ್ಲಿ ಇದ್ದ ಹಿನ್ನಲೆಯಲ್ಲಿ ಬಸ್ಸು ಪಂಜದಿಂದ ಕಡಬಕ್ಕೆ ಹೋಗುವ ಅಗಲ ಕಿರಿದಾದ ರಸ್ತೆಯಲ್ಲಿ ಪ್ರಯಾಣಿಸಿದೆ.