ನೇಸರ ಜು.17: ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ರಸ್ತೆ ಅಭಿವೃದ್ಧಿಯ ಮರು ಸಮೀಕ್ಷೆ ಆರಂಭಗೊಂಡಿದೆ.
ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಪ್ರಥಮ ಹಂತದ ಅಭಿವೃದ್ಧಿ ಕಾಮಗಾರಿಯಲ್ಲಿ ಬಿ.ಸಿ.ರೋಡ್ ನಿಂದ ಪುಂಜಾಲಕಟ್ಟೆ ತನಕ ಕೆಲಸ ಪೂರ್ಣಗೊಂಡಿದೆ. ದ್ವಿತೀಯ ಹಂತದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ರಸ್ತೆ ಮೇಲ್ದರ್ಜೆಗೆರಲಿದೆ. ಅಗಲ ಕಿರಿದಾದ ಅತಿ ಹೆಚ್ಚು ವಾಹನ ದಟ್ಟಣೆ ಇರುವ ಈ ರಸ್ತೆಯ ಅಭಿವೃದ್ಧಿಯು ಅಗತ್ಯವಾಗಿದೆ.
ಈ ಹಿಂದೆ ರಸ್ತೆ ಅಭಿವೃದ್ಧಿಗೆ ಬೆಂಚ್ ಮಾರ್ಕಿಂಗ್, ಸೆಂಟ್ರಲ್ ಮಾರ್ಕಿಂಗ್, ಕಟ್ಟಡ, ಮರಗಳ ಗುರುತಿಸುವಿಕೆ ಇತ್ಯಾದಿ ಸೇರಿದಂತೆ ಹಲವಾರು ಸಮೀಕ್ಷೆಗಳು ನಡೆದಿದ್ದವು.
ಆದರೆ ರಸ್ತೆಯನ್ನು ಇನ್ನಷ್ಟು ನೇರಗೊಳಿಸುವಗೊಳಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸುವ ಜತೆ ಇಂಧನ,ಸಮಯ ಉಳಿತಾಯದ ದೃಷ್ಟಿಯಿಂದ ಮರು ಸಮೀಕ್ಷೆಗೆ ಆದೇಶ ನೀಡಲಾಗಿದೆ. ಪುಂಜಾಲಕಟ್ಟೆಯಿಂದ ಸಮೀಕ್ಷೆ ಆರಂಭಗೊಂಡಿದ್ದು ಪ್ರಸ್ತುತ ಗುರುವಾಯನಕೆರೆ, ಬೆಳ್ತಂಗಡಿ ಪರಿಸರದಲ್ಲಿ ಮುಂದುವರಿದಿದೆ.
718 ಕೋಟಿ ರೂ. ಯೋಜನೆ:
ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಲ್ಲಿ ಕೇಂದ್ರ ಸರಕಾರ 718 ಕೋಟಿ ರೂ. ವೆಚ್ಚದ ಈ ಯೋಜನೆಗೆ ಅನುದಾನವಿರಿಸಿದೆ. ಹಿಂದಿನ ಸಮೀಕ್ಷೆಗಳ ಪ್ರಕಾರ 35 ಕಿಮೀ ವ್ಯಾಪ್ತಿಯ ಈ ರಸ್ತೆಯು, ತಿರುವುಗಳ ಸಂಖ್ಯೆ ಕಡಿಮೆಗೊಳ್ಳಲಿರುವ ಕಾರಣದಿಂದ ಸುಮಾರು ಎರಡು ಕಿಮೀ ದೂರವನ್ನು ಕಡಿಮೆ ಮಾಡಲಿದೆ. ಇದಕ್ಕಾಗಿ ಈ ಸಮೀಕ್ಷೆ ನಡೆದಿದೆ. 10 ಕಂಪೆನಿಗಳು ಕಾಮಗಾರಿಗೆ ಟೆಂಡರ್ ಸಲ್ಲಿಸಿವೆ. ಕಾಮಗಾರಿ ನವೆಂಬರ್ ಒಳಗೆ ಆರಂಭಗೊಳ್ಳುವ ನಿರೀಕ್ಷೆ ಇದೆ.
ಮರಗಳ ಸಮೀಕ್ಷೆ:
ಈ ಹಿಂದಿನ ಸರ್ವೆ ಪ್ರಕಾರ ಸುಮಾರು 2412 ಮರಗಳು ರಸ್ತೆ ಅಭಿವೃದ್ಧಿ ವೇಳೆ ತೆರವುಗೊಳ್ಳಬೇಕಿತ್ತು. ಈ ಮರಗಳನ್ನು ಈಗಾಗಲೇ ಗುರುತು ಮಾಡಲಾಗಿದ್ದು ಸಂಖ್ಯೆಯನ್ನು ನೀಡಲಾಗಿದೆ. ಆದರೆ ಈಗ ತಿರುವುಗಳು ನೇರಗೊಳ್ಳುವ ಸ್ಥಳಗಳಲ್ಲಿ ಮತ್ತೆ ಅರಣ್ಯ ಇಲಾಖೆ ಸಮೀಕ್ಷೆ ನಡೆಸಬೇಕಾಗಿದೆ. ಈ ಹಿಂದೆ ಮರ ತೆರವಿನ ಬಗ್ಗೆ ಸಾರ್ವಜನಿಕ ಹಾಗೂ ಸ್ವೀಕಾರದ ಸಭೆಯನ್ನು ಬೆಳ್ತಂಗಡಿಯಲ್ಲಿ ಕರೆಯಲಾದ ಸಂದರ್ಭ ಮರು ಸಮೀಕ್ಷೆಯ ಆದೇಶ ಬಿಡುಗಡೆಯಾಗಿ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ.
ರಸ್ತೆ ವ್ಯಾಪ್ತಿ:
ನಗರ ಪ್ರದೇಶದಲ್ಲಿ ರಸ್ತೆ ವ್ಯಾಪ್ತಿ 30 ಮೀ. ಹಾಗೂ ಗ್ರಾಮೀಣ ಭಾಗದಲ್ಲಿ 18 ರಿಂದ 20 ಮೀ. ಇರಲಿದೆ. ಗುರುವಾಯನಕೆರೆಯಿಂದ ಉಜಿರೆ ತನಕ 9.5ಕಿಮೀ.ದ್ವಿಪಥ ರಸ್ತೆ ಜತೆ ಸರ್ವಿಸ್ ರಸ್ತೆಯು ನಿರ್ಮಾಣಗೊಳ್ಳಲಿದೆ. ಇದರಿಂದ ಸದ್ಯ ಗುರುವಾಯನಕೆರೆಯಿಂದ ಉಜಿರೆಗೆ ಪ್ರಯಾಣಿಸಲು ಬವಣೆ ಪಡುವ ವಾಹನ ಸವಾರ ತೊಂದರೆಗೆ ಮುಕ್ತಿ ಸಿಗಲಿದೆ. ಗ್ರಾಮೀಣ ಭಾಗಗಳಲ್ಲೂ ರಸ್ತೆ ಸಾಕಷ್ಟು ಅಗಲಗೊಳ್ಳುವ ಕಾರಣ ಚಾರ್ಮಾಡಿ ಘಾಟಿ ಪ್ರಯಾಣಕ್ಕೆ ಹೆಚ್ಚಿನ ಅನುಕೂಲವಾಗಲಿದೆ.