ಬೆಳಕು ಯೋಜನೆಯಲ್ಲಿ ಅವ್ಯವಹಾರ ಆರೋಪ ➤ ಗುತ್ತಿಗೆದಾರರ ವಿರುದ್ಧ ಇಂಧನ ಸಚಿವರಿಗೆ ದೂರು

ಶೇರ್ ಮಾಡಿ

ನೇಸರ ಜು.16: ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜ್ಯ ಸರಕಾರದ ಬೆಳಕು ಯೋಜನೆಯಡಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಸ್ಥಳೀಯ ಗುತ್ತಿಗೆದಾರ ಕಡಬ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಅಭಿಲಾಷ್ ಪಿ.ಕೆ ಎಂಬವರ ವಿರುದ್ಧ ಆರೋಪ ಕೇಳಿಬಂದಿದೆ. ಈ ಸಂಬಂಧ ಅವರ ವಿರುದ್ಧ ಕ್ರಮ ಜರಗಿಸಬೇಕು ಎಂದು ರಾಜ್ಯ ಇಂಧನ ಸಚಿವರಿಗೆ ದೂರು ನೀಡಲು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಈ ಬಗ್ಗೆ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ತಿಳಿಸಿದರು.
ಶನಿವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷೆ ಗಂಗಮ್ಮ, ಅಭಿಲಾಷ್ ಅವರು ಬೆಳಕು ಯೋಜನೆ ಅನುಷ್ಠಾನ ಮಾಡಲು ಫಲಾನುಭವಿಗಳಿಂದ ಬಲತ್ಕಾರವಾಗಿ ಹಣ ವಸೂಲಿ ಮಾಡಿದ್ದಾರೆ ಎನ್ನುವ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿಯಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮ ಜರಗಿಸಬೇಕೆಂದು ಎಂದು ನಿರ್ಣಯಿಸಲಾಗಿದೆ ಎಂದರು.
ಬೆಳಕು ಯೋಜನೆ ಸರಕಾರ ತಂದ ಒಂದು ಅತ್ಯುತ್ತಮ ಯೋಜನೆಯಾಗಿದೆ. ಇದರಿಂದ ಗ್ರಾಮೀಣ ಭಾಗದ ಅನೇಕ ಬಡ ಜನರಿಗೆ ಅನುಕೂಲವಾಗುತ್ತಿದೆ. ಈ ಯೋಜನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಎಷ್ಟೇ ಖರ್ಚಾದರೂ ಸರಕಾರವೇ ಭರಿಸುತ್ತದೆ. ನಯಾ ಪೈಸೆಯನ್ನೂ ಫಲಾನುಭವಿ ನೀಡುವ ಹಾಗಿಲ್ಲ. ಚಾ ತಿಂಡಿ, ಊಟದ ಖರ್ಚು ಕೂಡಾ ಫಲಾನುಭವಿಗಳು ನೀಡುವಂತಿಲ್ಲ. ಆದರೆ, ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಅಭಿಲಾಷ್ ಅವರು ಬಡವರ ಕೈಯಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ದೂರು ವ್ಯಕ್ತವಾಗಿದೆ.
ಮುಖ್ಯವಾಗಿ ಫಲಾನುಭವಿಗಳು ಗ್ರಾ.ಪಂ.ನಲ್ಲಿ ಮನವಿ ಸಲ್ಲಿಸಿದ ಬಳಿಕ ಆಡಳಿತ ಮಂಡಳಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಮೆಸ್ಕಾಂ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ. ಆ ಬಳಿಕ ಇಲಾಖೆ ಮಂಜೂರಾತಿ ಪಟ್ಟಿಯನ್ನು ಅಂತಿಮಗೊಳಿಸಿ ಪಂಚಾಯಿತಿಗೆ ಕಳುಹಿಸಿಕೊಡಬೇಕು. ಆದರೆ, ಇಲಾಖೆಯಿಂದ ಗುತ್ತಿಗೆದಾರರೇ ತನ್ನ ರಾಜಕೀಯ ಪ್ರಭಾವ ಬಳಸಿಕೊಂಡು ಗ್ರಾ.ಪಂ ಗಮನಕ್ಕೆ ತಾರದೆ ಫಲಾನುಭವಿಗಳಿಂದ ಹಣ ಪಡೆದು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಫಲಾನುಭವಿಯೊಬ್ಬರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ 26-6-2022ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅಭಿಲಾಷ್ ಅವರ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ. ಇಂಧನ ಸಚಿವರಿಗೆ ದೂರು ನೀಡಿ ಅಭಿಲಾಷ್ ಅವರ ವಿರುದ್ಧ ಕ್ರಮ ಕೈಗೊಂಡು, ಅವರ ಗುತ್ತಿಗೆ ಪರವಾನಿಗೆಯನ್ನು ರದ್ದು ಪಡಿಸಲು ತಕ್ಷಣ ಆದೇಶಿಸಬೇಕೆಂದು ಆಗ್ರಹಿಸಲಾಗಿದೆ ಎಂದು ಗಂಗಮ್ಮ ತಿಳಿಸಿದರು.
ಈ ಬೆಳವಣಿಗೆಯ ಬಳಿಕ ಅವರು ಪಂಚಾಯಿತಿ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಊರಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಆರೋಪ ಹೊರಿಸಿ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಭ್ರಷ್ಟ ರಾಜಕೀಯದವರ ಕೈಗೊಂಬೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ವಾಸ್ತವಾಗಿ ಅವರು ಉಲ್ಲೇಖ ಮಾಡಿರುವ ರಸ್ತೆಗಳಿಗೆ ಅನುದಾನ ಇಟ್ಟು ದುರಸ್ತಿಯ ಕೆಲಸ ಕಾರ್ಯಗಳನ್ನು ಮಾಡಲಾಗಿದೆ. ಆದರೆ, ಅತಿಯಾದ ಮಳೆಯ ಕಾರಣದಿಂದಾಗಿ ರಸ್ತೆ ಹಾಳಾಗಿದೆ. ಈಗಾಗಲೇ ಗ್ರಾಮದ ಎಲ್ಲಾ ರಸ್ತೆಗಳು ಹಾಳಾಗಿವೆ. ಗ್ರಾಮ ಪಂಚಾಯಿತಿಯ ಪ್ರತಿ ರಸ್ತೆಗಳ ಅಭಿವೃದ್ಧಿಗೆ ಮಳೆ ಮುಗಿದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
“ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ಅಭಿಲಾಷ್ ಅವರು ಆರೋಪ ಮಾಡಿ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ಪಿಡಿಒ ಭ್ರಷ್ಟಾಚಾರವೆಸಗಿದ್ದರೆ ತನ್ನ ಗಮನಕ್ಕೆ ತರಬಹುದಿತ್ತು. ಇಲ್ಲದಿದ್ದಲ್ಲಿ ಸಂಬಂಧಪಟ್ಟವರಿಗೆ ದೂರು ನೀಡಬಹುದಿತ್ತು. ಇದ್ಯಾವುದನ್ನೂ ಮಾಡದೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಭಿವೃದ್ಧಿ ಅಧಿಕಾರಿಯವರು ಒಬ್ಬ ದಲಿತ ವ್ಯಕ್ತಿ. ತಾನು ಕೂಡ ಅದೇ ಸಮುದಾಯದವಳಾಗಿ ಅಧ್ಯಕ್ಷೆಯಾಗಿದ್ದೇನೆ. ನಮಗೆ ಅಭಿಲಾಷ್ ಅವಮಾನ ಮಾಡುತ್ತಿದ್ದಾರೆ. ತಾನು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಆದರೆ, ನಮ್ಮನ್ನು ಭ್ರಷ್ಟರು ಎಂದು ಆರೋಪಿಸಿರುವುದು ಮನಸ್ಸಿಗೆ ತುಂಬಾ ನೋವಾಗಿದೆ” ಎಂದು ಗಂಗಮ್ಮ ಬೇಸರ ವ್ಯಕ್ತಪಡಿಸಿದ್ರು. ಈಗಾಗಲೇ ನಿರ್ಣಯಿಸಿರುವಂತೆ ಅಭಿಲಾಷ್ ವಿರುದ್ಧ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಇಮ್ಯಾನುವೆಲ್ ಪಿ.ಜೆ, ಸದಸ್ಯ ಚಂದ್ರಶೇಖರ ಗೌಡ ಹಳೆನೂಜಿ, ಸ್ಥಳೀಯ ಮುಖಂಡರಾದ ಜಯಂತ್ ಕಲ್ಲುಗುಡ್ಡೆ, ಅನಿಲ್ಕೆರ್ನಡ್ಕ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!