ನೇಸರ ಜು18: ಆಧುನಿಕ ಯುಗದಲ್ಲಿ ಸೃಜನಶೀಲವಾದ ಆವಿಷ್ಕಾರಗಳನ್ನು ಸಮಾಜಕ್ಕೆ ಪರಿಚಯಿಸುವ ಅಗತ್ಯವಿದೆ. ವಿದ್ಯಾರ್ಥಿಗಳ ಆವಿಷ್ಕಾರಗಳು ಅವರ ಭವಿಷ್ಯಕ್ಕೆ ಉತ್ತಮ ಮುನ್ನುಡಿ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳು ಹೊರ ಹೊಮ್ಮಲು ಉತ್ತಮ ಮಾರ್ಗದರ್ಶನದ ಅಗತ್ಯವಿದ್ದು ಇದನ್ನು ನೀಡುವಲ್ಲಿ ಶ್ರೀಧ.ಮಂ.ಶಿಕ್ಷಣ ಸಂಸ್ಥೆಗಳು ಮುಂಚೂಣಿಯಲ್ಲಿವೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ ಹೇಳಿದರು.
ಅವರು ಸೋಮವಾರ ಉಜಿರೆಯ ಶ್ರೀ ಧ.ಮಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಜೆಕ್ಟ್ ಎಕ್ಸಿಬಿಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ.ಅಶೋಕ್ ಕುಮಾರ್ ಮಾತನಾಡಿ, ತಂತ್ರಜ್ಞಾನ ಆಧಾರಿತ ಪರಿಹಾರಗಳ ಬಗ್ಗೆ ಹೆಚ್ಚಿನ ಒತ್ತನ್ನು ನೀಡುವ ಆವಿಷ್ಕಾರಗಳ ಪ್ರದರ್ಶನದಿಂದ ಪ್ರಯೋಜನವಿದೆ. ಗ್ರಾಮೀಣ ಭಾಗಗಳಲ್ಲಿ ಕೆಲವೊಂದು ನೂತನ ಆವಿಷ್ಕಾರಗಳ ಅಗತ್ಯವಿದ್ದು, ಕೃಷಿ ಹಾಗೂ ಸಾರ್ವಜನಿಕ ಹಿತ ದೃಷ್ಟಿಯಿಂದ ರೂಪಿಸಿರುವ ಈ ಪ್ರದರ್ಶನವು ಹಲವು ಅನುಕೂಲಗಳನ್ನು ನೀಡಲಿದೆ ಎಂದು ಹೇಳಿದರು.
ಎಸ್.ಡಿ.ಎಂ.ರೆಸಿಡೆನ್ಸಿಯಲ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಡಾ.ಕೃಷ್ಣಮೂರ್ತಿ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಸೋಮಶೇಖರ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಡಾ.ಸತ್ಯನಾರಾಯಣ, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಹಲವು ಸಂಖ್ಯೆಯ ಪ್ರಾಜೆಕ್ಟ್ ಗಳನ್ನು ರಚಿಸಿದ್ದು ಆಯ್ದ 32ನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಕೆಲವೊಂದು ಆವಿಷ್ಕಾರಗಳಿಗೆ ಕರ್ನಾಟಕ ಸರಕಾರ, ಕೆ.ಟೆಕ್ ಸಹಯೋಗವಿದೆ. ತಾಲೂಕಿನ ವಿದ್ಯಾಸಂಸ್ಥೆಗಳ ಸಾವಿರಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮಂಗಳವಾರ ಕೂಡ ಈ ಪ್ರದರ್ಶನ ಮುಂದುವರಿಯಲಿದೆ.
ಡ್ರೋನ್ ಟೆಕ್ನಾಲಜಿ ಮೂಲಕ ಅಡಕೆಗೆ ಔಷಧಿ ಸಿಂಪಡಣೆ, ಮಾನವ ಶ್ರಮ ಕಡಿಮೆ ಮಾಡುವ ಹುಲ್ಲು ಕತ್ತರಿಸುವ ಯಂತ್ರ, ಬೆಲೆಬಾಳುವ ವಸ್ತುಗಳ ಭದ್ರತೆ, ಕೃಷಿ ಕ್ಷೇತ್ರದಲ್ಲಿಆರ್ಥಿಕ ಲಾಭದೊಂದಿಗೆ ಉತ್ತಮ ಇಳುವರಿಗೆ ಯೋಜನೆ, ಕೃಷಿ ತೋಟಗಳಲ್ಲಿ ವನ್ಯಜೀವಿಗಳ ಹಾವಳಿ ತಪ್ಪಿಸುವ ಆವಿಷ್ಕಾರ, ಪರಿಸರ ಸ್ನೇಹಿ ಧೂಳಿನ ಸ್ವಯಂ ಚಾಲಿತ ಶುಚಿತ್ವ, ಅಪಘಾತಗಳಿಂದ ರಕ್ಷಣೆ, ಆರೋಗ್ಯ ಪ್ರಯೋಜನ, ಜಲಮೂಲಗಳ ಗುರುತಿಸುವಿಕೆ, ಅಧ್ಯಯನ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಾಜೆಕ್ಟ್ ಗಳ ಪ್ರದರ್ಶನ ನಡೆದಿದೆ.