ನೇಸರ ಜು.20: ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ 2022 23ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ದಿನಾಂಕ 20.07.2022 ರಂದು ನಡೆಯಿತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ಅಬ್ರಹಾಂ ವರ್ಗೀಸ್ ರವರು ಮಾತನಾಡುತ್ತಾ ಎನ್ ಎಸ್ ಎಸ್, ಎನ್ ಸಿ ಸಿ, ಸ್ಕೌಟ್ ಮತ್ತು ಗೈಡ್ಸ್ ಮುಂತಾದ ಸಂಸ್ಥೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವನ್ನು ಮಾಡುವುದರೊಂದಿಗೆ ಸಮಾಜ ಸೇವೆಯಂತಹ ಉದಾತ್ತ ಮೌಲ್ಯವನ್ನು ಬೆಳೆಸುತ್ತದೆ ಎಂದು ನುಡಿದರು. ಎನ್ ಎಸ್ ಎಸ್ ಸ್ವಯಂಸೇವಕರು ಸ್ವಯಂ ಪ್ರೇರಿತರಾಗಿ ಸೇವೆ ಮಾಡಬೇಕು ಎಂದು ಹೇಳಿದರು. ಉತ್ತಮವಾದ ಸೇವೆ ಮಾಡುವವರನ್ನು ಸಮಾಜ ಗುರುತಿಸುತ್ತದೆ ಮತ್ತು ಇನ್ನೊಬ್ಬರಿಗೆ ಸಹಕಾರವನ್ನು ಮಾಡಿದಾಗ ನಮಗೆ ಸಿಗುವಂತಹ ಆತ್ಮ ತೃಪ್ತಿ ಬೇರೆ ಎಲ್ಲಿಯೂ ಸಿಗುವುದಿಲ್ಲ ಎಂದು ನುಡಿದರು. ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ನಾಯಕತ್ವ ತರಬೇತಿ ಸೇವಾ ಮನೋಭಾವನೆ ಮಿತ್ರತ್ವ, ಭ್ರಾತೃತ್ವ ಸಹಜೀವನ ಮುಂತಾದ ಜೀವನ ಮೌಲ್ಯಗಳು ಅನುಭವ ಆಗುವುದರಿಂದ ಯಾವುದೇ ಧಾರ್ಮಿಕ ಸಾಮಾಜಿಕ ವೈಶ್ಯಮ್ಯಗಳಿಲ್ಲದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಜೀವನ ನಡೆಸುವುದಕ್ಕೆ ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಕಡಬ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿರುವ ವಿಮಲ್ ಕುಮಾರ್ ರವರು ಮಾತನಾಡುತ್ತಾ. ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ರಾಷ್ಟ್ರೀಯ ಸೇವಾ ಯೋಜನೆ ಅತ್ಯಂತ ಪ್ರಮುಖವಾದ ಒಂದು ಸಂಸ್ಥೆ ಎಂದು ನುಡಿದರು. ಬೇರೆ ಬೇರೆ ಡಿಗ್ರಿಗಳನ್ನು ಪಡೆದುಕೊಂಡವರೆಲ್ಲ ವಿದ್ಯಾವಂತರಲ್ಲ ನಾವು ಇನ್ನೊಬ್ಬರಿಗೆ ಮಾಡುವ ಸೇವೆಯೇ ನಿಜವಾದ ವಿದ್ಯೆ ಎಂದು ಅವರು ನುಡಿದರು. ಯುವ ಜನತೆಯಲ್ಲಿ ಮಾನವೀಯ ಸಂಬಂಧಗಳನ್ನ ಬೆಳೆಸುವಲ್ಲಿ ಎನ್ಎಸ್ಎಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನುಡಿದರು. ಹಳ್ಳಿ ಪ್ರದೇಶಗಳಲ್ಲಿ ನಡೆಯುವ ಎನ್ಎಸ್ಎಸ್ ನ ವಿಶೇಷ ಶಿಬಿರದಲ್ಲಿ ಭಾಗವಹಿಸಿದಾಗ ಸಿಗುವ ಅನುಭವಗಳು ನಮ್ಮ ಬದುಕಿಗೆ ಬೇಕಾಗುವ ಅಮೂಲ್ಯವಾದ ಪಾಠಗಳಾಗಿರುತ್ತವೆ ಎಂದು ಹೇಳಿದರು. ಹಳ್ಳಿಗಳ ಬದುಕು ಎಷ್ಟು ಕಷ್ಟಕರವಾಗಿರುತ್ತದೆ ಎಂಬುದು ಹಳ್ಳಿಗಳಲ್ಲಿ ವಿಶೇಷ ಶಿಬಿರಗಳನ್ನು ನಡೆಸಿದಾಗ ಮಾತ್ರ ತಿಳಿಯುತ್ತದೆ. ನಿಷ್ಕಲ್ಮಶ ಮನಸ್ಸಿನಿಂದ ನಾವು ಸೇವೆಯನ್ನು ಮಾಡಿದರೆ ಸಮಾಜ ನಮ್ಮನ್ನು ಗೌರವಿಸುತ್ತದೆ ಮತ್ತು ಪ್ರಶಸ್ತಿಗಳು ತಾನಾಗಿಯೇ ನಮ್ಮನ್ನು ಅರಸಿಕೊಂಡು ಬರುತ್ತವೆ ಎಂದು ಅವರು ನುಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ನಿರ್ದೇಶಕರು ಹಾಗೂ ಪ್ರಾಚಾರ್ಯರಾದ ಏಲಿಯಾಸ್ ಎಂ ಕೆ ರವರು ಎನ್ಎಸ್ಎಸ್ ಸ್ವಯಂಸೇವಕರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮ ಅಧಿಕಾರಿ ವಿಶ್ವನಾಥ ಶೆಟ್ಟಿ ಕೆ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎನ್ಎಸ್ಎಸ್ ಘಟಕ ನಾಯಕಿ ಶ್ರೇಯ ಎಂ ಇ. ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಎನ್ಎಸ್ಎಸ್ ನೇತ್ರಾವತಿ ತಂಡದ ನಾಯಕ ಮೆಲ್ವಿನ್, ಕಾವೇರಿ ತಂಡದ ನಾಯಕ ಜಿತು, ಶರಾವತಿ ತಂಡದ ನಾಯಕಿ ಚೈತನ್ಯ, ಕುಮಾರಧಾರ ತಂಡದ ನಾಯಕಿ ಫಾತಿಮಾತ್ ರಿಝನ ಅತಿಥಿ ಗಣ್ಯರಿಗೆ ಹೂಗುಚ್ಛ ನೀಡಿ ಗೌರವಿಸಿದರು. ವರ್ಷಿತಾ ಮತ್ತು ತಂಡದವರು ಎನ್ಎಸ್ಎಸ್ ಧ್ಯೇಯಗೀತೆಯನ್ನು ಹಾಡಿದರು. ಉಪನ್ಯಾಸಕರಾದ ಮಧು ಎ ಜೆ, ಜೆಸಿಂತಾ ಕೆ ಜೆ, ಗೀತಾ ಪಿ ಬಿ, ಶಾರದಾ ಬಿ ಸಿ ಮುಂತಾದವರು ಉಪಸ್ಥಿತರಿದ್ದರು. ಎನ್ ಎಸ್ ಎಸ್ ಸ್ವಯಂಸೇವಕಿ ಮಾನ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಲಿಖಿತ್ ವಂದಿಸಿದರು.