ಮಾಧ್ಯಮಗಳು ಲೋಕದ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲುವುದರೊಂದಿಗೆ ಸಮಾಜದಲ್ಲಿನ ಕೆಲವು ಅನಪೇಕ್ಷಿತ ವಿಚಾರಗಳ ವಿರುದ್ಧ ಜಾಗೃತಿ ಮೂಡಿಸುತ್ತವೆ: ಪಿ.ಬಿ.ಹರಿಪ್ರಸಾದ್ ರೈ

ಶೇರ್ ಮಾಡಿ

ನೇಸರ ಜು.25: ಮಾಧ್ಯಮಗಳು ಲೋಕದ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲುವುದರೊಂದಿಗೆ ಸಮಾಜದಲ್ಲಿನ ಕೆಲವು ಅನಪೇಕ್ಷಿತ ವಿಚಾರಗಳ ವಿರುದ್ಧ ಜಾಗೃತಿ ಮೂಡಿಸುತ್ತವೆ. ಇಂದಿನ ವಿದ್ಯಾರ್ಥಿಗಳಲ್ಲಿ ಅಕ್ಷರ ಜ್ಞಾನ ಬಹಳಷ್ಟು ಇದೆ. ಆದರೆ ಬದುಕಿನ ಜ್ಞಾನ ತುಂಬಾ ಕಡಿಮೆಯಾಗಿದೆ. ಇದರಿಂದಾಗಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಹೆಚ್ಚಿಸುವ ಕೆಲಸವಾಗಬೇಕಿದೆ. ವಿದ್ಯಾರ್ಥಿಗಳಲ್ಲಿ ಪಾಠ ಪ್ರವಚನ ಹೊರತುಪಡಿಸಿ ಅದರಾಚೆ ಒಂದು ಪ್ರಪಂಚವಿದೆ, ಅದರಲ್ಲಿ ಬದುಕಿನ ಪಾಠವಿದೆ ಎನ್ನುವುದನ್ನು ತಿಳಿಸುವ ಕೆಲಸವಾಗಬೇಕಿದೆ. ಸಾಮಾಜಿಕ ಜಾಲತಾಣ, ದೃಶ್ಯ ಮಾಧ್ಯಮ ಎಷ್ಟೇ ಪ್ರಭಾವಿಯಾದರೂ ಮುದ್ರಣ ಮಾಧ್ಯಮ ತನ್ನದೇ ಆದ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ ಎಂದು ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪಿ.ಬಿ.ಹರಿಪ್ರಸಾದ್ ರೈ ಹೇಳಿದರು.

ಅವರು ನೆಲ್ಯಾಡಿ ಸೈಂಟ್ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಜು.25 ರಂದು ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮವನ್ನು ಕಡಬ ತಹಶೀಲ್ದಾರ್ ಅನಂತಶಂಕರ್ ಬಿ. ಉದ್ಘಾಟಿಸಿ ಶುಭ ಹಾರೈಸಿದರು. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಸೈಂಟ್ ಜಾರ್ಜ್ ವಿದ್ಯಾ ಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್ ಉಪಸ್ಥಿತರಿದ್ದರು.

ಸನ್ಮಾನ
ಪಿ.ಬಿ.ಹರಿಪ್ರಸಾದ್ ರೈ ಅವರನ್ನು ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸೈಂಟ್ ಜಾರ್ಜ್ ವಿದ್ಯಾ ಸಂಸ್ಥೆಯ ಪರವಾಗಿ ಸಂಸ್ಥೆ ಸಂಚಾಲಕರಾದ ಅಬ್ರಹಾಂ ವರ್ಗೀಸ್ ರವರು ಕಡಬ ತಹಶೀಲ್ದಾರ್ ಅನಂತಶಂಕರ್ ಬಿ. ಮತ್ತು ಪಿ.ಬಿ. ಹರಿಪ್ರಸಾದ್ ರೈ ರವರನ್ನು ಶಾಲು ಹೊಂದಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಏಲಿಯಾಸ್ ಎಂ.ಕೆ, ಉಪನ್ಯಾಸಕರಾದ ವಿಶ್ವನಾಥ ಶೆಟ್ಟಿ, ಮಧು, ಚೇತನ್, ಸೀನಿಯರ್ ಚೇಂಬರ್ ನೆಲ್ಯಾಡಿಯ ಅಧ್ಯಕ್ಷರಾದ ಆರ್.ವೆಂಕಟರಮಣ, ಮಂಗಳೂರು ವಿಶ್ವವಿದ್ಯಾನಿಲಯ ನೆಲ್ಯಾಡಿ ಘಟಕದ ಉಪನ್ಯಾಸಕರು, ಪತ್ರಿಕಾ ಮಾಧ್ಯಮದವರು, ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.

ಸಂವಾದ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪಿ.ಬಿ.ಹರಿಪ್ರಸಾದ್ ರೈ ಅವರು ಸೈಂಟ್ ಜಾರ್ಜ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ನೆಲ್ಯಾಡಿ ಘಟಕದ ಪದವಿ ವಿದ್ಯಾರ್ಥಿಗಳಿಗೆ “ವಿದ್ಯಾರ್ಥಿಗಳು ಮತ್ತು ಪತ್ರಿಕೋದ್ಯಮ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೊಯಿಲ ಸನ್ಮಾನಿತರನ್ನು ಪರಿಚಯಿಸಿದರು. ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಘದ ಸದಸ್ಯೆ ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ ವಂದಿಸಿದರು. ದಯಾನಂದ ಕಲ್ನಾರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!