ನೇಸರ ಆ.01: ಜಿಲ್ಲೆಯಿಂದ ಬೆಂಗಳೂರು, ಹಾಸನ ಮತ್ತಿತರ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿ 15 ದಿನಗಳ ಹಿಂದೆ ಮಳೆಗೆ ಅಲ್ಲಲ್ಲಿ ಕುಸಿದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸಣ್ಣ ವಾಹನಗಳಿಗೆ ಅವಕಾಶ ನೀಡಲಾಯಿತು. ಸದ್ಯ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆ ತನಕ ಬಸ್ ಹಾಗೂ ಆರು ಚಕ್ರದ ವಾಹನಗಳಿಗೆ ಸಂಚಾರ ಅವಕಾಶ ನೀಡಲಾಗಿದೆ. ಘನ ವಾಹನಗಳ ನಿಷೇಧ ಮುಂದುವರಿದಿದೆ. ಕೆಲವೊಮ್ಮೆ ಈ ಸಮಯ ಶಿರಾಡಿ ಕಡೆಯಿಂದ ದಕ ಜಿಲ್ಲೆ ಕಡೆಗೆ 10 ಚಕ್ರದ ಸರಕು ಸಾಗಾಟದ ಖಾಲಿ ಟ್ರಕ್ ಗಳು ಸಂಚರಿಸುತ್ತಿವೆ.
ಮಳೆಯಿಂದ ಜರ್ಜರಿತವಾದ ಶಿರಾಡಿ ಘಾಟಿಯ ದುರಸ್ತಿ ಕಾಮಗಾರಿ ಕಳೆದ 15 ದಿನಗಳಿಂದ ನಡೆಯುತ್ತಿದ್ದರು ಅದಿನ್ನು ಪೂರ್ಣಗೊಂಡಿಲ್ಲ. ಇದರಿಂದ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಇನ್ನೂ ಕೂಡ ಶಿರಾಡಿ ಘಾಟಿ ತೆರೆದುಕೊಂಡಿಲ್ಲ.
ಶಿರಾಡಿಗೆ ಬದಲಿ ರಸ್ತೆಯಾಗಿರುವುದು ಚಾರ್ಮಾಡಿ ಘಾಟಿ. ಈ ಘಾಟಿ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ವಾಹನದಟ್ಟಣೆಯು ಇದೆ. ಶಿರಾಡಿ ಸಂಚಾರ ಅಸ್ತವ್ಯಸ್ತವಾದ ಬಳಿಕವಂತು ಈ ಘಾಟಿಯಲ್ಲಿ ವಾಹನ ಒತ್ತಡ ವಿಪರೀತವಾಗಿದೆ. ಇದರಿಂದ ಈಗಾಗಲೇ ಈ ಘಾಟಿ ಸಂಪರ್ಕ ರಸ್ತೆಗಳು ಹಾಳಾಗತೊಡಗಿವೆ.
ನಿಷೇಧಿತ ವಾಹನಗಳಿಗೂ ಅವಕಾಶ
ಚಾರ್ಮಾಡಿ ಘಾಟಿಯಲ್ಲಿ ಸ್ಲೀಪರ್, ರಾಜಹಂಸ ಸೇರಿದಂತೆ ಐಷಾರಾಮಿ ಬಸ್ಸುಗಳಿಗೆ ಪ್ರವೇಶ ನಿಷೇಧವನ್ನು ಈ ಹಿಂದೆಯೇ ಹೇರಲಾಗಿದೆ. ಆದರೆ ನಿಷೇಧ ಇದ್ದರೂ ಇಲ್ಲಿ ಈಗ ಇಂತಹ ವಾಹನಗಳು ಭಾರಿ ಸಂಖ್ಯೆಯಲ್ಲಿ ಪ್ರಯಾಣಿಸುವುದು ಕಂಡುಬರುತ್ತಿದೆ. ಇದು ಟ್ರಾಫಿಕ್ ಜಾಮ್ ಹಾಗೂ ಘಾಟಿ ಪ್ರದೇಶದ ರಸ್ತೆ ಹಾಳಾಗಲು ಕಾರಣವಾಗಿದೆ. ಘನವಾಹನಗಳಿಗೆ ನಿಷೇಧವಿದ್ದರೂ ಈ ಎಲ್ಲ ವಾಹನಗಳು ಯಾರ ಅನುಮತಿ ಪಡೆದು ಪ್ರಯಾಣ ಬೆಳೆಸುತ್ತಿವೆ ಎಂಬುದು ಯಕ್ಷಪ್ರಶ್ನೆ.
ಅಪಘಾತಗಳು
ಮಬ್ಬು ಕವಿದ ವಾತಾವರಣ, ಆಗಾಗ ಸುರಿಯುವ ಮಳೆ, ಬೇಕಾಬಿಟ್ಟಿ ವಾಹನ ನಿಲುಗಡೆ, ಸೌಂದರ್ಯ ವೀಕ್ಷಣೆ ನೆಪದಲ್ಲಿ ಪ್ರವಾಸಿಗರ ಉಪಟಳ ಮೊದಲಾದ ಕಾರಣಗಳಿಂದ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಆಗಾಗ ಅಪಘಾತಗಳು ಉಂಟಾಗುತ್ತಿವೆ. ಘಾಟಿ ಸೌಂದರ್ಯ ವೀಕ್ಷಣೆ ನೆಪದಲ್ಲಿ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ ನಿಂದ ಉಂಟಾಗುವ ಟ್ರಾಫಿಕ್ ಜಾಮ್ ಮುಗಿಯದ ಗೋಳಾಗಿದೆ.
ಇಂಧನ ಸಮಯ ನಷ್ಟ
ಶಿರಾಡಿ ಘಾಟಿ ಅವ್ಯವಸ್ಥೆಯಿಂದ ವಾಹನ ಮಾಲಕರಿಗೆ ಇಂಧನ ನಷ್ಟ ಉಂಟಾಗುತ್ತಿದೆ. ಸುತ್ತು ಬಳಸಿನ ದಾರಿಯಲ್ಲಿ ಸಂಚರಿಸುವ ಕಾರಣ ಅಧಿಕ ಇಂಧನ ವ್ಯಯವಾಗುತ್ತಿದೆ. ಪ್ರಯಾಣಿಕರಿಗೆ ವಾಹನಗಳು ಯಾವ ರಸ್ತೆಯಿಂದ ತಾವು ತಲುಪಬೇಕಾದ ಸ್ಥಳಕ್ಕೆ ಸಂಚರಿಸುತ್ತವೆ ಎಂಬ ಗೊಂದಲದ ಜತೆ ಸಮಯದ ನಷ್ಟವು ಉಂಟಾಗುತ್ತಿದೆ. ಸರಕು ಸಾಗಾಟ ವಾಹನಗಳು ಸುತ್ತು ಬಳಸಿ ಬರುವ ಕಾರಣ ತರಕಾರಿ, ದಿನಸಿ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಜನ ಸಾಮಾನ್ಯರಿಗೆ ತಟ್ಟಿದೆ.
ಬೆಳಿಗ್ಗೆ 6ರಿಂದ ಸಂಜೆ 6ರ ತನಕ ಪ್ರವೇಶಾವಕಾಶ ಇರುವ ಕಾರಣ ಕೆಲವೊಂದು ಬೆಂಗಳೂರು ಹಾಗೂ ಇನ್ನಿತರ ಕಡೆಯಿಂದ ಆಗಮಿಸುವ ರಾತ್ರಿ ಬಸ್ಸುಗಳು ಶಿರಾಡಿ ಪ್ರದೇಶಕ್ಕೆ ಬೇಗನೆ ಆಗಮಿಸಿ ಬೆಳಿಗ್ಗೆ 6 ಗಂಟೆ ಬಳಿಕ ಪ್ರಯಾಣಿಸುತ್ತಿವೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
“ಶಿರಾಡಿ ಘಾಟ್ ದುರಸ್ತಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಇದರ ಸಂಪರ್ಕ ರಸ್ತೆ ದುರಸ್ತಿಗೆ 4 ಕೋಟಿಗಿಂತ ಅಧಿಕ ರೂ.ಅನುದಾನ ಬಿಡುಗಡೆ ಹೊಂದಿದೆ. ಕಾಮಗಾರಿ ಶೀಘ್ರ ಮುಗಿಯಲಿದ್ದು ಬಳಿಕ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು”
ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ ದಕ