ಅಡಕೆಯನ್ನು ಕಾಡುತ್ತಿದೆ ಕೊಳೆರೋಗ ➤ ಔಷಧ ಸಿಂಪಡಿಸುವ ಕಾರ್ಮಿಕರ ಕೊರತೆ ➤ ಸಂಕಷ್ಟದಲ್ಲಿ ಕೃಷಿಕರು

ಶೇರ್ ಮಾಡಿ

ನೇಸರ ಆ.01: ದಕ ಜಿಲ್ಲೆಯ ಹಲವು ತಾಲೂಕುಗಳ ಮುಖ್ಯ ಬೆಳೆ ಅಡಕೆ. ಸದ್ಯ ಅಡಕೆಗೆ ವಿಪರೀತ ಕೊಳೆ ರೋಗ ಹರಡುತ್ತಿದ್ದು ಕೃಷಿಕರು ಕಂಗಾಲಾಗುವ ಪರಿಸ್ಥಿತಿ ಉಂಟಾಗಿದೆ.
ಜುಲೈ ತಿಂಗಳಲ್ಲಿ ಕರಾವಳಿಯಾದ್ಯಂತ ನಿರಂತರವಾಗಿ ಸುರಿದ ಮಳೆಯಿಂದ ಕೊಳೆ ರೋಗ ಹಬ್ಬಿದೆ. ಈ ಬಾರಿ ಹೆಚ್ಚಿನ ಕಡೆ ಅಡಕೆ ಫಸಲು ಕೂಡ ಸಾಮಾನ್ಯವಾಗಿದೆ. ಇಂತಹ ಸ್ಥಿತಿಯಲ್ಲಿ ಕೊಳೆರೋಗ ಹಬ್ಬುತ್ತಿರುವುದು ಇರುವ ಫಸಲು ನಷ್ಟಕ್ಕು ಕಾರಣವಾಗಿದೆ.
ಶಿಲೀಂಧ್ರಗಳ ಮೂಲಕ ಹರಡುವ ಕೊಳೆರೋಗ ಅತಿ ವೇಗವಾಗಿ ಹರಡುತ್ತದೆ. ಒಮ್ಮೆ ಆರಂಭವಾದರೆ ನಿಯಂತ್ರಣವು ಕಷ್ಟ ಸದ್ಯದ ಬಿಸಿಲು ಹಾಗೂ ಮಳೆಯ ವಾತಾವರಣ ಇನ್ನೂ ಅಪಾಯಕಾರಿ. ಕಳೆದ ಒಂದು ವಾರದಿಂದ ಕೊಂಚ ವಿರಾಮ ನೀಡಿದ ಮಳೆ ಈಗ ಮತ್ತೆ ಆರಂಭವಾಗಿರುವುದು ಔಷದ ಸಿಂಪಡಣೆಗೂ ಅಡ್ಡಿ ನೀಡಿದೆ.
ಬೆಳ್ತಂಗಡಿ ತಾಲೂಕಿನ ಶಿಬಾಜೆ, ಶಿಶಿಲ, ಹತ್ಯಡ್ಕ, ನಿಡ್ಲೆ, ಕೊಕ್ಕಡ, ಕಲ್ಮಂಜ, ಮುಂಡಾಜೆ, ಕಡಿರುದ್ಯಾವರ ಮೊದಲಾದ ಗ್ರಾಮಗಳಲ್ಲಿ ಕೊಳೆ ರೋಗದ ಅಡಕೆ ರಾಶಿ ರಾಶಿಯಾಗಿ ಉದುರುತ್ತಿರುವ ಕುರಿತು ಕೃಷಿಕರು ತಿಳಿಸಿದ್ದಾರೆ. ಇದನ್ನು ನಿಯಂತ್ರಿಸಲು ಹರಸಾಹಸ ಪಡುವ ಸ್ಥಿತಿ ಏರ್ಪಟ್ಟಿದೆ.

ಔಷಧ ಸಿಂಪಡಣೆ
ಸಾಮಾನ್ಯವಾಗಿ ಮೇ ಮಧ್ಯ ಭಾಗದಿಂದ ಜೂನ್ ತಿಂಗಳ ಆರಂಭದಲ್ಲಿ ಸಣ್ಣ ಅಡಕೆ ಬೆಳೆಯಲು ಆರಂಭವಾಗುತ್ತದೆ. ಈ ಸಮಯದಲ್ಲಿ ಅಡಕೆಗೆ ಬೋರ್ಡೋ ಮಿಶ್ರಣ ಸಿಂಪಡಣೆ ಅಗತ್ಯ. ಒಂದು ತಿಂಗಳು ಅಥವಾ 40 ದಿನಗಳಲ್ಲಿ ಇನ್ನೊಂದು ಸಿಂಪಡಣೆ ಮಾಡಬೇಕು. ಈ ಬಾರಿ ಜೂನ್ ತಿಂಗಳಲ್ಲಿ ಬಹಳ ಕಡಿಮೆ ಮಳೆಯಾಗಿತ್ತು. ಈ ಸಮಯ ಹಾಗೂ ಮೇ ಅಂತ್ಯದೊಳಗೆ ಪ್ರಥಮ ಸಿಂಪಡಣೆ ಆದವರು ಜುಲೈ ಅಂತ್ಯದೊಳಗೆ ಎರಡನೇ ಸಿಂಪಡಣೆ ಪೂರೈಸಬೇಕು. ಆದರೆ ಜುಲೈ ತಿಂಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಅನೇಕ ಕಡೆ ಅಡಕೆ ತೋಟಗಳಲ್ಲಿ ದ್ವಿತೀಯ ಹಂತದ ಸಿಂಪಡಣೆಗೆ ಅವಕಾಶ ಸಿಕ್ಕಿಲ್ಲ. ಈ ಬಾರಿಯ ವಾತಾವರಣ ಕೊಳೆರೋಗಕ್ಕೆ ಪೂರಕವಾಗಿದೆ.

ನುರಿತ ಕೆಲಸಗಾರರ ಅಲಭ್ಯತೆ
ಒಂದೆಡೆ ಅಡಕೆ ಬೆಳೆಗೆ ಮಳೆ ತೊಂದರೆ ನೀಡುತ್ತಿದ್ದರೆ ಇನ್ನೊಂದೆಡೆ ಔಷಧ ಸಿಂಪಡಿಸುವ ಕಾರ್ಮಿಕರ ಕೊರತೆ ಇದೆ. ಅಡಕೆ ಔಷಧಿ ಸಿಂಪಡಣೆಗೆ ಸಾಕಷ್ಟು ಯಂತ್ರಗಳ ಆವಿಷ್ಕಾರವಾಗಿದ್ದರೂ ಇನ್ನಷ್ಟು ಅಭಿವೃದ್ಧಿ ಹೊಂದಿದರೆ ಮಾತ್ರ ಪರಿಣಾಮಕಾರಿಯಾಗಬಹುದು.
ಒಂದು ಪ್ರದೇಶದಲ್ಲಿ ಇರುವ ಬೆರಳೆಣಿಕೆಯ ನುರಿತ ಕಾರ್ಮಿಕರು ಅನೇಕ ತೋಟಗಳಲ್ಲಿ ಔಷಧ ಸಿಂಪಡಣೆ ನಡೆಸುತ್ತಾರೆ. ಇದರಿಂದ ಸಮಯಕ್ಕೆ ಸರಿಯಾಗಿ ಔಷಧ ಸಿಂಪಡಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಅನೇಕ ಕಡೆ ಪ್ರಥಮ ಹಂತದ ಸಿಂಪಡಣೆಯಾಗಿದ್ದು, ದ್ವಿತೀಯ ಹಂತದ ಸಿಂಪಡಣೆ ಪೂರ್ಣಗೊಳ್ಳಲು ಹಲವು ದಿನ ಮಳೆ ಕಡಿಮೆಯಾಗ ಬೇಕಾದ ಅಗತ್ಯವಿದೆ. ಮಳೆ ಕಡಿಮೆಯಾಗಿ ಬಿಸಿಲು ಬಂದರೆ ಸಿಂಪಡಣೆ ಹಾಗೂ ರೋಗ ನಿಯಂತ್ರಣಕ್ಕೆ ಪೂರಕವಾಗುತ್ತದೆ. ಮಳೆ ಹೀಗೆ ಮುಂದುವರಿದರೆ ಅಡಕೆ ಕೃಷಿಕರಿಗೆ ಮಾರಕವಾಗಲಿದೆ.

Leave a Reply

error: Content is protected !!