ನೇಸರ ನ.23: ಕಿತ್ತಲೆ ಹಣ್ಣು ಮಾರಿ ದೈನಂದಿನ ಉಳಿಕೆಯಿಂದ ತನ್ನೂರಿನ ಶಾಲೆ ತೆರೆದು ತಾನು ಶಿಕ್ಷಣ ಪಡೆಯದಿದ್ದರೂ ತನ್ನೂರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಧೃಡ ಸಂಕಲ್ಪದೊಂದಿಗೆ ರಾಷ್ಟ್ರದ ಮನೆ ಮಾತಾದ ಅಕ್ಷರ ಸಂತರಾಗಿ ಇತ್ತೀಚಿಗೆ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಕೊಂಡ ಹರೆಕ್ಕಳ ಹಾಜಬ್ಬರವರಿಗೆ ಹಾಜಬ್ಬ ಅಭಿನಂದನಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿ ಜನತೆಯ ಪರವಾಗಿ ಅಭಿನಂದನಾ ಸಮಾರಂಭ ನ.23ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಜರುಗಿತು.
ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಹಾಗೂ ರೋಟರಿ ಕ್ಲಬ್ ಉಜಿರೆ ಇದರ ಸಹಭಾಗಿತ್ವದಲ್ಲಿ ನಡೆದ ಅಭಿನಂದನಾ ಸಮಾರಂಭವನ್ನು ಕಾಲೇಜು ವಿದ್ಯಾರ್ಥಿಗಳು ಹರೇಕಳ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹರೆಕ್ಕಳ ಹಾಜಬ್ಬರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಧ್ಯಕ್ಷತೆಯನ್ನುಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರವರು ವಹಿಸಿದ್ದರು. ಹರೀಶ್ ಪೂಂಜರವರು ಕಾರ್ಯಕ್ರಮದಲ್ಲಿರುವ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, ಹಾಜಬ್ಬ ಅಭಿನಂದನಾ ಸಮಿತಿಯಿಂದ ಹರೇಕಳ ಶಾಲೆಗೆ ಒಂದು ಶಾಲಾ ಕೊಠಡಿ ನಿರ್ಮಾಣ ಕಾರ್ಯಕ್ಕೆ ರೂ.5 ಲಕ್ಷ ಸಹಾಯಧನ ಹಾಗೂ ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಶಾಲೆಗೆ 20 ಸಾವಿರ ಮೌಲ್ಯದ ಕ್ರೀಡಾ ಸಾಮಾಗ್ರಿಗಳು ಮತ್ತು 80 ಸಾವಿರ ಮೌಲ್ಯದ 10 ಜೊತೆ ಪೀಠೋಪಕರಣ ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಹಾಜಬ್ಬರವರನ್ನು ಅಭಿನಂದಿಸುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಕ್ಷರ ಸಂತ ಹರೇಕಳ ಹಾಜಪ್ಪ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಉಜಿರೆ ಶ್ರೀ ಧ.ಮಂ ಪದವಿ ಕಾಲೇಜು ಪ್ರಾಂಶುಪಾಲ ಡಾ. ಸತೀಶ್ಚಂದ್ರ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಎನ್ ಜೋಸೆಫ್, ಪುಂಜಾಲಕಟ್ಟೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಗಣಪತಿ ಭಟ್ ಕುಳಮರ್ವ, ಬೆಳ್ತಂಗಡಿ ಪದವಿ ಕಾಲೇಜು ಪ್ರಾಂಶುಪಾಲ ಫ್ರೊ| ಆಂಟೊನಿ, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್, ಉಜಿರೆ ಸಂಧ್ಯಾ ಟ್ರೆಡರ್ಸ್ ನ ರಾಜೇಶ್ ಪೈ, ಪುಂಜಾಲಕಟ್ಟೆ ಕಾಲೇಜು ಪ್ರೊಫೆಸರ್ ಸುಮಂತ್, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಅಬೂಬಕ್ಕರ್, ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು, ರೋಟರಿ ಕ್ಲಬ್ ಸದಸ್ಯರು, ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಾಜಬ್ಬ ಅಭಿಮಾನಿ ಬಳಗದವರು ಭಾಗವಹಿಸಿದ್ದರು.