ತಂಬಾಕು ಸೇವನೆ ದುಷ್ಪರಿಣಾಮ ಮತ್ತು ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ಹಾಗೂ ಆರೋಗ್ಯ ಜಾಗೃತಿ ಜಾಥಾ: ನೆಲ್ಯಾಡಿ

ಶೇರ್ ಮಾಡಿ

ನೇಸರ ನ24: ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜು ಇದರ ಎನ್ನೆಸ್ಸೆಸ್ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ್ ನೆಲ್ಯಾಡಿ ಹಾಗೂ ಸಂಜೀವಿನಿ ಸಂಸ್ಥೆ ಬೆಂಗಳೂರು ಸಹಯೋಗದೊಂದಿಗೆ ತಂಬಾಕು ಸೇವನೆ ದುಷ್ಪರಿಣಾಮ ಮತ್ತು ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ಹಾಗೂ ಆರೋಗ್ಯ ಜಾಗೃತಿ ಜಾಥಾ ಕಾರ್ಯಕ್ರಮ ನ24 ಬುಧವಾರದಂದು ನೆಲ್ಯಾಡಿಯಲ್ಲಿ ನಡೆಯಿತು.

ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಆವರಣದಿಂದ ಹೊರಟ ಜಾಥಾ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದುವರೆದು ನೆಲ್ಯಾಡಿ ಅಂಚೆ ಕಚೇರಿ ಬಳಿ ಸಭೆ ಸೇರಿ. ಜಾಥಾದಲ್ಲಿ ಎನ್ಎಸ್ಎಸ್ ಸ್ವಯಂಸೇವಕರು ತಂಬಾಕು ಸೇವನೆಯ ದುಷ್ಪರಿಣಾಮದ ಬಗ್ಗೆ ಘೋಷಣೆಗಳನ್ನು ಉದ್ಘೋಷಿಸುತ್ತಾ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವ ಪ್ರಯತ್ನವನ್ನು ಮಾಡಿದರು.

ಈ ಸಂದರ್ಭದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕ ಅಬ್ರಹಾಂ ವರ್ಗೀಸ್ ರವರು ತಂಬಾಕು ಸೇವನೆ ದುಷ್ಪರಿಣಾಮ ಹಾಗೂ ಆರೋಗ್ಯ ಮಾಹಿತಿ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಆರೋಗ್ಯವಂತ ಬದುಕು ನಮ್ಮದಾಗಬೇಕಾದರೆ ಉತ್ತಮ ಆಹಾರಸೇವನೆಯನ್ನು ಮಾಡುವುದರೊಂದಿಗೆ ತಂಬಾಕು ಸೇವನೆ, ಧೂಮಪಾನ, ಮದ್ಯಪಾನ ಮುಂತಾದ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ತಿಳಿಸಿದರು. ಸಂತ ಜಾರ್ಜ್ ಪದವಿಪೂರ್ವಕಾಲೇಜು ಎನ್ನೆಸ್ಸೆಸ್ ಘಟಕದ ಕಾರ್ಯಕ್ರಮಾಧಿಕಾರಿ ವಿಶ್ವನಾಥ ಶೆಟ್ಟಿ ತಾವೇ ರಚಿಸಿದ ” ತಂಬಾಕು ಸೇವನೆ ಹಾನಿಕರ ಎಂದು ತಿಳಿದುಕೊಳ್ಳಿರಣ್ಣ ” ಎಂಬ ಜಾಗೃತಿ ಗೀತೆಯನ್ನು ಹಾಡಿದರು. ಬೆಳ್ತಂಗಡಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಇವರು ಬೀಡಿ,ಸಿಗರೇಟ್ ಹಾಗೂ ತಂಬಾಕು ಸೇವನೆಯಿಂದ ಬಾಯಿ ಧ್ವನಿಪೆಟ್ಟಿಗೆ, ಅನ್ನನಾಳ,ಕರುಳು,ಶ್ವಾಸಕೋಶ ಮುಂತಾದ ಅಂಗಗಳು ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ.ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ ಸಿಗರೇಟ್ ಮುಂತಾದ ತಂಬಾಕು ಉತ್ಪನ್ನಗಳನ್ನು ಬಳಸಿದಾಗ ಅದರಿಂದ ಉಂಟಾಗುವ ಹೊಗೆ ಅಲ್ಲಿ ಸೇರಿರುವ ಸಾರ್ವಜನಿಕರ ಆರೋಗ್ಯದ ಮೇಲೆ ಕೂಡ ಪರಿಣಾಮವನ್ನು ಬೀರುತ್ತದೆ ಎಂದು ನುಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ತಂಬಾಕು ಸೇವನೆ, ಮುಂತಾದವುಗಳ ಬಗ್ಗೆ ಸರಕಾರವು ಕಾನೂನುಗಳನ್ನು ಜಾರಿ ಗೊಳಿಸಿದ್ದು ಈ ಬಗ್ಗೆ ಸಾರ್ವಜನಿಕರಿಗೆ ಕಾನೂನಿನ ಮಾಹಿತಿಯನ್ನು ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಇಲ್ಲಿನ ವೈದ್ಯಾಧಿಕಾರಿ ಡಾ. ಶಿಶಿರ ರವರು ಮಾತನಾಡುತ್ತಾ ಯುವಜನತೆಯಲ್ಲಿ ಇತ್ತೀಚೆಗೆ ತಂಬಾಕು ಸೇವನೆಯ ಚಟ ಹೆಚ್ಚಾಗಿ ಕಂಡುಬರುತ್ತಿದ್ದು ಈ ಬಗ್ಗೆ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ನಡೆಯಬೇಕು ಎಂದು ನುಡಿದರು. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಯಾರಾದರೂ ತಂಬಾಕು ಸೇವನೆ ಮಾಡುತ್ತಿದ್ದರೆ ಅವರಿಗೆ ತಿಳಿ ಹೇಳಬೇಕು ಮತ್ತು ತಮ್ಮ ಸ್ನೇಹಿತರು ಯಾರಾದರೂ ಈ ಚಟಕ್ಕೆ ಬಲಿಯಾಗಿದ್ದರೆ ಅವರ ಬಗ್ಗೆ ತಕ್ಷಣ ವೈದ್ಯಾಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ನುಡಿದರು. ಸಂಜೀವನಿ ಸಂಸ್ಥೆಯ ಸಂಯೋಜಕರಾದ ಶಿಖಾ ಶೆಟ್ಟಿ ಯವರು ಮಾತನಾಡುತ್ತಾ ಕೋವಿಡ್ ಮಹಾಮಾರಿಯ ಈ ಅವಧಿಯಲ್ಲಿ ನಾವೆಲ್ಲರೂ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಏಲಿಯಾಸ್ ಎಂ. ಕೆ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಂದರ್ಶಕರಾದ ಅನ್ನಮ್ಮ ಕೆ.ಸಿ, ಶಿರಾಡಿ ಆರೋಗ್ಯ ಕೇಂದ್ರದ ಸಿಬ್ಬಂದಿ ಸಿದ್ದೇಶ್, ಸಂತ ಜಾರ್ಜ್ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು ವೆಂಕಟ್ರಮಣ ಆರ್ ಉಪಸ್ಥಿತರಿದ್ದರು. ಎನ್ಎಸ್ಎಸ್ ಘಟಕ ನಾಯಕ ವಿನೀತ್ ಮಂತೆರೋ, ನಾಯಕಿ ಭವಿಷ್ಯ ಹಾಗೂ ಎನ್ಎಸ್ಎಸ್ ಸ್ವಯಂಸೇವಕರು, ಉಪನ್ಯಾಸಕ ವೃಂದ ಸಂಜೀವನಿ ಸಂಸ್ಥೆಯ ಸದಸ್ಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಇದೇ ಸಂದರ್ಭದಲ್ಲಿ ಎನ್ಎಸ್ಎಸ್ ಸ್ವಯಂಸೇವಕರು ತಂಬಾಕು ಸೇವನೆಯ ದುಷ್ಪರಿಣಾಮ ಮತ್ತು ಆರೋಗ್ಯ ಮಾಹಿತಿ ಕರಪತ್ರವನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸಿದರು. ಹಾಗೂ ಸಂಜೀವನಿ ಸಂಸ್ಥೆಯ ಸದಸ್ಯರಿಂದ ಆರೋಗ್ಯ ಮಾಹಿತಿಯ ಬೀದಿ ನಾಟಕವು ನಡೆಯಿತು.

Leave a Reply

error: Content is protected !!