ನೇಸರ ಆ.30:ಭಗವಂತನ ಅನುಷ್ಠಾನದಲ್ಲಿ ತಲ್ಲೀನರಾಗುವವರಿಗೆ ಶಾಂತಿ, ನೆಮ್ಮದಿ ಇರುತ್ತದೆ. ಭಗವಂತನು ಶ್ರದ್ಧಾಪೂರ್ವಕ ಭಕ್ತಿಯನ್ನು ನೋಡುತ್ತಾನೆ ಹೊರತು ದರಬಾರಿನ ಭಕ್ತಿಗೆ ಒಲಿಯುವುದಿಲ್ಲ. ಭಕ್ತಿಯ ಮನಸ್ಸು ತೈಲಧಾರೆಯಂತೆ ಹರಿಯಬೇಕು.ಇದಕ್ಕೆ ಯಾವುದೇ ಅಡೆ-ತಡೆ ಉಂಟಾಗಬಾರದು. ಪರಸ್ಪರ ನಂಬಿಕೆಯಿಂದ ಪೂರಕವಾದ ಬದುಕು ನಿರ್ಮಿಸಲು ಸಾಧ್ಯ ಬದುಕು ಕಟ್ಟುವ ತಾಕತ್ತು ನಮ್ಮಲ್ಲೇ ಇದ್ದು ಶ್ರೇಷ್ಠ ಮಾನವನಾಗಿ ಬದುಕಿ ಇತರರಿಗೆ ಮಾದರಿಯಾಗಬೇಕು
ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಅವರು ಆ.29 ರಂದು ತಮ್ಮ 48 ದಿನಗಳ ಚಾತುರ್ಮಾಸ್ಯ ಸಮಾಪನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಧರ್ಮದ ಬಗ್ಗೆ ಅಂತರಾಳದಿಂದ ಕೆಲಸ ನಡೆಯಬೇಕು. ಅಧಿಕಾರವು ಇತರರನ್ನು ಹಗುರವಾಗಿ ಕಾಣುವ ಭಾವನೆ ಹೊಂದಬಾರದು. ಸೇವೆಯನ್ನು ನೀಡುವುದರ ಮೂಲಕ ಗೌರವವನ್ನು ಹೆಚ್ಚಿಸಿಕೊಳ್ಳುವ ಕೆಲಸ ಮಾಡುತ್ತಾ ಅಹಿಂಸೆ, ಸಹನೆ,ಸತ್ಕರ್ಮಗಳ ಮೂಲಕ ನಡೆದರೆ ಲೋಕಕಲ್ಯಾಣವಾಗುವುದು. ಕಲಿಯುಗದಲ್ಲಿ ಪುಣ್ಯದ ಕೈಂಕರ್ಯಗಳು ಅತಿ ಹೆಚ್ಚು ನಡೆಯಬೇಕಾದ ಅಗತ್ಯವಿದೆ ಎಂದು ಹೇಳಿದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜ ಮಾತನಾಡಿ ಭಕ್ತರ, ಸ್ವಯಂ ಸೇವಕರ, ತಾಲೂಕಿನ ಹಾಗೂ ನಾನಾ ಜಿಲ್ಲೆಯ ಭಕ್ತರ ನಿರಂತರ ಸೇವೆಯಿಂದ ಚಾತುರ್ಮಾಸ್ಯ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿದೆ. ಪೂರ್ಣ ಪ್ರಮಾಣದ ಜವಾಬ್ದಾರಿಯೊಂದಿಗೆ ಭಕ್ತಿ ಭಾವದ ಸೇವೆ ನಡೆದಿದೆ ಎಂದರು.
ಕುಮಟಾ ಶಾಸಕ ದಿನಕರ ಶೆಟ್ಟಿ, ಬಿಜೆಪಿ ಹಿಂದುಳಿದ ವರ್ಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್ ಪಾದುಕಾ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಚಾತುರ್ಮಸ್ಯ ಸಮಿತಿ ಸಂಚಾಲಕ ಜಯಂತ್ ಕೋಟ್ಯಾನ್, ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಪ್ರಶಾಂತ ಪಾರೆಂಕಿ ರತ್ನಾಕರ ಬುಣ್ಣನ್, ಶಶಿಧರ ಕಲ್ಮಂಜ, ಗುರುದೇವ ಮಠದ ಟ್ರಸ್ಟಿ ತುಕರಾಮ್ ಸಾಲಿಯಾನ್,
ಶ್ರೀ ರಾಮ ಕ್ಷೇತ್ರ ಸಮಿತಿಯ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಕೃಷ್ಣಪ್ಪ ಗುಡಿಗಾರ್, ರಾಜೇಶ್ ಮೂಡುಕೋಡಿ, ಪ್ರೀತಂ ಧರ್ಮಸ್ಥಳ, ಅಶೋಕ್ ಕುಮಾರ್ ಕಡಿರುದ್ಯಾವರ, ಸುಜಾತಾ ಅಣ್ಣಿ ಪೂಜಾರಿ,ಚಿದಾನಂದ ಇಡ್ಯಾ,ಅಣ್ಣಿ ಪೂಜಾರಿ ಅನಿಲ್ ಕುಮಾರ್ ಹಾಗೂ ಭಕ್ತರು ಹಾಜರಿದ್ದರು. ಸೀತಾರಾಮ ಬೆಳಾಲು ಕಾರ್ಯಕ್ರಮ ನಿರೂಪಿಸಿದರು.
ಚಾತುರ್ಮಾಸ್ಯ ಸಮಾಪನದ ದಿನದಂದು ಶ್ರೀ ಗುರುದೇವ ಮಠದಲ್ಲಿ ಯಜ್ಞ,ಯಾಗ, ಸ್ವಾಮಿಯವರ ಸೀಮೋಲ್ಲಂಘನ, ನೇತ್ರಾವತಿ ನದಿಯಲ್ಲಿ ಗಂಗಾ ಪೂಜೆ,ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಭೇಟಿ ಯ ಬಳಿಕ ಕನ್ಯಾಡಿಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಮತ್ತು ಪರಿವಾರ ದೇವರುಗಳಿಗೆ ವಿಶೇಷ ಪೂಜೆ ನಂತರ ಗುರುದೇವ ಮಠಕ್ಕೆ ಮೆರವಣಿಗೆ ಮೂಲಕ ಆಗಮಿಸಿ, ಆಶೀರ್ವಚನ, ಫಲಮಂತ್ರಾಕ್ಷತೆ, ಪ್ರಸಾದ ವಿತರಣೆ,ಅನ್ನ ಸಂತರ್ಪಣೆ ಇನ್ನಿತರ ಕಾರ್ಯಕ್ರಮಗಳು ಜರಗಿದವು.