ನೆಲ್ಯಾಡಿ: ಇಲ್ಲಿನ ರಾ.ಹೆ.75 ರ ಪಕ್ಕದಲ್ಲಿ ಇರುವ ಕಾನ್ವೆಂಟ್‌ಗೆ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಸೆ. 28ರಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಡಬ ತಾಲೂಕಿನ ಪೇರಡ್ಕ ನಿವಾಸಿಗಳಾದ ಸದ್ದಾಂ ಹಾಗೂ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.
ಇವರು ಸೆ.27ರಂದು ಸಂಜೆ ನೆಲ್ಯಾಡಿಯಲ್ಲಿರುವ ಬೆಥನಿ ಕಾನ್ವೆಂಟ್‌ಗೆ ಹೋಗಿ ಕಾನ್ವೆಂಟ್‌ಗೆ ಅಕ್ರಮವಾಗಿ ಪ್ರವೇಶ ಮಾಡಿ. ಈ ಬಗ್ಗೆ ಅಲ್ಲಿನ ಸಿಸ್ಟರ್ ಪರಿಮಳರವರು, ಈ ಸಮಯಕ್ಕೆ ನೀವು ಇಲ್ಲಿಗೆ ಯಾಕೆ ಬಂದಿದ್ದೀರಿ ಎಂದು ಕೇಳಿದಾಗ. ಅಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ನೆರೆಹೊರೆಯ ಹುಡುಗಿಯನ್ನು ಭೇಟಿ ಮಾಡಿಸುವಂತೆ ಹೇಳಿದ್ದಾರೆ. ಆದರೆ ಕಾನ್ವೆಂಟ್ ನಲ್ಲಿರುವ ನಿಯಮದ ಪ್ರಕಾರ ಆ ರೀತಿಯ ಭೇಟಿಯ ಅವಕಾಶ ಇಲ್ಲದಿರುವ ಕಾರಣ ಅಲ್ಲಿನ ಸಿಬ್ಬಂದಿ ಅದನ್ನು ನಿರಾಕರಿಸಿದ್ದಾರೆ. ಈ ಸಂದರ್ಭ ಆರೋಪಿಗಳು ಸಿಬ್ಬಂದಿಗೆ ಅವಾಚ್ಯವಾಗಿ ಬೈದಿದ್ದಾರೆ. ಇದೇ ವೇಳೆ ಚರ್ಚ್‌ನಲ್ಲಿ ಸಭೆ ನಡೆಯುತ್ತಿದ್ದು, ಇವರ ಬೊಬ್ಬೆ ಕೇಳಿ ಸೋನು ಜಾರ್ಜ್ ಎಂಬವರು ಅಲ್ಲಿಗೆ ಬಂದಾಗ ಆರೋಪಿಗಳು ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿ, ನಿಮ್ಮಿಂದ ನಮ್ಮನ್ನು ಏನು ಮಾಡಲು ಸಾಧ್ಯ ಇಲ್ಲ. ಈ ವಿಚಾರವನ್ನು ನೀವು ಯಾರಿಗಾದರೂ ಹೇಳಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಹೊರಟ ಹಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪರಿಮಳ ಅವರು ನೀಡಿದ ದೂರಿನಂತೆ ಸದ್ದಾಂ ಹಾಗೂ ಇಸ್ಮಾಯಿಲ್ ಅವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇಬ್ಬರು ಆರೋಪಿಗಳು ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ.