ಕೊಕ್ಕಡ: ರಾಷ್ಟ್ರೀಯ ಸೇವಾ ಯೋಜನೆಯ ಗೀತೆಯನ್ನು ಸಂಗೀತಕ್ಕಾಗಿಯಾಗಲಿ, ಗೀತೆಗಾಗಿಯಾಗಲಿ ಅಥವಾ ಹಾಡಿಗಾಗಿ ಆಗಲಿ ಹಾಡದೇ ಸಾಹಿತ್ಯವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅದರಲ್ಲಿ ಅಡಕವಾಗಿರುವ ಅಂಶಗಳು ಜೀವನಕ್ಕೆ ಪೂರಕವಾಗಿದೆ. ಗಾಂಧೀಜಿಯವರ ಜನ್ಮ ಶತಾಬ್ದಿಯ ದಿನದಂದು ಅವರ ಕನಸಿನ ಗ್ರಾಮ ಸ್ವರಾಜ್ಯ ಹಾಗೂ ರಾಮ ರಾಜ್ಯದ ನಿರ್ಮಾಣದ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಆರಂಭಗೊಂಡಿತು. ಅದಕ್ಕೆ ಪೂರಕವಾಗುವ ಕೆಲಸಗಳು ನಡೆದುಕೊಂಡು ಬರುತ್ತಿದೆ. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಮೂಲಕ ರಾಜ್ಯ ಕಟ್ಟುವ, ದೇಶ ಕಟ್ಟುವ ಕೆಲಸ ಆಗಬೇಕು ಅಲ್ಲದೆ ವ್ಯಕ್ತಿತ್ವ ವಿಕಸನವಾಗುವಂತಹ ಕೆಲಸ ಆಗಬೇಕಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಕೇವಲ ಮೈದಾನ ವಿಸ್ತರಣೆ, ಶ್ರಮದಾನ ಮಾಡುವ ಬದಲಿಗೆ ಇಂದು ಕೃಷಿ ಚಟುವಟಿಕೆಗಳು ನಾಶವಾಗುತ್ತಿದೆ ಅವುಗಳು ಅಳಿವಿನ ಅಂಚಿನಲ್ಲಿ ಇವೆ. ನೆಲ ಹುಲುಸಾಗಿದ್ದರೆ ನಾವು ನೆಮ್ಮದಿಯಿಂದ ಉಸಿರಾಡಲು ಸಾಧ್ಯ ಹಾಗಾಗಿ ನಾವುಗಳು ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಸಾವಯವ ಕೃಷಿ ಮಾಡುವ ಬಗ್ಗೆ ಅರಿವು ಮೂಡಿಸಬೇಕು, ಪರಿಸರ ಉಳಿಯಬೇಕು, ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು ವಿದ್ಯಾರ್ಥಿಗಳಾದ ನಾವುಗಳು ಈ ಬಗ್ಗೆ ಯೋಚನೆ ಮಾಡಬೇಕು. ದೈಹಿಕವಾಗಿ ಬೌದ್ಧಿಕವಾಗಿ ಹಾಗೂ ಶಾರೀರಿಕವಾಗಿ ಜ್ಞಾನ ವಿಸ್ತರಿಸಲು ಬದುಕು ಕಟ್ಟಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಪ್ರೇರಣಯಾಗಲಿ ಎಂದು ಡಾ. ದಿವಾಕರ ಕೊಕ್ಕಡ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯ ಉಜಿರೆ ಇವರು ಸಂತ ಜಾರ್ಜ್ ವಿದ್ಯಾಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಬ್ರಹ್ಮಣ್ಯ ಶಬರಾಯ, ಮಾಜಿ ಆಡಳಿತ ಮೊಕ್ತೇಸರರು ಶ್ರೀ ಕ್ಷೇತ್ರ ಸೌತಡ್ಕ ಇವರು ಮಾತನಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಆರಂಭವಾದಾಗ ಮೊದಲಿನ ಬ್ಯಾಚಿನ ವಿದ್ಯಾರ್ಥಿಯಾಗಿದ್ದು ವಿದ್ಯಾ ಸಂಸ್ಥೆ ಆರಂಭದ ದಿನಗಳ ಅನುಭವವನ್ನು ಹಂಚಿಕೊಂಡರು.
ಸರಕಾರಿ ಪ್ರೌಢಶಾಲೆ ಕೊಕ್ಕಡದ ದೈಹಿಕ ಶಿಕ್ಷಕಿ ಬೀನಾ ಸಾಗರ್ ಸಂದರ್ಬೋಚಿತವಾಗಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಹೇಗೆ ಮುಂದೆ ಸಾಗಬಹುದು ಎಂಬುದಾಗಿ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಸಂತ ಜಾರ್ಜ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಹರಿಪ್ರಸಾದ್ ಸಮಾರೋಪ ಭಾಷಣದ ಮೂಲಕ ಮಾತನಾಡಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆ ಆರಂಭವಾಗಿದೆ ಎಂದರು. ಭೂಮಿತಾಯಿ ನಮ್ಮನ್ನು ಯಾವತ್ತು ಕೈ ಬಿಡುವುದಿಲ್ಲ, ತಾಯಿಯ ಮೇಲೆ ಅಚಲವಾದ ನಂಬಿಕೆ ಇರಬೇಕು. ಕೃಷಿ ನಂಬಿದಂತವರಿಗೆ ಯಾವತ್ತೂ ಸೋಲಿಲ್ಲ, ರಾಷ್ಟ್ರೀಯ ಸೇವಾ ಯೋಜನೆಯ ಗೀತೆಯಲ್ಲಿ ಬರುವಂತಹ “ಸಮಯೇವ ಜಯತೆ” ಎಂಬ ವಾಕ್ಯದಂತೆ ನಾವು ಶ್ರಮಿಕರಾಗಬೇಕು, ಕಷ್ಟಪಟ್ಟು ಸಮವಹಿಸಿ ದುಡಿದರೆ ಅದಕ್ಕೆ ಫಲ ಸಿಗುತ್ತದೆ. ಅದೇ ರೀತಿ ರಾಷ್ಟ್ರೀಯ ಸೇವಾ ಯೋಜನೆಯ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆಯಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಏಲಿಯಾಸ್ ಎಂ ಕೆ., ರವರು ಮಾತನಾಡಿ ಏಳು ದಿನದ ವಾರ್ಷಿಕ ವಿಶೇಷ ಶಿಬಿರದಲ್ಲಿ ಕಲಿತಂತ ಒಳ್ಳೆಯ ಗುಣಗಳನ್ನು, ಶಿಸ್ತನ್ನು ಜೀವನದಲ್ಲಿ ರೂಡಿಸಿಕೊಳ್ಳಿ, ಆ ಮೂಲಕ ನಿಮ್ಮ ಜೀವನಕ್ಕೆ ಉಜ್ವಲ ಭವಿಷ್ಯ ಉಂಟಾಗಲಿ ಎಂದು ಹಾರೈಸಿದರು, ಅಲ್ಲದೆ ವಾರ್ಷಿಕ ಶಿಬಿರಕ್ಕೆ ಸಹಕರಿಸಿದ ಊರಿನ ಎಲ್ಲರನ್ನು ಸ್ಮರಿಸಿಕೊಂಡು ಕೃತಜ್ಞತೆಯನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಶಾಂತ್ ಸಿ ಎಚ್., ಉಪಸ್ಥಿತರಿದ್ದರು.
ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜೀ ಯವರ ಹುಟ್ಟು ಹಬ್ಬದ ಆಚರಣೆ:
ಆರಂಭದಲ್ಲಿ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜೀ ಯವರ ಹುಟ್ಟು ಹಬ್ಬದ ಪ್ರಯುಕ್ತ ಭಾವಚಿತ್ರವನ್ನು ಇರಿಸಿ ಅತಿಥಿಗಳಿಂದ ಭಾವಚಿತ್ರಕ್ಕೆ ನುಡಿ ನಮನಗಳ ಮೂಲಕ ಪುಷ್ಪವನ್ನು ಸಮರ್ಪಿಸಲಾಯಿತು.
ಸನ್ಮಾನ :
ಕೊಕ್ಕಡ ಜನತೆಯ ಪರವಾಗಿ ಸರಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕಿ ಬೀನಾ ಸಾಗರ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಗಿರಿಯಪ್ಪ ಗೌಡ, ಕೊಕ್ಕಡ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಯೋಗೀಶ್ ಆಲಂಬಿಲ, ಕೊಕ್ಕಡದ ಉದ್ಯಮಿ ನಾರಾಯಣ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಸಿ ಎಚ್., ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಉಮ್ಮರ್ ಬೈಲಂಗಡಿ ರವರು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ನಿರ್ದೇಶಕರಾದ ಏಲಿಯಾಸ್ ಎಂ ಕೆ., ಯೋಜನಾಧಿಕಾರಿಯಾದ ವಿಶ್ವನಾಥ್ ಶೆಟ್ಟಿ ಕೆ., ರವರಿಗೆ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ ಹಾಗೂ ಸ್ಮರಣೆಕೆಯನ್ನು ನೀಡಿ ಗೌರವಿಸಲಾಯಿತು.
ಸಹ ಶಿಬಿರಾಧಿಕಾರಿ ಮಧು ಎ ಜೆ., ಕಚೇರಿ ಸಹಾಯಕ ಸಿಜು ಹಾಗೂ ಶಿಬಿರಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬೆಸ್ಟ್ ಕ್ಯಾಂಪರ್ ಅವಾರ್ಡ್:
ಏಳು ದಿವಸಗಳ ಎನ್ಎಸ್ಎಸ್ ಶಿಬಿರದಲ್ಲಿ ತಮ್ಮನ್ನು ಸರ್ವಾಂಗೀಣ ವಾಗಿ ತೊಡಗಿಸಿಕೊಂಡು ಶಿಬಿರಾಧಿಕಾರಿಗಳಿಗೆ ವಿಧೇಯರಾಗಿದ್ದು ಎನ್ಎಸ್ಎಸ್ ನ ದ್ಯೇಯೋದ್ದೇಶಗಳನ್ನು ಅರಿತುಕೊಂಡು, ಎಲ್ಲಾ ಚಟುವಟಿಕೆಗಳಲ್ಲಿಯೂ ಉತ್ತಮವಾಗಿ ಭಾಗವಹಿಸಿ ಎಲ್ಲಾ ಅಧಿಕಾರಿಗಳ ಹಾಗೂ ಸಹ ಶಿಬಿರಾರ್ಥಿಗಳ ಮತ್ತು ಸಾರ್ವಜನಿಕರ ಮೆಚ್ಚುಗೆಯನ್ನು ಗಳಿಸಿ ಬೆಸ್ಟ್ ಕ್ಯಾಂಪರ್ ಅವಾರ್ಡ್ ಅನ್ನು ಗಳಿಸಿದ ಶಿಬಿರಾರ್ಥಿಗಳು ಪ್ರಜ್ವೀತ್ ದ್ವಿತೀಯ. ವಾಣಿಜ್ಯ. ಮತ್ತು ಕಾವ್ಯ. ಪ್ರಥಮ ಕಲಾವಿಭಾಗ ಇವರಿಗೆ ನೀಡಲಾಯಿತು.
ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ವಿಶ್ವನಾಥ್ ಶೆಟ್ಟಿ ಕೆ., ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಮಧು ಏ ಕೆ., ಧನ್ಯವಾದ ನೆರವೇರಿಸಿದರು.