ದನದ ಕೊಟ್ಟಿಗೆಗೆ ಬೆಂಕಿ: ದನ ಕರುಗಳಿಗೆ ಗಾಯ

ಶೇರ್ ಮಾಡಿ

ಮುಂಡಾಜೆ: ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಾವಿರಾರು ನಷ್ಟದ ಜತೆ ದನ ಕರುಗಳು ಗಾಯಗೊಂಡ ಘಟನೆ ಇಲ್ಲಿನ ಪಿಲತ್ತಡ್ಕ ಎಂಬಲ್ಲಿ ಭಾನುವಾರ ನಡೆದಿದೆ.
ಇಲ್ಲಿನ ಪೂವಪ್ಪ ಪೂಜಾರಿ ಎಂಬವರ ಪುತ್ರ ಸುರೇಶ ಹೈನುಗಾರರಾಗಿದ್ದು ದನಗಳನ್ನು ಹಟ್ಟಿಯಲ್ಲಿ ಕಟ್ಟಿ ಹಾಕಿ ಸಾಕುತ್ತಿದ್ದಾರೆ. ಒಟ್ಟು ಹಾಲು ಕರೆಯುವ ಐದು ದನ ಹಾಗೂ ಇವುಗಳ ಐದು ಕರುಗಳಿರುವ ಹಟ್ಟಿಗೆ ಬೆಂಕಿ ತಗುಲಿದ್ದು ಬೈ ಹುಲ್ಲು, ಹಿಂಡಿ ಇನ್ನಿತರ ಸಾಮಗ್ರಿಗಳು ಸುಟ್ಟು ಹೋಗಿವೆ. ಬೆಂಕಿಯಿಂದ ದನ ಕರುಗಳಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿವೆ.

ನೆರೆಮನೆಯವರ ಪ್ರಸಂಗಾವಧಾನತೆ:
ದನದ ಕೊಟ್ಟಿಗೆಗೆ ಬೆಂಕಿ ತೆಗೆದು ಸಮಯ ಮನೆ ಮಂದಿ ದನಗಳಿಗೆ ಬೇಕಾದ ಸೊಪ್ಪು, ಹುಲ್ಲು ಇತ್ಯಾದಿಗಳನ್ನು ತರಲು ಹೊರಗಡೆ ಹೋಗಿದ್ದರು.ಈ ಸಮಯ ಪಕ್ಕದ ಮನೆಯ ಶ್ರೀಧರ ಪೂಜಾರಿ ಅವರಿಗೆ ಹಟ್ಟಿಯ ಭಾಗದಿಂದ ಹೊಗೆ ಕಂಡುಬಂದಿದ್ದು ಅಷ್ಟರಲ್ಲಾಗಲೇ ಬೆಂಕಿ ಹಟ್ಟಿಯನ್ನು ವ್ಯಾಪಿಸ ತೊಡಗಿತ್ತು. ಈ ಸಮಯ ದನಕರುಗಳನ್ನು ಕಟ್ಟಿ ಹಾಕಿದ್ದ ಹಗ್ಗಗಳನ್ನು ತುಂಡರಿಸಿ ಹೊರಗೆ ಬಿಡಲಾಯಿತು. ಆದರೂ ಬೆಂಕಿ ವ್ಯಾಪಿಸಿ ದನ ಕರುಗಳಿಗೆ ಗಾಯಗಳಾಗಿವೆ.

ಹಟ್ಟಿಯ ಸಮೀಪವೇ ಇರುವ ಮನೆಗೆ ಬೆಂಕಿಯಿಂದ ಅನಾಹುತ ಉಂಟಾಗದಂತೆ ಸ್ಥಳೀಯರು ಮುನ್ನೆಚ್ಚರಿಕೆ ಕೈಗೊಂಡರು.
ಸ್ಥಳಕ್ಕೆ ಪಶು ವೈದ್ಯ ಪರೀಕ್ಷಕ ಮುಂಡಾಜೆಯ ಗಂಗಾಧರ ಸ್ವಾಮಿ ಆಗಮಿಸಿ ಗಾಯಗೊಂಡ ದನ ಕರುಗಳಿಗೆ ಚಿಕಿತ್ಸೆ ನೀಡಿದ್ದಾರೆ. ದನ ಕರುಗಳಿಗೆ ಆಳವಾದ ಸುಟ್ಟ ಗಾಯಗಳಾಗಿದ್ದು ಗುಣಮುಖವಾಗಲು ಹಲವು ದಿನಗಳ ಅಗತ್ಯವಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ.

Leave a Reply

error: Content is protected !!