ಕಲ್ಮಂಜ: ಸಾಮಾನ್ಯ ಜ್ಞಾನಗಳ ಕ್ರೊಢೀಕರಣವೇ ಕಾನೂನು. ಪ್ರತಿಯೊಬ್ಬರಿಗೂ ಕಾನೂನಿನ ಅರಿವಿರಬೇಕು. ಅವುಗಳ ಪಾಲನೆಯ ಜತೆ ಜೀವನವನ್ನು ನಡೆಸಬೇಕು. ಹೆಣ್ಣು ಮಕ್ಕಳು ದೇಶದ ಕಣ್ಣು, ಇವರಿಗೂ ಕಾನೂನಿನ ಮಹತ್ವದ ಅರಿವು ಮೂಡಿಸಬೇಕಾದುದು ಅಗತ್ಯ. ಇದರಿಂದ ಕುಟುಂಬದ ಅಭಿವೃದ್ಧಿ ಸಾಧ್ಯ ಎಂದು ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೇಶ ಕೆ. ಹೇಳಿದರು.
ಅವರು ಶನಿವಾರ ಕಲ್ಮಂಜ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ತಾಲೂಕು ವಕೀಲರ ಸಂಘದ ವತಿಯಿಂದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಜರಗಿದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಮಾತನಾಡಿ ಕನ್ನಡ ಮಾಧ್ಯಮಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಯಾವುದೇ ಕೀಳರಿಮೆಗೆ ಒಳಗಾಗುವ ಅಗತ್ಯವಿಲ್ಲ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸಾಕಷ್ಟು ಸಾಧನೆಗಳನ್ನು ಮಾಡಲು ಅವಕಾಶವಿದೆ. ಮಕ್ಕಳಲ್ಲಿರುವ ಆಸಕ್ತಿಯನ್ನು ಗಮನಿಸಿ ಶಿಕ್ಷಕರು ಸ್ಪೂರ್ತಿ ಹಾಗೂ ಪ್ರೋತ್ಸಾಹ ನೀಡಬೇಕು ಇದು ಸಾಮರ್ಥ್ಯ ವೃದ್ಧಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಎಚ್.ಎಸ್.ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್, ಕಾರ್ಯದರ್ಶಿ ಶೈಲೇಶ್ ಠೋಸರ್ ಉಪಸ್ಥಿತರಿದ್ದರು.
ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕುರಿತು ನ್ಯಾಯವಾದಿ ಸ್ವರ್ಣ ಲತಾ ಎ. ಮಾಹಿತಿ ನೀಡಿದರು.
ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಸ್ವಾಗತಿಸಿದರು. ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಮಾಲಿನಿ ವಂದಿಸಿದರು
ಅಭಿನಂದನೆ
ಯೋಗ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕಲ್ಮಂಜ ಪ್ರೌಢಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ಹಾಗೂ ತರಬೇತಿ ನೀಡಿದ ಶಿಕ್ಷಕಿ ಪ್ರೇಮಲತಾ ಅವರನ್ನು ಅಭಿನಂದಿಸಲಾಯಿತು.