
ನೆಲ್ಯಾಡಿ: ಸ್ವಚ್ಛ ಭಾರತ ಪರಿಕಲ್ಪನೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸಲು ಕೋಟಿ ಕೋಟಿ ವ್ಯಯಿಸಿ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಆದರೆ ಸ್ವಚ್ಛತೆಗೂ ತಮಗೂ ಯಾವುದೇ ಸಂಬಂಧವಿಲ್ಲವೆಂದು ಕೌಕ್ರಾಡಿ ಪಂಚಾಯತ್ ತಮ್ಮ ನಿರ್ಲಕ್ಷದ ವರ್ತನೆಯಿಂದ ತೋರಿಸಿಕೊಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ನವೆಂಬರ್ 24ರಂದು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ ಇಕ್ಕೆಲಗಳಲ್ಲಿ ಅನಧಿಕೃತ ಗೂಡಂಗಡಿಗಳನ್ನು ಲೋಪಯೋಗಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಹಠಾತ್ ತೆರವುಗೊಳಿಸಲಾಯಿತು. ತೆರವುಗೊಂಡ ನಂತರ ಆ ಪ್ರದೇಶದಲ್ಲಿನ ಸ್ವಚ್ಛತಾ ಕಾರ್ಯವನ್ನು ಸ್ಥಳೀಯ ಪಂಚಾಯತ್ ನಿರ್ವಹಣೆ ಮಾಡದೆ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂದು ಕುಳಿತಿದೆ.

ಮಕ್ಕಳ ಪ್ರಾಣಕ್ಕೆ ಸಂಚಕಾರವಾಗಲಿದೆ ಬೀದಿ ಬದಿಯಲ್ಲಿ ಬಿದ್ದಿರುವ ತಿನಿಸುಗಳು:
ಕೌಕ್ರಾಡಿ ಗ್ರಾಮದ ದಡ್ಡಲಪಳಿಕೆ ಗೆ ಹೋಗುವ ರಸ್ತೆ ಬದಿಯಲ್ಲಿಯೇ ತ್ಯಾಜ್ಯ ವಸ್ತುಗಳು, ಅವಧಿ ಮುಗಿದ ಚಾಕಲೇಟ್, ಜ್ಯೂಸ್ ಬಾಟಲ್ ಗಳು ಸೇರಿದಂತೆ ಅನೇಕ ತಿಂಡಿ ತಿನಿಸುಗಳ ರಾಶಿ ಬಿದ್ದುಕೊಂಡಿವೆ. ಈ ರಸ್ತೆಯಲ್ಲಿ ದಿನನಿತ್ಯ ಅನೇಕ ಶಾಲಾ ಪುಟ್ಟ ಪುಟ್ಟ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಕಸದ ರಾಶಿಯ ಮಧ್ಯದಲ್ಲಿಯೇ ನಡೆದುಕೊಂಡು ಹೋಗುವ ಅನಿವಾರ್ಯತೆ ಇದೆ. ಪುಟ್ಟ ಮಕ್ಕಳೆನ್ನಾದರೂ ಈ ತಿನಸುಗಳನ್ನು ತೆಗೆದುಕೊಂಡು ತಿಂದಲ್ಲಿ ಪ್ರಾಣಕ್ಕೆ ಸಂಚಕಾರವಾದರೆ ಯಾರು ಹೊಣೆ ಎನ್ನುವುದೇ ಸಾರ್ವಜನಿಕರಲ್ಲಿ ದೊಡ್ಡ ಪ್ರಶ್ನೆಯಾಗಿದೆ. ಹಲವು ಸಮಯಗಳಿಂದ ಪ್ರದೇಶದಲ್ಲಿ ಹಾಕುವುದರಿಂದ ಅವು ಕೊಳೆತು ಗಬ್ಬುನಾರುತ್ತಿದ್ದರೆ, ಇನ್ನೊಂದೆಡೆ ಕಟ್ಟಡಗಳ ತ್ಯಾಜ್ಯಗಳು, ಪ್ಲಾಸ್ಟಿಕ್ ಹಾಗೂ ಗಾಜುಗಳನ್ನು ಹಾಕಿರುವುದರಿಂದ ಪರಿಸರ ಹಾಳಾಗುವುದರೊಂದಿಗೆ, ಪ್ರಾಣಿ ಪಕ್ಷಿಗಳ ಆರೋಗ್ಯಕ್ಕೂ ಮಾರಕವಾಗಲಿದೆ.
ಅನಧಿಕೃತ ಗೂಡ ಅಂಗಡಿ ತೆರೆದಾಗ ಪಂಚಾಯತ್ ಸುಮ್ಮನಿದ್ದುದ್ದು ಏಕೆ ?
ಈ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪೆರಿಯಶಾಂತಿ ಪ್ರದೇಶದಲ್ಲಿ ಅನಧಿಕೃತ ಗೂಡಂಗಡಿಗಳು ತೆರೆದಾಗ ಪಂಚಾಯತ್ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರೆ, ಇಂದು ತೆರವು ಕಾರ್ಯ ನಡೆಸುವ ಪ್ರಮೇಯವೇ ಇರುತ್ತಿರಲಿಲ್ಲ. ಈ ಸಂದರ್ಭ ಪಂಚಾಯತ್ ಸುಮ್ಮನಿದ್ದುದ್ದು ಏಕೆ ಎಂಬುದೇ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ ಇದರ ಬಗ್ಗೆ ಈ ಹಿಂದಿನ ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯದಂತೆ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನೋಟಿಸ್ ನೀಡಿ ಪರಿಶೀಲನೆ ನಡೆಸುವಂತೆ ನೋಡಲ್ ಅಧಿಕಾರಿ ಸೂಚಿಸಿದ್ದರು. ಆದರೆ ಇದುವರೆಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ಈ ಬಗ್ಗೆ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿರಲಿಲ್ಲ.
ಸಾವಿರಾರು ಯಾತ್ರಿಗಳು ಧರ್ಮಸ್ಥಳ ಸುಬ್ರಮಣ್ಯಕ್ಕೆ ಸಂಚರಿಸುವ ಹೆಬ್ಬಾಗಿಲಾಗಿರುವ ಈ ಪೆರಿಯಶಾಂತಿಯ ಪ್ರದೇಶವನ್ನು ಕೌಕ್ರಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯದಿಂದ ಕಾಯಿಲೆಯನ್ನು ಸೃಷ್ಟಿಸುವ ಕಾರ್ಖಾನೆಯಾಗುತ್ತಿದೆ ಎನ್ನುವುದರಲ್ಲಿ ತಪ್ಪಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಲು ಸಾರ್ವಜನಿಕರು ಮುಂದಾಗಿರುವುದು ಇಲ್ಲಿಯ ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸಿದಂತೆ ಇದೆ.





