ಭಾರತ ಜಗತ್ತಿನ ಏಳನೇ ಅತ್ಯಂತ ದೊಡ್ಡ ರಾಷ್ಟ್ರವಾಗಿದ್ದು ಇಲ್ಲಿ ವಿವಿಧ ಧರ್ಮದ ಜನರು ಹಾಗು ವಿವಿಧ ದೇವರುಗಳ ಆರಾಧನೆ ವಿಭಿನ್ನ ಭಾಷೆ ಮಾತನಾಡುವ ಜನರನ್ನು ಕಾಣಬಹುದು ಹಾಗೆಯೇ ಭಾರತ ಒಂದು ವಿವಿಧತೆಯಲ್ಲಿ ಏಕತೆ ಹೊಂದಿದ ರಾಷ್ಟ .ಆದರೂ ಎಲ್ಲಾ ಮತದ ಜನರು ಭೇದವಿಲ್ಲದೆ ಆರಾಧಿಸುವುದೆಂದರೆ ದೇವರು ಎಂಬ ಒಂದು ಅದ್ಭುತ ಶಕ್ತಿಯನ್ನು ಆಯಾಯ ಧರ್ಮದವರು ಅವರವರ ದೇವರುಗಳನ್ನು ಪೂಜಿಸುತ್ತಾರೆ. ಆದರೆ ದೇವರು ನಿಜವಾಗಿಯೂ ಇದ್ದಾನೆಯೆ? ಇದು ಯಾರಿಗೂ ತಿಳಿದಿಲ್ಲ ಅಲ್ಲದೆ ಇದುವರೆಗೆ ನಿಜವಾದ ದೇವರನ್ನು ಕಂಡವರು ಯಾರು ಇಲ್ಲ. ನಾವಿದರ ಬಗ್ಗೆ ಕತೆ ಪುರಾಣಗಳಲ್ಲಿ ಕೇಳಿದ್ದೇವಷ್ಟೆ.
“ನನ್ನ ಪ್ರಕಾರ ದೇವರಿದ್ದಾನೆ ಅವನು ಹೇಗಿದ್ದಾನೆಂದರೆ ಒಂದು ಕೇಂದ್ರ ಬಿಂದು ಆಗಿ ಜಗತ್ತನ್ನು ಕಾಯುವ ಒಂದು ಶಕ್ತಿ ಆಗಿದ್ದಾನೆ”. ಈ ದೇವರ ಆರಾಧನೆಯು ಬರೀ ಆರಾಧನೆಗೆ ಸೀಮಿತವಾಗಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು, ಆದರೆ ಇವತ್ತು ಬೇರೊಂದು ರೂಪ ಪಡೆದುಕೊಂಡಿರುವುದು ದುರಂತ. ದೇವರು ಇದ್ದಾನೊ ಇಲ್ಲವೋ ಗೊತ್ತಿಲ್ಲ, ಆದರೆ ಇಂದು ದೇವರ ಹೆಸರಿನಲ್ಲಿ ಮೋಸ ಮಾಡುವ ಜನರಂತೂ ತುಂಬಾ ಚೆನ್ನಾಗಿ ಇದ್ದಾರೆ. ಇಂತಹ ಅನೇಕ ಮೋಸಕ್ಕೆ ವಿದ್ಯಾವಂತರು ಬಲಿಯಾಗಿರುವುದು ದುರಂತ. ನಾವು ಅಂದುಕೊಳ್ಳುವುದೇನೆಂದರೆ ವಿದ್ಯಾವಂತರು ಬಲಿ ಆಗುವುದಿಲ್ಲ ಎಂದು, ಆದರೆ ಇವತ್ತಿನ ಸಮಾಜದಲ್ಲಿ ಮೂಡನಂಬಿಕೆ ಕಂದಾಚಾರಗಳಿಗೆ ಹೆಚ್ಚಾಗಿ ಬಲಿಯಾಗುವುದೇ ವಿದ್ಯಾವಂತರು. ಇವರು ತಮ್ಮ ಸಮಸ್ಯೆಯನ್ನು ಪರಿಹರಿಸಲು ವೈದ್ಯರ ಬಳಿ ಹೋಗುವ ಬದಲು ಮಂತ್ರವಾದಿಗಳ ಬಳಿ ಹೋಗುವುದೇ ಹೆಚ್ಚು. ಮಂತ್ರವಾದಿಗಳು ಪೂಜೆ ನೆಪದಲ್ಲಿ ಸುಲಿಗೆ ಮಾಡಿ ದೇವರ ಹೆಸರಿನಲ್ಲಿ ಮೋಸ ಮಾಡುತ್ತಾರೆ ಇದು ಇಂದಿಗೂ ನಡೆಯುತ್ತಿದೆ. ಆದರೆ ಇದರ ಬಗ್ಗೆ ನಮ್ಮ ವಿದ್ಯಾವಂತ ಸಮಾಜ ಏಕೆ ಎಚ್ಚೆತ್ತುಕೊಳ್ಳುತ್ತಿಲ್ಲ? ಯಾಕೆಂದರೆ ಇವರು ಪುಸ್ತಕದ ನಾಲ್ಕು ಅಕ್ಷರ ಬಾಯಿಪಾಠ ಮಾಡಿ ವಿದ್ಯಾವಂತರಾದವರು ಹೊರತು ತಮ್ಮ ಸ್ವಂತ ಬುದ್ಧಿಯಿಂದ ಅಲ್ಲ.
ಒಂದು ವಿಚಾರವನ್ನು ನಾವೆಲ್ಲ ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ, ಈ ಪ್ರಪಂಚ ಮಂತ್ರದಿಂದ ನಡೆಯುತ್ತಿದ್ದರೆ ಇವತ್ತು ಗಡಿಯಲ್ಲಿ ಸಾವಿರಗಟ್ಟಲೆ ಸೈನಿಕರನ್ನು ನೀಯೋಜಿಸುವ ಅವಶ್ಯಕತೆ ಇರುತ್ತಿರಲಿಲ್ಲ, ಬದಲಾಗಿ ಗಡಿಯಲ್ಲಿ ಮಂತ್ರವಾದಿಗಳನ್ನು ಕೂರಿಸಿ ಬಿಡಬಹುದಿತ್ತು. ಆಗ ನಮ್ಮ ದೇಶದ ಸಮಸ್ಯೆಗಳು ಸರಿಯಾಗುತ್ತಿತ್ತು. ವಿದ್ಯಾವಂತ ಸಮಾಜ ಎಚ್ಚೆತ್ತುಕೊಳ್ಳದ ಹೊರತು ಇಂತಹ ಅಟ್ಟಹಾಸಕ್ಕೆ ಕೊನೆಯಿಲ್ಲ. ಇಂತಹ ಮಂತ್ರ ತಂತ್ರಗಳು ಮನುಷ್ಯನ ಜೀವನದ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ಒಂದು ಉದಾಹರಣೆ ನೋಡೋಣ ಇದರ ಬಗ್ಗೆ ಹಿಂದೆ ವಾಹಿನಿಗಳಲ್ಲೆಲ್ಲಾ ಪ್ರಸಾರ ಆಗಿತ್ತು ಒಂದು ವಿದ್ಯಾವಂತ ಕುಟುಂಬ, ಸಿರಿವಂತರ ಕುಟುಂಬ ಬೇರೆ ಹೀಗಿರುವಾಗ ಆ ಕುಟುಂಬಕ್ಕೆ ಒಂದು ಸಮಸ್ಯೆ ಬರುತ್ತದೆ, ಅವರು ಆ ಸಮಸ್ಯೆ ಯನ್ನು ಪರಿಹರಿಸಿಕೊಳ್ಳಲು ವೈದ್ಯರ ಬದಲಿಗೆ ಮಂತ್ರವಾದಿಯ ಬಳಿ ಹೋಗುತ್ತಾರೆ ಪ್ರಾರಂಭದಲ್ಲಿ ಪರಿಹಾರದ ಹೆಸರಿನಲ್ಲಿ ಬೇಕಾದಷ್ಟು ಹಣ ವಸೂಲಿ ಮಾಡಿ ಕೊನೆಗೆ ನೀವು ಸತ್ತಮೇಲೆ ನಿಮಗೆ ಮೋಕ್ಷ ಸಿದ್ದಿಸಬೇಕಾದರೆ ನೀವು ಒಂದೊಂದು ಕೊಠಡಿಯಲ್ಲಿ ನೇಣಿಗೆ ಶರಣಾಗಬೇಕೆಂದು ಹೇಳುತ್ತಾನೆ. ಇದರಲ್ಲಿ ವಿಚಿತ್ರ ಎಂದರೆ ಈ ಕುಟುಂಬದವರು ಅವನು ಹೇಳಿದ್ದೆಲ್ಲ ನಿಜ ಎಂದು ಭಾವಿಸಿ ನೇಣಿಗೆ ಶರಣಾಗುತ್ತಾರೆ ಆಗ ನೀವು ಯೋಚನೆ ಮಾಡಿ ಸ್ನೇಹಿತರೆ ಅವರು ಕಲಿತ ವಿದ್ಯೆ ಎಲ್ಲಿ ಹೋಯಿತು ಸತ್ತ ಮೇಲೆ ನಾವೇನಾಗುತ್ತೇವೆ ಅಂತ ಯಾರಿಗಾದರೂ ತಿಳಿದಿದೆಯೇ ತದ ನಂತರದಲ್ಲಿ ತನಿಖೆ ನಡೆದು ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆ ಆದರೆ ಏನು ಪ್ರಯೋಜನ ಹೋದ ಜೀವಗಳು ಮರಳಿ ಬರುತ್ತದೆಯೇ, ಅಂತಹ ಮಹಿಮೆಗಳೆಲ್ಲವೂ ಸಿನಿಮಾ ಧಾರಾವಾಹಿಗಳಿಗೆ ಮಾತ್ರ ಸೂಕ್ತ ನಿಜ ಜೀವನಕ್ಕಲ್ಲ. ದೇವರ ಮೇಲೆ ನಂಬಿಕೆ ಇರಬೇಕು ಮೂಡ ನಂಬಿಕೆ ಅಲ್ಲ ಈಗಿನ ಸಮಾಜದಲ್ಲಂತೂ ಇಂತಹ ಘಟನೆಗಳು ಹೆಚ್ಚಾಗುತ್ತಿವೆ ಬಡವರನ್ನಂತೂ ಕೇಳುವುದೇ ಬೇಡ ವಾಮಾಚಾರ, ನಿಧಿಗಾಗಿ ಬಲಿ ಕೊಡುವುದು ಇಂತಹ ಕೆಟ್ಟ ಮೌಡ್ಯಗಳಿಗೆ ಉಪಯೋಗಿಸಿಕೊಳ್ಳುತ್ತಾರೆ ಭಾರತೀಯ ಸಮಾಜದಲ್ಲಿ ಇಂತಹ ನಂಬಿಕೆಗಳು ಹೆಚ್ಚಾಗಿರುವುದರಿಂದ ಇದನ್ನೇ ಬಂಡವಾಳ ಮಾಡಿಕೊಂಡು ಸುಲಭದಲ್ಲಿ ದುಡ್ಡು ಮಾಡುತ್ತಾರೆ. ಇನ್ನು ಕೆಲವು ನಂಬಿಕೆಗಳು ನಮಗೆ ನಾವೇ ಹೇರಿಕೊಂಡ ನಂಬಿಕೆಗಳು. ಉದಾಹರಣೆಗೆ ಈ ಜಾತಿ ನೀತಿ ಮೇಲ್ಜಾತಿ ಕೆಳಜಾತಿ ಇದೆಲ್ಲಾ ದೇವರು ಮಾಡಿದಲ್ಲ ಮನುಷ್ಯನೇ ಹೇರಿಕೊಂಡದ್ದು ಈ ಜಗತ್ತಿನಲ್ಲಿ ಇರುವುದು ಎರಡೇ ಜಾತಿ ಗಂಡು ಮತ್ತು ಹೆಣ್ಣು ಇವೆರಡನ್ನು ಹೊರತು ಪಡಿಸಿ ಉಳಿದದೆಲ್ಲ ಮನುಷ್ಯನ ಸೃಷ್ಟಿ.
ಇನ್ನೊಂದು ಮುಖ್ಯವಾದ ವಿಚಾರ ಅಂದರೆ ಶ್ರೀಮಂತರು ತಾವು ಸಂಪಾದಿಸಿದ ಹಣವನ್ನು ಧಾರ್ಮಿಕ ಕ್ಷೇತ್ರಕ್ಕೆ ಹಾಕುವಂತದ್ದು ಅದಕ್ಕಿಂತ ಬಡ ಮಕ್ಕಳಿಗೆ ದಾನ ಮಾಡಿದರೆ ಸಹಾಯವಾಗಬಹುದು. ನಾಗರ ಪಂಚಮಿ ದಿನ ಕಲ್ಲಿಗೆ ಹಾಲನ್ನು ಸುರಿದು ಅದು ಚರಂಡಿ ಸೇರುವುದಕ್ಕಿಂತ ದನದ ಹಾಲನ್ನೇ ಕಾಣದ ಅದೆಷ್ಟೋ ಬಡಮಕ್ಕಳಿದ್ದಾರೆ ಅವರಿಗೆ ನೀಡಿದರೆ ದೇವರು ನಿಜವಾಗಿಯೂ ಒಲಿಯಬಹುದೆಂದೆನಿಸುತ್ತದೆ. ಹಿಂದೆ ನಮ್ಮ ಶಿವ ಶರಣ ಬಸವೇಶ್ವರರು ಒಂದು ಮಾತು ಹೇಳಿದ್ದರು “ಉಂಬ ಜಂಗಮ ಬಂದರೆ ನಡೆ ಎನ್ನುವರು ಉಣ್ಣಾದ ಲಿಂಗಕ್ಕೆ ಭೋಜನವ ಕೊಡುವರು” ಎಂದು ಇದು ಇಂದಿನ ಕಾಲಘಟ್ಟಕ್ಕೆ ಸೂಕ್ತವಾಗಿದೆ. ನಾವು ಕೂಡ ಮಾಡುವುದು ಇಷ್ಟೇ ಊಟದ ಸಮಯದಲ್ಲಿ ಯಾರಾದರು ಬಂದರೆ ಕೋಪ ಬರುತ್ತದೆ. ಆದರೆ ಕಾಣದ ಕಲ್ಲಿಗೆ ಕ್ಷೀರಾಭಿಷೇಕ ಭೋಜನ ಕೊಡುತ್ತೇವೆ ಇದು ಎಷ್ಟರ ಮಟ್ಟಿಗೆ ಸರಿ ನೀವೇ ಯೋಚಿಸಿ ನೋಡಿ.
ಇಂತಹ ಕಂದಾಚಾರಗಳು ಮೌಡ್ಯತೆಗಳು ನಮ್ಮ ಸಮಾಜದಿಂದ ದೂರ ಆಗಬೇಕು ನಾವು ಎಚ್ಚರಿಕೆಯಿಂದ ಇರಬೇಕು.