ಸ್ಪರ್ಧೆಗೆ ಮಗನನ್ನು ಮಂಗಳೂರಿನಿಂದ ಕರೆದುಕೊಂಡು ಬಂದ ಬೆಂಗಳೂರು ಮೂಲದ ಉದ್ಯಮಿ
ಕಡಬ: ಸಮಾಜ ಮುಖಿ ಚಿಂತನೆಯ ಕೆಲಸ ಕಾರ್ಯಗಳಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಯುವ ಜನತೆ ವಿವಿಧ ಕಾರಣಗಳಿಂದ ಹಾದಿ ತಪ್ಪುತ್ತಿರುವ ಇಂದಿನ ಕಾಲದಲ್ಲಿ ತುಳುನಾಡ ತುಡರ್ ಯುವಕ ಮಂಡಲದ ಸದಸ್ಯರ ಸಮಾಜಮುಖಿ ಕೆಲಸಗಳು ಶ್ಲಾಘನೀಯ ಎಂದು ಕಡಬ ಉಪತಹಶೀಲ್ದಾರ್ ಗೋಪಾಲ ಕಲ್ಲುಗುಡ್ಡೆ ಹೇಳಿದರು.
ಅವರು ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಬಳಿಯ ಕೇಪುಂಜದವರ ಗದ್ದೆಯಲ್ಲಿ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲದ ವತಿಯಿಂದ ನಡೆದ ಕೆಸರ್ಡೊಂಜಿ ದಿನ ಕೆಸರು ಗದ್ದೆಯಲ್ಲಿ ರಾಜ್ಯ ಮಟ್ಟದ ಹಗ್ಗ ಜಗ್ಗಾಟ ಹಾಗೂ ಇತರೆ ಕ್ರೀಡಾಕೂದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ಮಾತನಾಡಿ, ಯುವಜನತೆ ಒಗ್ಗಟ್ಟಾಗಿ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ. ಕ್ರೀಡಾಕೂಟದಲ್ಲಿ ಭಾಗಹಿಸುವುದು ಒಗ್ಗಟ್ಟಿನ ಪ್ರತೀಕ ಎಂದರು.
ಯುವಕ ಮಂಡಲದ ಗೌರವ ಸಲಹೆಗಾರ ಉಮೇಶ್ ಶೆಟ್ಟಿ ಸಾಯಿರಾಮ್ ಮಾತನಾಡಿ, ಹಿಂದೂ ಸಂಘಟನೆಯ ಒಗ್ಗಟ್ಟು ಇಂತಹ ಕ್ರೀಡಾಕೂಟ ಹಾಗೂ ಸಂಘಟನಾತ್ಮಕ ಕಾರ್ಯಕ್ರಮದಿಂದ ನಡೆಯಲಿದೆ ಎಂದರು.
ಯುವಕ ಮಂಡಲದ ಅಧ್ಯಕ್ಷ ತಿರುಮಲೇಶ್ವರ ಸಾಕೋಟೆ ಅಧ್ಯಕ್ಷತೆ ವಹಿಸಿದ್ದರು. ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಅರ್ಚಕ ಕೃಷ್ ಭಟ್ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿದರು. ಪರಿಚಾರಕರಾದ ಯಶೋಧರ ಗೌಡ ಮಾರಪ್ಪೆ ಗದ್ದೆ ಹಾಳೆರೆದು ಶುಭಹಾರೈಸಿದರು. ಮನೋಜ್ ಪಲ್ಲತ್ತಡ್ಕ ಕ್ರೀಡಾಗದ್ದೆ ಉದ್ಘಾಟಿಸಿದರು. ಯುವಕ ಮಂಡಲದ ಸಂಚಾಲಕ ಯಶೋಧರ ಜಾಲು, ನೂಜಿ ರೆಂಜಿಲಾಡಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ರವಿಪ್ರಸಾದ್ ಕರಿಂಬಿಲ, ನೂಜಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮೃತ್ಯುಂಜಯ ಭಿಡೆ ಕೆರೆತೋಟ, ಉದ್ಯಮಿ ಲಿಂಗಪ್ಪ ಗೌಡ ಕಾನದಬಾಗಿಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿಶಾಂತ್ ಉಳಿಪ್ಪು ವಂದಿಸಿದರು. ಸಂದೇಶ್ ಮೀನಾಡಿ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಕ್ರೀಡೆಗಳು:
ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಕೂಟ ಗದ್ದೆಯಲ್ಲಿ ವಿವಿಧ ಮನೋರಂಜನಾ ಕ್ರೀಡೆಗಳು ನಡೆಯಿತು. ಹಗ್ಗಜಗ್ಗಾಟ, ಕಬಡ್ಡಿ, ಓಟ, ಮಡಿಕೆ ಒಡೆಯುವುದು, ಅಟ್ಟಿ ಮಡಿಕೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು.
ಸಮಾರೋಪ ಸಮಾರಂಭ; ಬಹುಮಾನ ವಿತರಣೆ:
ಸಂಜೆ ಸಮಾರೋಪ ಸಮಾರಂಭ ಹಾಗೂ ಸಮ್ಮಾನ ಕಾರ್ಯಕ್ರಮ ನಡೆಯಿತು. ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ತುಳುನಾಡು ಕೃಷಿ ಪ್ರಧಾನ ನಾಡಾಗಿದ್ದು, ಗದ್ದೆ ಕೃಷಿ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಕೆಸರು ಗದ್ದೆ ಕ್ರೀಡೆಗಳ ಮೂಲಕ ತುಳುನಾಡಿನ ಸಂಸ್ಕೃತಿಯನ್ನು ತಿಳಿಸುವ ಕೆಲಸ ಶ್ಲಾಘನೀಯ. ಇದು ಗದ್ದೆ ಕೃಷಿ ಉಳಿಸಿ, ಬೆಳೆಸಲು ಪೂರಕವಾಗಲಿ. ಯುವ ಜನತೆ ಯುವಕ ಮಂಡಲದಂತಹ ಸಮಾಜಮುಖಿ ಸಂಘಟನೆ ಜತೆಗೆ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವ ಅನಿವಾರ್ಯತೆ ಇದೆ ಎಂದರು. ಯುವಕ ಮಂಡಲದ ಅಧ್ಯಕ್ಷ ತಿರುಮಲೇಶ್ವರ ಸಾಕೋಟೆ ಅಧ್ಯಕ್ಷತೆ ವಹಿಸಿದ್ದರು. ಯುವಕ ಮಂಡಲದ ಗೌರವ ಸಲಹೆಗಾರ ಉಮೇಶ್ ಶೆಟ್ಟಿ ಸಾಯಿರಾಮ್, ದೈವಸ್ಥಾನದ ಪರಿಚಾರಕರಾದ ಡೀಕಯ್ಯ ಗೌಡ ಪಾಲೆತ್ತಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂದೇಶ್ ಮೀನಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಯಶವಂತ ಕಲ್ಲುಗುಡ್ಡೆ ವಂದಿಸಿದರು. ಸುರೇಶ್ ಪಡಿಪಂಡ, ದೀಪಕ್ ನೆಲ್ಯಾಡಿ, ದೀಕ್ಷಿತ್ ಬೆಳ್ತಂಗಡಿ, ಪ್ರಸಾದ್ ಬೆಳ್ತಂಗಡಿ ಕ್ರೀಡಾಕೂಟ ನಿರ್ವಹಿಸಿದರು.
ಸಮ್ಮಾನ; ಗೌರವಾರ್ಪಣೆ;
ಕಾರ್ಯಕ್ರಮದಲ್ಲಿ ದೈವರಾಧನೆ ಕ್ಷೇತ್ರದಲ್ಲಿ ದೈವದ ಪರಿಚಾರಕರಾದ ಧರ್ಣಪ್ಪ ಗೌಡ ಪಿಲತ್ತಡಿ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಲಕ್ಷ್ಮಣ ಪೂಜಾರಿ ಜಾಲು ಅವರನ್ನು ಸಮ್ಮಾನಿಸಲಾಯಿತು. ಜತೆಗೆ ವಿವಿಧ ಕ್ಷೇತ್ರದ ಸುಮಾರು 20 ಮಂದಿಯನ್ನು, ಗದ್ದೆಯ ಮಾಲಕರು, ಮನೆಯವರನ್ನು ಗೌರವಿಸಲಾಯಿತು. ಧನರಾಜ್ ಕಲ್ಲುಗುಡ್ಡೆ, ವಿಶ್ವನಾಥ ಹೇರ ಸಮ್ಮಾನ ಪತ್ರ ವಾಚಿಸಿದರು.
ಮಂಗಳೂರಿನಿಂದ ಬಂದರು:
ಪ್ರಸ್ತುತ ಕೆಸರು ಗದ್ದೆ ಕ್ರೀಡಾಕೂಟ ಬಾರೀ ಜನಪ್ರೀಯತೆ ಪಡೆದುಕೊಂಡಿದ್ದು, ಪುಟಾಣಿಗಳು, ಯುವಕರು, ಮಹಿಳೆಯರು ಸೇರಿದಂತೆ ವೃದ್ಧರು ಕೂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಮನರಂಜಿಸುತ್ತಾರೆ. ರೆಂಜಿಲಾಡಿಯ ನೂಜಿಬೈಲ್ ನಲ್ಲಿ ನಡೆದ ಕ್ರೀಡಾಕೂಟಕ್ಕೆ ಮಂಗಳೂರಿನಲ್ಲಿ ನೆಲೆಸಿರುವ ಬೆಂಗಳೂರು ಮೂಲದ ಉದ್ಯಮಿ ಕೃಷ್ಣಮೂರ್ತಿ ಎಂಬವರು ತನ್ನ ಮಗ ಮೂರನೇ ತರಗತಿಯ ಹೇಮಂತ್ ನನ್ನು ತನ್ನ ಪತ್ನಿ ಜತೆ ಕೆಸರು ಗದ್ದೆ ಕ್ರೀಡಾಕೂಟಕ್ಕೆ ಕರೆತಂದು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕೃಷ್ಣಮೂರ್ತಿ ಅವರು, ಕೆಸರುಗದ್ದೆ ಕ್ರೀಡಾಕೂಟ ನೋಡಿ ಖುಷಿಯಾಗಿದೆ. ನಾವು ಇಲ್ಲಿನ ಕ್ರೀಕಾಡಕೂಟದ ಬಗ್ಗೆ ಬೇರೆವರಿಂದ ತಿಳಿದು ಬಂದಿದ್ದು, ನನ್ನ ಮಗ ಎರಡು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾನೆ. ನಗರ ಪ್ರದೇಶದಲ್ಲಿ ಇಂತಹ ಕ್ರೀಡೆ ಕಾಣಲು ಅಸಾಧ್ಯ. ಮುಂದೆಯೂ ಇಂತಹ ಸ್ಪರ್ಧೆಯಲ್ಲಿ ಮಗ ಭಾಗವಹಿಸಲು ಉತ್ಸುಕನಾಗಿದ್ದಾನೆ ಎಂದರು.