ಅರಸಿನಮಕ್ಕಿ: ಡಿಸೆಂಬರ್ 21ರಿಂದ 27ರವರೆಗೆ ಮೂಡಬಿದ್ರೆಯ ಆಳ್ವಾಸ್ ನಲ್ಲಿ ನಡೆಯಲಿರುವ ಆಳ್ವಾಸ್ ಜಾಂಬೂರಿ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳಲಿರುವ ಗಾಳಿಪಟವು ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯಲ್ಲಿ ಪ್ರಾಥಮಿಕ ಹಂತದ ತಯಾರಿಯನ್ನು ನಡೆಸಿದೆ.
ಟೀಮ್ ಮಂಗಳೂರು ಅಂತರ್ ರಾಷ್ಟ್ರೀಯ ಖ್ಯಾತಿಯ ಹವ್ಯಾಸಿ ಗಾಳಿಪಟ ತಂಡದ ಕಲಾವಿದ ದಿನೇಶ್ ಹೊಳ್ಳ ರವರ ಬಣ್ಣ, ವಿನ್ಯಾಸ, ಪರಿಕಲ್ಪನೆಯಲ್ಲಿ, ಟೀಮ್ ಮಂಗಳೂರು ತಂಡದ ಸ್ಥಾಪಕ ಸರ್ವೇಶ ರಾವ್ ರವರ ಬೆಂಬಲ ದೊಂದಿಗೆ, ರವಿ ಶೆಟ್ಟರ ಹೊಲಿಗೆಯ ಮತ್ತು ಶಿಶಿಲ ಶೇಖರರ ಬಿದಿರು ಕೋಲಿನ ಶ್ರಮದಿಂದ 50 ಅಡಿ ಎತ್ತರದ ಬ್ರಹತ್ ಗಾಳಿಪಟ ಶಿಶಿಲ ಸಮೀಪದ ಅರಸಿನಮಕ್ಕಿಯ ಅವಿನಾಶ್ ಭಿಡೆ ಮನೆಯಲ್ಲಿ ತಯಾರಾಗುತ್ತಿದೆ.
ಆಳ್ವಾಸ್ ಜಾಂಬೂರಿ
ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಒಳಗೊಂಡ (ಸ್ಕೌಟ್ಸ್ ಅಂಡ್ ಗೈಡ್ಸ್, ಕಪ್ಸ್, ಬುಲ್ ಬುಲ್) 50,000 ಮಕ್ಕಳಿರುವ 7 ದಿನಗಳ ಶಿಬಿರ ಇದಾಗಿದೆ. ಶಿಬಿರದಲ್ಲಿ ಕಲೆ, ಸಾಹಿತ್ಯ, ನಾಟಕ ಸೇರಿದಂತೆ ಅನೇಕ ರೀತಿಯ ಸೃಜನಾತ್ಮಕ ಚಟುವಟಿಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಹೀಗಿದೆ ಜಾಂಬೂರಿ ಗಾಳಿಪಟ ಆಳ್ವಾಸ್ ಜಾಂಬೂರಿಯಲ್ಲಿ ಸುಮಾರು 50,000 ವಿದ್ಯಾರ್ಥಿಗಳು ಭಾಗವಹಿಸಲಿದ್ದು ಈ ನೆನಪನ್ನು ಅವಿಸ್ಮರಣೀಯವಾಗಿರಿಸಲು 50 ಫೀಟ್ ಎತ್ತರದ ಗಾಳಿಪಟವನ್ನು ತಯಾರಿಸಲಾಗುತ್ತಿದೆ. ಬಿದಿರಿನ ಕಡ್ಡಿ ಹಾಗೂ ಛತ್ರಿಯಲ್ಲಿ ಬಳಸಲಾಗುವ ಬಟ್ಟೆಯನ್ನು ಈ ಗಾಳಿಪಟದಲ್ಲಿ ಉಪಯೋಗಿಸಲಾಗುತ್ತಿದ್ದು ಕರಾವಳಿಯ ಯಕ್ಷಗಾನ, ಕಂಬಳ, ಭೂತಾರಾಧನೆ, ನಾಗಾರಾಧನೆ, ಕೋಳಿ ಅಂಕ ಸೇರಿದಂತೆ ಎಲ್ಲಾ ಕಲಾಸೊಗಡು ಈ ಗಾಳಿಪಟದಲ್ಲಿ ಚಿತ್ರಿಸಲಾಗುತ್ತಿದೆ. ಕಲಾವಿದರು ಚಿತ್ರಿಸುವುದು ಮಾತ್ರವಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿಗಳೂ ಕೂಡ ಈ ಗಾಳಿಪಟದಲ್ಲಿ ಚಿತ್ರ ಬಿಡಿಸಲಿದ್ದಾರೆ.
50,000 ವಿದ್ಯಾರ್ಥಿಗಳನ್ನು ಒಳಗೊಂಡ ಐವತ್ತು ಫೀಟ್ ಎತ್ತರದ ಗಾಳಿಪಟ ಕಾರ್ಯಕ್ರಮದ ಪ್ರಮುಖ ಭಾಗವಾಗಿ ಮೂಡಿಬರಲಿದೆ. ಶಿಬಿರದ ಬಳಿಕ ಇದನ್ನು ಆಳ್ವಾಸ್ ನ ಐದನೇ ಮಹಡಿಯಲ್ಲಿ ಶಾಶ್ವತವಾಗಿ ಇರಿಸಲಾಗುತ್ತದೆ.
ಕಳೆದ 25 ವರ್ಷಗಳಿಂದ ಟೀ ಮಂಗಳೂರಿನ ಹವ್ಯಾಸಿ ತಂಡದ ಮೂಲಕ ಸೃಜನಾತ್ಮಕ ಗಾಳಿಪಟ ತಯಾರಿಯನ್ನು ದೇಶ ವಿದೇಶಗಳಲ್ಲಿಯೂ ಪ್ರದರ್ಶನ ನೀಡುತ್ತಾ ಬಂದಿದ್ದೇವೆ. ಇದೇ ಮೊದಲ ಬಾರಿಗೆ ನನಗೆ ಆಳ್ವಾಸ್ ಜಾಂಬೂರಿಯಲ್ಲಿ ಗಾಳಿಪಟ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಇದನ್ನು ಶಾಶ್ವತ ನೆನಪಾಗಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ನಡೆಸುತ್ತಿದ್ದೇವೆ. ಶಿಬಿರದಲ್ಲಿ ವಿದ್ಯಾರ್ಥಿಗಳನ್ನೂ ಜೊತೆಯಾಗಿರಿಸಿಕೊಂಡು ಈ ಬಾರಿ ಗಾಳಿಪಟ ಪ್ರದರ್ಶನ ನಡೆಸಲಿದ್ದೇವೆ.
ದಿನೇಶ್ ಹೊಳ್ಳ
ಕಲಾವಿದರು, ಟೀಂ ಮಂಗಳೂರು ಹವ್ಯಾಸಿ ಗಾಳಿಪಟ ತಂಡ.
ಗಾಳಿಪಟ ತಯಾರಿಕೆಯಲ್ಲಿ ಅರಸಿನಮಕ್ಕಿಯ ರವಿ ಶೆಟ್ಟಿ ಹಾಗೂ ಶಿಶಿಲದ ಶೇಖರ್ ಸಂಪೂರ್ಣ ಸಹಕಾರ ನೀಡಿ ಗಾಳಿಪಟದ ಹೊರ ವಿನ್ಯಾಸದ ತಯಾರಿ ಎರಡು ಪೂರ್ಣ ದಿನಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಕಾರ್ಯನಿರ್ವಹಿಸಿ ಮಾಡಿಕೊಟ್ಟಿದ್ದೇವೆ. ಸಂಪೂರ್ಣ ಹಳ್ಳಿ ಸೊಗಡಿನ ಕಚ್ಚಾ ವಸ್ತುಗಳನ್ನೇ ಬಳಸಿಕೊಂಡು ಈ ಗಾಳಿಪಟ ತಯಾರಿಸಲಾಗಿದೆ.
ಅವಿನಾಶ್ ಭಿಡೆ
ಗಾಳಿಪಟ ತಯಾರಿಗೆ ಸಹಕರಿಸಿದವರು.