ಕಣ್ಣು ಮುಚ್ಚಿ ಕುಳಿತ ಸಂಬಂಧಪಟ್ಟ ಅಧಿಕಾರಿಗಳು
ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮವು 19 ಗ್ರಾಮವನ್ನು ಒಳಗೊಂಡ ಹೋಬಳಿ ಕೇಂದ್ರ. 2021ರಲ್ಲಿ ಆರೋಗ್ಯ ಸಚಿವ ಸುಧಾಕರ್ ಉದ್ಘಾಟಿಸಿದ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅನೇಕ ಹುದ್ದೆಗಳೆಲ್ಲ ಖಾಲಿ ಖಾಲಿಯಾಗಿದ್ದು ಹೇಳಿಕೊಳ್ಳವುದಕಷ್ಟೇ ಈ ಸಮುದಾಯ ಆರೋಗ್ಯ ಕೇಂದ್ರವಿದ್ದು ಸಾರ್ವಜನಿಕರ ಅನುಕೂಲಕ್ಕೆ ಇಲ್ಲದಂತಾಗಿದೆ.
ಸಮುದಾಯ ಆರೋಗ್ಯ ಕೇಂದ್ರವೆಂದರೆ ಅಲ್ಲಿ ಹಿರಿಯ ವೈದ್ಯಾಧಿಕಾರಿ, ಹೆರಿಗೆ ಮತ್ತು ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು, ಲ್ಯಾಬ್ ಸೌಲಭ್ಯ ಸೇರಿದಂತೆ ಇನ್ನೂ ಅನೇಕ ಹುದ್ದೆಗಳಿಗೆ ವ್ಯವಸ್ಥೆ ಇರಬೇಕು ಆದರೆ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇದು ಯಾವ ಹುದ್ದೆಯೂ ಭರ್ತಿಯಾಗಿಲ್ಲ.
ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರ 3 ಎಕರೆ ಪ್ರದೇಶದಲ್ಲಿ ಮೂರುವರೆ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಆಸ್ಪತ್ರೆ. ಕನಿಷ್ಠ ಸೌಲಭ್ಯಗಳು ಹಾಗೂ ನುರಿತ ವೈದ್ಯರಿಲ್ಲದೆ ಕಳೆದೊಂದು ವರ್ಷದಿಂದ ಸೊರಗುತ್ತಿದೆ. ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡು ವರ್ಷಗಳು ಕಳೆದರೂ ಇಲ್ಲಿಗೆ ಸಿಬ್ಬಂದಿ ನೇಮಕ ಮಾಡುವಲ್ಲಿ ಸರಕಾರ ವಿಫಲವಾಗಿದೆ. ಈ ಆಸ್ಪತ್ರೆಗೆ ಸಂಬಂಧಿಸಿದಂತೆ ಸಾವಿರಾರು ಎಂಡೋಸಲ್ಫಾನ್ ಭಾದಿತರು ಸೇರಿದಂತೆ ಅನೇಕ ರೋಗಿಗಳು ಸಣ್ಣಮಟ್ಟದಿಂದ ಹಿಡಿದು ದೊಡ್ಡ ಮಟ್ಟದ ಚಿಕಿತ್ಸೆವರೆಗೂ ಈ ಸರಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ಅವಲಂಬಿಸುವುದು ಅನಿವಾರ್ಯ. ಆದರೆ ಕನಿಷ್ಠ ವ್ಯವಸ್ಥೆಯು ಕೂಡ ಈ ಆರೋಗ್ಯ ಕೇಂದ್ರದಲ್ಲಿ ಜನರಿಗೆ ಸಿಗುತ್ತಿಲ್ಲ. ಅಲ್ಲದೆ ಇದೇ ಆಸ್ಪತ್ರೆಯಲ್ಲಿ 108 ಆ್ಯಂಬುಲೆನ್ಸ್ ಕಾರ್ಯನಿರ್ವಹಿಸುತ್ತಿದ್ದು ದಿನಂಪ್ರತಿ 2 ಅಪಘಾತ ಪ್ರಕರಣಗಳು ದಾಖಲಾಗುತ್ತಿವೆ. ಈ ಬಗ್ಗೆ ಕಳೆದ ಎಪ್ರಿಲ್‌ನಲ್ಲಿ ಕೊಕ್ಕಡ ಪಂಚಾಯತ್‌ನಿಂದ ಮೇಲಾಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಲಾಗಿತ್ತು.
ಜನರ ಕನಸು ನನಸಾಗಿಲ್ಲ
ಇಲ್ಲಿ ಸಮುದಾಯ ಆರೋಗ್ಯ ಆರಂಭವಾಗಬೇಕು ಎನ್ನುವಾಗ ಇಲ್ಲೊಂದು ಕಿಡ್ನಿ ಸಮಸ್ಯೆ ಇರುವವರಿಗೆ ಡಯಾಲಿಸಿಸ್ ಕೇಂದ್ರವಾಗಬೇಕು ಎಂಬುದು ಇಲ್ಲಿನ ಜನರ ಬಹು ನಿರೀಕ್ಷೆಯ ಬೇಡಿಕೆಯಾಗಿತ್ತು. ಅದಕ್ಕೆ ಪೂರಕವಾಗಿ ಇಲ್ಲಿ ಫಿಸಿಷಿಯನ್ ಹುದ್ದೆ ರಚನೆಗೊಳ್ಳಬೇಕು ಎಂಬುದಾಗಿ ಕಳೆದ ಮಾರ್ಚ್ನಲ್ಲಿ ಆರೋಗ್ಯ ಸಚಿವ ಸುಧಾಕರ್‌ರವರಿಗೆ ಇಲ್ಲಿನ ಎಂಡೋಸಲ್ಫಾನ್ ವಿರೋಧಿ ಹೋರಾಟಗಾರರು ಮುಖತಃ ಮನವಿಯನ್ನೂ ನೀಡಿದ್ದರು. ಮೌಖಿಕವಾಗಿ ಮಾಡಿಕೊಡುವ ಭರವಸೆ ದೊರೆತರೂ ಇದುವರೆಗೆ ಆ ಹುದ್ದೆ ಇಲ್ಲಿ ಆಗಲೇ ಇಲ್ಲ.
ಇಲ್ಲಿ ಇಲ್ಲಗಳೇ ಪ್ರಧಾನ
ಹಿರಿಯ ವೈದ್ಯಾಧಿಕಾರಿ ಇಲ್ಲ.
ಹೆರಿಗೆ, ಪ್ರಸೂತಿ, ಮಕ್ಕಳ ತಜ್ಞರು ಇಲ್ಲ.
ಅರಿವಳಿಕೆ ತಜ್ಞರು ಇಲ್ಲ.
ಎಕ್ಸರೇ ಹಾಗೂ ಲ್ಯಾಬ್ ಟೆಕ್ನಿಷಿಯನ್ ಇಲ್ಲ.
6 ಸ್ಟಾಫ್ ನರ್ಸ್ ಗಳಲ್ಲಿ ಒಂದು ಹುದ್ದೆ ಖಾಲಿ.
ಕೊಕ್ಕಡ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಇಲ್ಲ.
ಸಮುದಾಯ ಆರೋಗ್ಯ ಅಧಿಕಾರಿ ಇಲ್ಲ.
ದಂತವೈದ್ಯರು ಇದ್ದರು ಅವಶ್ಯಕ ಸಲಕರಣೆಗಳು ಇಲ್ಲ.
ಆಯುಷ್ ವೈದ್ಯಾಧಿಕಾರಿ ಇಲ್ಲ.
ಆರೋಗ್ಯ ನಿರೀಕ್ಷಣಾಧಿಕಾರಿ ಇಲ್ಲ.
ಗ್ರೂಪ್ ಸಿ ನೌಕರರ ಹುದ್ದೆಗಳು ಖಾಲಿ ಇದ್ದು ಅವುಗಳು ಕೂಡ ಭರ್ತಿಯಾಗಿಲ್ಲ.
ಹೊರರೋಗಿ ತಪಸಣಾ ವಿಭಾಗದಲ್ಲಿ ಎಷ್ಟರವರೆಗೆ ಸೌಲಭ್ಯವನ್ನು ಕೊಡಲಿಕ್ಕೆ ಸಾಧ್ಯವೋ ಅಷ್ಟು ಕೊಟ್ಟು, ಬೇರೆ ಕಡೆಗೆ ರೋಗಿಗಳನ್ನು ಕಳುಹಿಸಿಕೊಡುವುದು ಇಲ್ಲಿ ಮಾಮೂಲಾಗಿದೆ. ರೋಗಿಗಳ ದಾಖಲಾತಿ ಮಾಡಿಗೊಳ್ಳದೆ ಹಲವು ಕಾಲಗಳೇ ಸಂದವು. ಕೋಟಿಗಟ್ಟಲೆ ಖರ್ಚು ಮಾಡಿ ಆರೋಗ್ಯ ಕೇಂದ್ರ ನಿರ್ಮಿಸಿದರು ಕನಿಷ್ಠ ಮೌಲ್ಯದ ಸೇವೆ ಇಲ್ಲಿ ದೊರಕುತ್ತಿಲ್ಲ. ಇಲ್ಲಿನ ಜನರು ಪರಿಶ್ರಮದಿಂದ ಇಲ್ಲಿಗೆ ಆಸ್ಪತ್ರೆಯನ್ನು ತರಿಸಿಕೊಳ್ಳುವಲ್ಲಿ ಯಶಸ್ವಿಯಾದರು ಸರಕಾರದ ದಿವ್ಯ ನಿರ್ಲಕ್ಷ್ಯ ಇಲ್ಲಿನ ಜನರಿಗೆ ಶಾಪವೇ ಸರಿ. ಪ್ರಸ್ತುತ ಆರೋಗ್ಯ ಕೇಂದ್ರದಲ್ಲಿ ದಂತ ವೈದ್ಯರೇ ಎಲ್ಲವನ್ನು ನಿರ್ವಹಿಸಿಕೊಂಡು ಹೋಗುವ ಅನಿವಾರ್ಯತೆ ಇದೆ.