ಶಿಬಾಜೆ ಗ್ರಾಮದ ಅಜಿರಡ್ಕ ಹಾಗೂ ಕಲ್ಲಾಜೆ ಎಂಬಲ್ಲಿ ಜ.7ರ ರಾತ್ರಿ ಮರಿಯಾನೆಯೊಂದು ಕೃಷಿನಾಶವೆಸಗಿದೆ. ಗ್ರಾಮದ ಅಜಿರಡ್ಕ ನಿವಾಸಿ ಶ್ರೀಧರ ರಾವ್ ಅವರ ತೋಟದಲ್ಲಿರುವ ಸುಮಾರು 25ಕ್ಕೂ ಅಧಿಕ ಬಾಳೆ ಹಾಗೂ 1 ತೆಂಗಿನ ಮರವನ್ನು ಹಾನಿ ಮಾಡಿದೆ.
ನಿವಾಸಿ ಗೌಡರ ತೋಟಕ್ಕೂ ದಾಳಿ ನಡೆಸಿದ ಆನೆ ನಾಶ ಮಾಡಿದೆ. ಕಳೆದ ಒಂದು ವಾರದಿಂದ ಶಿರಾಡಿ, ಶಿಶಿಲ, ಅರಸಿನಮಕ್ಕಿ, ಪಟ್ಟೂರು, ಪಟ್ರಮೆ ಭಾಗಗಳಲ್ಲಿ ಆನೆ ಪ್ರತ್ಯಕ್ಷವಾಗಿದ್ದು, ಸದ್ಯ ಆನೆಯು ಕಲ್ಲಾಜೆ ಪರಿಸರದಲ್ಲೇ ಇರುವ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ಇದೆ.
ಹಾನಿಯಾದ ಪ್ರದೇಶಕ್ಕೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್, ಉಪ ವಲಯಾರಣ್ಯಾಧಿಕಾರಿ ಕಮಲ, ಬೀಟ್ ಫಾರೆಸ್ಟರ್ ರಸೂಲ್ ಭೇಟಿ ನೀಡಿ ಪರಿಶೀಲಿಸಿದರು. ಪ್ರತೀ ವರ್ಷ ಇದೇ ಸಮಯಕ್ಕೆ ಈ ಬಾಗದಲ್ಲಿ ಆನೆ ಕಾಣಿಸಿಕೊಳ್ಳುತ್ತಿದ್ದು, ಶಿಶಿಲದ ಗರಡಿ ಎಂಬ ಭಾಗದಿಂದ ಆನೆ ಬರುತ್ತಿರುವುದಾಗಿ ಹೇಳಲಾಗಿದೆ. ನೀರನ್ನು ಅರಸಿ ಆನೆ ಬರುತ್ತಿದ್ದು, ವಾರಗಳ ಬಳಿಕ ಚಿಕ್ಕಮಗಳೂರು ಕಡೆಗೆ ಆನೆ ತೆರಳಬಹುದು ಎಂದು ಹೇಳಲಾಗುತ್ತಿದೆ.