ಕಡಬ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಡಬ ತಾಲೂಕು ಪಂ.ಜಿಲ್ಲಾ ಯುವ ಜನ ಒಕ್ಕೂಟ, ಕಡಬ ತಾಲೂಕು ಯುವ ಜನ ಒಕ್ಕೂಟ, ಕಡಬ ತಾಲೂಕು ಯುವಕ-ಯುವತಿ ಮಂಡಲಗಳು, ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ಯುವ ಸಪ್ತಾಹ ಕಾರ್ಯಕ್ರಮವನ್ನು ಜನವರಿ 15 ರಂದು ಕಡಬದಲ್ಲಿ ವಿಶಿಷ್ಠವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ತಿಳಿಸಿದರು.
ಅವರು ಬುಧವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯಾಧ್ಯಂತ ಯುವ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದ್ದು, ಸಪ್ತಾಹದ ಅಂಗವಾಗಿ ವಿವೇಕ ರಥ ಯುವ ಪಥ ಜಿಲ್ಲೆಯಾದ್ಯಂತ ಸಂಚರಿಸಲಿದೆ, ರಥವು ಜನವರಿ 15 ರಂದು ಕಡಬಕ್ಕೆ ಆಗಮಿಸಲಿದ್ದು ರಥಕ್ಕೆ ಆದ್ಧೂರಿ ಸ್ವಾಗತ ನೀಡಲಾಗುವುದು ಎಂದರು. ರಥವು ಮಂಗಳೂರಿನಿoದ ಹೊರಟು ಪುತ್ತೂರು ಮಾರ್ಗವಾಗಿ ಕಡಬಕ್ಕೆ ಬೆಳಿಗ್ಗೆ 10.00 ಗಂಟೆಗೆ ಆಗಮಿಸಲಿದೆ, ಕಡಬದ ಹೊಸಮಠದಲ್ಲಿ ವಿವೇಕ ರಥವನ್ನು ಅಧ್ದೂರಿಯಾಗಿ ಸ್ವಾಗತಿಸಲಾಗುವುದು, ಬಳಿಕ ಕಡಬ ಪೇಟೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ, ಕಾರ್ಯಕ್ರಮವನ್ನು ಬಂದರು ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ, ಕಡಬ ತಹಸೀಲ್ದಾರ್ ರಮೇಶ್ ಬಾಬು ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಕ್ಕಡ ಸ.ಪ.ಪೂ.ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈ ಪೆರ್ಲ ಪ್ರಮುಖ ಭಾಷಣ ಮಾಡಲಿದ್ದಾರೆ. ಕಡಬ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಪೋಲೀಸ್ ಠಾಣಾ ಆರಕ್ಷಕ ಉಪನಿರೀಕ್ಷಕ ಆಂಜನೇಯ ರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ಜಿಲ್ಲಾ ನೋಡೆಲ್ ಅಧಿಕಾರಿ ಮಾಮಚ್ಚನ್ ಎಂ, ಕಡಬ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಸಲಿನ್ ಕೆ. ಜಿಲ್ಲಾ ಯುವ ಜನ ಒಕ್ಕೂಟ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಅತಿಥಿಗಳಾಗಿ ಭಾಗವಹಿಲಿದ್ದಾರೆ ಎಂದು ಶಿವಪ್ರಸಾದ್ ರೈ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಡಬ ತಾಲೂಕು ಯುವಜನ ಒಕ್ಕೂಟದ ನಿರ್ದೆಶಕ ಕಾರ್ತಿಕ್ ಕಲ್ಲೇರಿ, ಗೌರವ ಸಲಹೆಗಾರ ಜಯಪ್ರಕಾಶ್ ಮೋಂಟಡ್ಕ ಮತ್ತಿತರರು ಉಪಸ್ಥಿತರಿದ್ದರು.