ಪಟ್ಟೂರು: ಓರ್ವ ಶಿಕ್ಷಕ ಶಾಲಾ ಪಾಠದ ವಿಷಯದಲ್ಲಿ ಮಾತ್ರವಲ್ಲದೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಲ್ಲೂ ಕೈಜೋಡಿಸಿದಾಗ ಸಮಾಜಕೊಬ್ಬ ಉತ್ತಮ ವ್ಯಕ್ತಿಯನ್ನು ಕೊಡಲು ಸಾಧ್ಯ. ಪ್ರಸ್ತುತ ಕೆಲವು ಕಡೆ ವೇತನ ತಾರತಮ್ಯಗಳಿದ್ದರೂ ಕೂಡ ಅದನ್ನೆಲ್ಲ ಮೀರಿದ ಶಿಕ್ಷಣವನ್ನು ಶಿಕ್ಷಕರು ವಿದ್ಯಾರ್ಥಿಗೆ ಕೊಟ್ಟಾಗ ಅದು ಸಮಾಜದಲ್ಲಿ ಮಾದರಿಯಾಗುತ್ತದೆ. ಶಿಕ್ಷಕ ಹಾಗೂ ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಲ್ಲಿ ಕೂಡ ಈ ರೀತಿಯ ಪರಿವರ್ತನೆ ಶ್ಲಾಘನೀಯವೆನಿಸುತ್ತದೆ ಎಂದು ಸೌತಡ್ಕದ ನೈಮಿಷ ಹೌಸ್ ಆಫ್ ಸ್ಪೈಸಸ್ ನ ಮಾಲಕ ಬಾಲಕೃಷ್ಣ ನೈಮಿಷ ನುಡಿದರು.
ಪಟ್ಟೂರಿನ ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ವಿಷ್ಣುಮೂರ್ತಿ ವರ್ತುಲ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಗ್ರಾಮೀಣ ಭಾಗದ ಶಾಲೆಗಳ ಮೇಲ್ವಿಚಾರಕರಾದ ವೆಂಕಟರಮಣ ರಾವ್ ಮಂಕುಡೆ, ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ದೇರಾಜೆ ವರ್ತುಲ ಕಾರ್ಯಾಗಾರದಲ್ಲಿ ಭಾಗವಹಿಸಿದ ಶಾಲೆಗಳ ಮುಖ್ಯ ಗುರುಗಳು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಇದರ ಅಧ್ಯಕ್ಷರಾದ ಡಿ.ಚಂದ್ರಶೇಖರ ಗೌಡ ಧರ್ಮದಕಳ ವಹಿಸಿದ್ದರು.
ವರ್ತುಲ ಕಾರ್ಯಗಾರವು ಮೂರು ಅವಧಿಯಲ್ಲಿ ಆಯೋಜನೆಗೊಂಡಿದ್ದು ಮೊದಲನೇ ಅವಧಿಯಲ್ಲಿ ‘ಸಾಮಾಜಿಕ ಪರಿವರ್ತನೆಯಲ್ಲಿ ಶಾಲೆಗಳ ಪಾತ್ರ’ ಎನ್ನುವ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಶಿಕ್ಷಕ ಗಣೇಶ್ ಐತಾಳ್, ಎರಡನೇ ಅವಧಿಯಲ್ಲಿ ‘ವಿದ್ಯಾರ್ಥಿಗಳಲ್ಲಿ ಕಲಿಕಾ ನ್ಯೂನ್ಯತೆಗಳನ್ನು ಗುರುತಿಸುವುದು ಹಾಗೂ ಪರಿಹಾರೋಪಾಯಗಳು’ ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮನಶಾಸ್ತ್ರಜ್ಞೆ ಶ್ರದ್ಧಾ ಎಲ್ ರೈ, ಮೂರನೇ ಅವಧಿಯಲ್ಲಿ ‘ಹೊಸ ಶಿಕ್ಷಣ ನೀತಿ 2020ರ ಪರಿಚಯ ಹಾಗೂ ಅನುಷ್ಠಾನ’ ಎನ್ನುವ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಪಟ್ಟೂರು ಶ್ರೀರಾಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಂಡಾಜೆ ಅನುದಾನಿತ ಪ್ರೌಢಶಾಲೆ, ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ, ಶ್ರೀರಾಮ ಶಾಲೆ ಸುಲ್ಕೇರಿ, ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸುಲ್ಕೇರಿ, ಶ್ರೀ ವಿಷ್ಣುಮೂರ್ತಿ ಅ.ಹಿ.ಪ್ರಾ. ಶಾಲೆ ಪಟ್ಟೂರು ಹಾಗೂ ಶ್ರೀರಾಮ ಪ್ರೌಢಶಾಲೆ ಪಟ್ಟೂರು ಈ ಎಲ್ಲಾ ಶಾಲೆಗಳ ಶಿಕ್ಷಕರು ವರ್ತುಲ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಶಾಲಾ ವಿದ್ಯಾರ್ಥಿಗಳ ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಸ್ವಾಗತಿಸಿ ಪ್ರಾಸ್ತಾವಿಸಿದರು. ಶಿಕ್ಷಕ ಉಮೇಶ್ ಬಿ. ವಂದಿಸಿದರು. ಶಿಕ್ಷಕಿ ಶ್ವೇತ ಕುಮಾರಿ ಎಂ ಪಿ ಕಾರ್ಯಕ್ರಮ ನಿರೂಪಿಸಿದರು.