ಮಡಾಮಕ್ಕಿ: ಮಾಡು ಒಲ್ಲದ ಖ್ಯಾತಿಯ ಮಡಾಮಕ್ಕಿ ಮಹತೋಭಾರ ವೀರಭದ್ರ ದೇವಸ್ಥಾನದಲ್ಲಿ ಫೆ.8 ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜಾತ್ರಾ ಮಹೋತ್ಸವ, ಕೆಂಡಸೇವೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದೇವಳ 1 ಸಾವಿರ ವರ್ಷಕ್ಕೂ ಮಿಕ್ಕಿ ಇತಿಹಾಸದೊಂದಿಗೆ ಪ್ರಸಿದ್ದ ಬಾರ್ಕೂರು ಅರಸರ ಆಳ್ವಿಕೆಗೊಳಪಟ್ಟಿದೆ ಎಂದು ಶಿಲಾಶಾಸನವಿದ್ದು, ದೇವಳವು ನೇಪಾಳಿ ಶೈಲಿಯಲ್ಲಿದೆ.
ವೀರಭದ್ರ ದೇವರಿಗೆ ಗರ್ಭಗುಡಿಯೇ ಇಲ್ಲ, ಆದ್ದರಿಂದ ಈ ದೇವಳಕ್ಕೆ ಮಾಡು ಒಲ್ಲದ ವೀರಭದ್ರ ಕ್ಷೇತ್ರವೆಂದು ಪ್ರಸಿದ್ದಿ. ಉತ್ತರದಿಂದ ದಕ್ಷಿಣಕ್ಕೆ ಹರಿಯುವ ಮಡಾಮಕ್ಕಿ ನದಿಯ ತಟದಲ್ಲಿ ಜರಗುವ ಜಾತ್ರೆಯಲ್ಲಿ ವಿವಿಧೆಡೆಗಳಿಂದ ಆಗಮಿಸುವ ಸಾವಿರಾರು ಭಕ್ತರು ಕ್ಷೇತ್ರದ ಮಹಿಮೆಗೆ ಸಾಕ್ಷಿಯಾಗಲಿದ್ದಾರೆ.
ಹಿನ್ನೆಲೆ :
ಪುರಾತನ ಕಾಲದಲ್ಲಿ ರಕ್ಕಸರ ಅಟ್ಟಹಾಸ ಹೆಚ್ಚಿದಾಗ ವೃಷಭಯೋಗೇಶ್ವರ ಮುನಿಯು ಶಿವನನ್ನು ಕುರಿತು ಸುದೀರ್ಘ ತಪಸ್ಸು ಮಾಡಿದಾಗ ಶಿವಪುತ್ರ ವೀರಭದ್ರ ಪ್ರತ್ಯಕ್ಷನಾಗಿ ರಕ್ಕಸರನ್ನು ಕಂಡು ಕೋಪೋದ್ರಿಕ್ತನಾಗಿ ತನ್ನ ತಲೆಯನ್ನು ಸಮೀಪದ ದೊಡ್ಡ ಶಿಲೆಗೆ ಬಡಿದನಂತೆ. ಬಡಿತಕ್ಕೆ ಶಿಲೆ ಚೂರು ಚೂರಾಗಿ ಸಿಡಿಯಿತು. ಸಿಡಿದ ಅರ್ಧ ಚಂದ್ರಾಕ್ರತಿಯ ಒಂದು ಶಿಲೆಯನ್ನು ವೃಷಭಯೋಗೇಶ್ವರ ಮುನಿ ತಂದು ಮಡಾಮಕ್ಕಿ ಸಮೀಪದ ದೊಡ್ಡ ಬಾವಿಯಲ್ಲಿ ಮಡಾಮಕ್ಕಿ, ಬೇಳಂಜೆ ಸಂಸ್ಥಾನಗಳ ರಾಜರ ರತ್ನ ವೈಡೂರ್ಯಾಧಿಗಳನ್ನು ತಂದು ಬಾವಿಯಲ್ಲಿ ಹಾಕಿ ಭದ್ರಗೊಳಿಸಿ ಅದಕ್ಕೆ ಮಣ್ಣಿನಕಟ್ಟೆಯನ್ನು ಕಟ್ಟಿ ಅದರ ಮೇಲೆ ತಂದು ಶಿಲೆಯನ್ನು ಪ್ರತಿಷ್ಠೆ ಮಾಡಿದನೆಂದು ಪುರಾಣದಲ್ಲಿ ಉಲ್ಲೇಖವಿದೆ.
ವೀರಭದ್ರನ ಮೊಣಕಾಲನ್ನು ಊರಿ ನೆಲೆಯಾದ ಸ್ಥಳಕ್ಕೆ ಊರಿಗೆ ಮಡಾಮಕ್ಕಿ ಎಂಬ ಹೆಸರು ಬಂದಿದೆ ಎಂದು, ಕ್ಷೇತ್ರಕ್ಕೆ ಕೋಟೆರಾಯ ಪರಿವಾರಗಳು ದೇವಗಣಗಳು ರಕ್ಷಣೆಯಲ್ಲಿದೆ ಎಂದು ಪ್ರತೀತಿ. ಇಲ್ಲಿ ಅರ್ಧಚಂದ್ರಾಕೃತಿಯ ಶಿಲೆಯೇ ವೀರಭದ್ರನ ಸಾನ್ನಿಧ್ಯ. ವೀರಭದ್ರ ನೆಲೆನಿಂತ ಮಣ್ಣಿನ ಕಟ್ಟೆಯ ಮಣ್ಣು(ಮೃತ್ತಿಕೆ) ಪ್ರಸಾದ ರೂಪವಾಗಿ ಭಕ್ತರಿಗೆ ಹಂಚುವುದು ವಿಶೇಷ.
ಜಾತ್ರಾ ಮಹೋತ್ಸವ, ಕೆಂಡ ಸೇವೆ ದಿನದಂದು ತುಲಾಭಾರ ಸೇವೆ ಹಾಗೂ ಇನ್ನೀತರ ಸೇವೆಗಳು, ಮಹಾ ಅನ್ನಸಂತರ್ಪಣೆ, ರಾತ್ರಿ ಕ್ಷೇತ್ರದ ಮೇಳದಿಂದ ಯಕ್ಷಗಾನ ನೃತ್ಯಸೇವೆ, ವೀರಭದ್ರ ಸ್ವಾಮಿ, ಬನಶಂಕರಿ ದೇವಿಯ ದರ್ಶನ, ಕೆಂಡಸೇವೆ, ರಂಗಪೂಜೆ, ಢಮರುಸೇವೆ, ಪರಿವಾರ ದೇವತೆಗಳ ಕೋಲ ಸೇವೆ. ವೀರಭದ್ರ ಸ್ವಾಮಿ ದರ್ಶನದಲ್ಲಿ ಪಾತ್ರಿಯು ಚೂಪಾದ ಮುಳ್ಳಿನ ಪಾದುಕೆಯನ್ನು ಧರಿಸಿ ವೀರಭದ್ರನ ಮಣ್ಣಿನ ಕಟ್ಟೆಯ(ಸನ್ನಿಧಾನ)ವನ್ನು ಪ್ರದಕ್ಷಿಣೆ ಬರುವುದು ಕ್ಷೇತ್ರದಲ್ಲಿ ವಿಶೇಷವಾಗಿದೆ.
ಕ್ಷೇತ್ರದ ಯಕ್ಷಗಾನ ಮೇಳವು ಯಶಸ್ವಿ ತಿರುಗಾಟದೊಂದಿಗೆ ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸುವಲ್ಲಿ ತನ್ನದೇ ಪಾತ್ರ ವಹಿಸುತ್ತಿರುವುದು ಪ್ರಶಂಸನೀಯ.
ಕಾರ್ಯಕ್ರಮಗಳು:
ಫೆ.7 ನೇ ಮಂಗಳವಾರ ಮಧ್ಯಾಹ್ನ ಗಂ.2.30 ರಿಂದ ಶ್ರೀಕ್ಷೇತ್ರಕ್ಕೆ ಭಕ್ತಾದಿಗಳು ಸಮರ್ಪಿಸುವ ಬೆಳ್ಳಿ ಕೊಡುಗೆಗಳನ್ನು ಮಡಾಮಕ್ಕಿ ಪೇಟೆಯಿಂದ ಪ್ರಾರಂಭಗೊಂಡು, ಸೋಮೇಶ್ವರ,ಸೀತಾನದಿ,ಹೆಬ್ರಿ,ಬೇಳಂಜೆ,ಅಲ್ಬಾಡಿ,ಬೆಳ್ವೆ,ಗೋಳಿಯಂಗಡಿ, ಕೊಂಜಾಡಿ,
ಶೇಡಿಮನೆ, ಅರಸಮ್ಮಕಾನು, ಮಾಂಡಿಮೂರುಕೈ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ, ನಾಲ್ಕನೇ ಮೈಲುಕಲ್ಲಿನಿಂದ ಕಾಲ್ನಡಿಗೆಯಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ದೇವಸ್ಥಾನಕ್ಕೆ ತಲುಪಿತು.
ಫೆ.8 ನೇ ಬುಧವಾರ ಬೆಳಗ್ಗೆ ಗಣೇಶ ಪ್ರಾರ್ಥನೆ, ಪುಣ್ಯಾಹ, ನವಕ ಪ್ರಧಾನ ಹೋಮ ಕಲಶ,ಶತ ರುದ್ರಭೀಷೇಕ, ಮಧ್ಯಾಹ್ನ ಗಂ. 12 ಕ್ಕೆ ಮಹಾಪೂಜೆ, ಗಂ. 12.30ಕ್ಕೆ ತುಲಾಭಾರ ಸೇವೆ, ಗಂ. 12.45 ರಿಂದ ಗಂ. 3 ರ ತನಕ ಅನ್ನಸಂತರ್ಪಣೆ, ರಾತ್ರಿ ಗಂ. 8.ಕ್ಕೆ ಕೆಂಡ ಸೇವೆಗೆ ಅಗ್ನಿ ಸ್ಪರ್ಶ, ಗಂ. 8.30 ರಿಂದ ಯಕ್ಷಗಾನ ನೃತ್ಯಸೇವೆ, ಗಂ. 9 ರಿಂದ ದಾನಿಗಳಿಗೆ ಸನ್ಮಾನ, ಗಂ. 9.30 ರಿಂದ ಶ್ರೀ ಸ್ವಾಮಿ ಹಾಗೂ ಅಮ್ಮನವರ ದರ್ಶನ, ಕೆಂಡ ಸೇವೆ, ಗಂ. 10.30 ರಿಂದ ಪರಿವಾರ ದೈವಗಳ ಕೋಲ ಹಾಗೂ ದರ್ಶನ, ಗಂ. 1.30 ರಿಂದ ರಂಗ ಪೂಜೆ, ಢಮರು ಸೇವೆ, ವ್ಯಾಘ್ರ ಚಾಮುಂಡಿ ದರ್ಶನ,ಸುತ್ತು ಬಲಿ, ಸ್ವಾಮಿ ದರ್ಶನ,ಪ್ರಸಾದ ವಿತರಣೆ ನಡೆಯಲಿದೆ.