ಸುಬ್ರಹ್ಮಣ್ಯ: ದಕ್ಷಿಣ ಭಾರತದ ಶ್ರೇಷ್ಠ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯದ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖಾ ಸಚಿವ ಡಾ.ಅಶ್ವಥ್ ನಾರಾಯಣ್ ಸಿ.ಎನ್. ಮಂಗಳವಾರ ಕುಟುಂಬ ಸಮೇತರಾಗಿ ಭೇಟಿ ನೀಡಿದರು.
ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಉಪಮುಖ್ಯಮಂತ್ರಿಗಳನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಸ್ವಾತಿಸಿದರು. ಬಳಿಕ ಶ್ರೀ ದೇವಳದಲ್ಲಿ ಅವರು ಆಶ್ಲೇಷ ಬಲಿ ಮತ್ತು ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಿದರು.
ಹೆಲಿಕಾಪ್ಟರ್ ಮೂಲಕ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಶಾಲಾ ಮೈದಾನದಲ್ಲಿ ಬಂದಿಳಿದ ಅವರು ಬಳಿಕ ಕಾರಿನ ಮೂಲಕ ಕುಕ್ಕೆಗೆ ಪ್ರಯಾಣಿಸಿದರು. ಶ್ರೀ ದೇವಳಕ್ಕೆ ಆಗಮಿಸಿದ ಸಚಿವರು ಶ್ರೀ ದೇವರ ದರುಶನ ಪಡೆದರು. ಸಂಕಲ್ಪ ನೆರವೇರಿಸಿ ಆಶ್ಲೇಷ ಬಲಿ ಸೇವೆ ಸಮರ್ಪಿಸಿದರು. ನಂತರ ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಿದರು. ಬಳಿಕ ಶ್ರೀ ದೇವರ ಮಹಾಪೂಜೆ ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು.
ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಉಪಮುಖ್ಯಮಂತ್ರಿಗಳಿಗೆ ಶಾಲು ಹೊದಿಸಿ ಶ್ರೀ ದೇವರ ಮಹಾಪ್ರಸಾದ ನೀಡಿದರು. ಬಳಿಕ ಶ್ರೀ ದೇವಳದಲ್ಲಿ ಪ್ರಸಾದ ಬೋಜನ ಸ್ವೀಕರಿಸಿದರು. ನಂತರ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಅಶ್ವಥ್ ನಾರಾಯಣ್ ಅವರೊಂದಿಗೆ ಅವರ ಪತ್ನಿ ಶೃತಿ ಅಶ್ವಥ್ ನಾರಾಯಣ್, ಪುತ್ರಿ ಆಕಾಂಕ್ಷ, ಪುತ್ರ ಅಮೋಘ್, ಸಹೋದರ ಸತೀಶ್ ಆಗಮಿಸಿದ್ದರು.