ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜು

ಶೇರ್ ಮಾಡಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾ.9ರಿಂದ ಮಾ.29ರ ವರೆಗೆ ನಡೆಯಲಿರುವ ವಾರ್ಷಿಕ ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶನದಂತೆ ಜಿಲ್ಲೆಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರತಿ ವರ್ಷ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ(ಪಿಯು ಬೋರ್ಡ್‌) ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತಿತ್ತು. ಈ ವರ್ಷ ರಾಜ್ಯ ಸರಕಾರ ಮಹತ್ವದ ನಿರ್ಧಾರ ತೆಗೆದುಕೊಂಡು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪಿಯು ಬೋರ್ಡ್‌ ವಿಲೀನ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯನ್ನು ರಚಿಸಿದೆ.

ಈ ಮಂಡಳಿಯಡಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಮಂಡಳಿಯ ಸೂಚನೆಯಂತೆ ಜಿಲ್ಲಾ ಉಪನಿರ್ದೇಶಕರು ಜಿಲ್ಲೆಯಲ್ಲಿ ಪರೀಕ್ಷೆಗೆ ಆಗಬೇಕಿರುವ ಎಲ್ಲ ಸಿದ್ಧತೆಯನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಾಡಿಕೊಂಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಹೊಸ (ರೆಗ್ಯುಲರ್‌) ವಿದ್ಯಾರ್ಥಿಗಳು, ಖಾಸಗಿ ಹಾಗೂ ಪುನರಾವರ್ತಿ ಅಭ್ಯರ್ಥಿಗಳು ಸೇರಿದಂತೆ 34,340 ಮಂದಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ದ.ಕ. ಜಿಲ್ಲೆಯಲ್ಲಿ 52 ಪರೀಕ್ಷ ಕೇಂದ್ರ ಗುರುತಿಸಿ ಅಗತ್ಯ ಭದ್ರತೆ ಕಲ್ಪಿಸಲಾಗಿದೆ.
ನಕಲು ಅಥವಾ ಪರೀಕ್ಷ ಅಕ್ರಮ ಪೂರ್ಣ ಪ್ರಮಾಣದಲ್ಲಿ ತಡೆಯುವ ನಿಟ್ಟಿನಲ್ಲಿ ಎಲ್ಲ ಪರೀಕ್ಷ ಕೇಂದ್ರದಲ್ಲೂ ಸಿಸಿಟಿವಿ ಅಳವಡಿಸಲಾಗಿದೆ. ವಿದ್ಯಾರ್ಥಿ ಗಳಿಗೆ ಹಾಗೂ ಕೊಠಡಿ ಮೇಲ್ವಿಚಾರಕರಿಗೆ, ವಿಚಕ್ಷಣ ದಳದ ಅಧಿಕಾರಿ, ಸಿಬಂದಿಗೆ ಪ್ರತ್ಯೇಕ ಮಾರ್ಗ ಸೂಚಿಯನ್ನು ಹೊರಡಿಸಲಾಗಿದೆ. ಮೊಬೈಲ್‌ ಸಹಿತ ಎಲೆಕ್ಟ್ರಾನಿಕ್ಸ್‌ ಪರಿಕರಗಳನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲಾಗಿದೆ.
ಪರೀಕ್ಷೆಯ ಸುರಕ್ಷತೆ ಹಾಗೂ ಭದ್ರತೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಮಟ್ಟದಲ್ಲಿ ಒಂದು ತಂಡ, ತಾಲೂಕು ಮಟ್ಟದಲ್ಲಿ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ವಿತರಣೆ ತಂಡಗಳಿಗೆ ಮಾರ್ಗವನ್ನು ಗುರುತಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥಿತ ರೀತಿಯಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಲಾಗಿದೆ.

Leave a Reply

error: Content is protected !!