ನೇಸರ ಡಿ.29: ಕೊಕ್ಕಡ-ಜೋಡುಮಾರ್ಗ ಜನನಿಬಿಡ ಪ್ರದೇಶದಲ್ಲಿ ವಾಹನ ಮತ್ತು ಜನಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಎರಡು ಗೂಡಂಗಡಿಗಳನ್ನು ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ತೆರವುಗೊಳಿಸಿದರು.
ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದಾಗಿ ಲೋಕೋಪಯೋಗಿ ಇಲಾಖೆಗೆ ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯತ್ ನಿಂದ ದೂರು ಬಂದಿತ್ತು.ಈ ಹಿನ್ನಲೆಯಲ್ಲಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾದರು.ಡಿ.29ರಂದು ಲೋಕೋಪಯೋಗಿ, ಕಂದಾಯ ಇಲಾಖೆ,ಪಿಡಿಒ,ಧರ್ಮಸ್ಥಳ ಪೊಲೀಸರ ಸಮ್ಮುಖದಲ್ಲಿ ತೆರವುಗೊಳಿಸಿದರು.
ಹಲವು ಸಮಯಗಳಿಂದ ವ್ಯಾಪಾರವನ್ನು ನಡೆಸಿಕೊಂಡು ಬರುತ್ತಿದ್ದ ತರಕಾರಿ ಅಂಗಡಿ ಮತ್ತು ಹಣ್ಣು ಹಂಪಲುಗಳ ಅಂಗಡಿಯನ್ನು ತೆರವುಗೊಳಿಸುವ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಂಗಡಿ ಮಾಲೀಕರು ನಮ್ಮದೇ ಅಂಗಡಿಯನ್ನು ಯಾಕೆ ತೆರವುಗೊಳಿಸಬೇಕೆಂದು ಪ್ರಶ್ನಿಸಿದರು ಮತ್ತು ಉಳಿದ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಬೇಕೆಂದು ಪಟ್ಟುಹಿಡಿದರು.
ಇವರ ಪ್ರಶ್ನೆಗೆ ಅಧಿಕಾರಿಗಳು ಕಾನೂನಿನಲ್ಲಿ ಇರುವಂತೆ ಕಾರ್ಯಾಚರಿಸುವುದಾಗಿ ಉತ್ತರಿಸಿದರು. ಕೆಲ ಕಾಲ ಪರಿಸ್ಥಿತಿ ಬಿಗಡಾಯಿಸಿದರೂ ಕೂಡ ಅಧಿಕಾರಿಗಳು ಅಂಗಡಿ ತೆರವುಗೊಳಿಸಿಯೇ ಅಲ್ಲಿಂದ ತೆರಳಿದರು