ಸೈಕಲ್ ಮೂಲಕ ತೀರ್ಥಯಾತ್ರೆ ಕೈಗೊಂಡ ತಮಿಳುನಾಡಿನ ವ್ಯಕ್ತಿ

ಶೇರ್ ಮಾಡಿ

ತಮಿಳುನಾಡಿನ 70ರ ಹರೆಯದ ವ್ಯಕ್ತಿಯೊಬ್ಬರು ಸೈಕಲ್ ಮೂಲಕ ತೀರ್ಥಯಾತ್ರೆ ಕೈಗೊಂಡಿದ್ದು ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಅಲ್ಲಿಂದ ಕನ್ಯಾಡಿ ಶ್ರೀರಾಮ ಮಂದಿರಕ್ಕೆ ತೆರಳಿ ಉಜಿರೆ, ಚಾರ್ಮಾಡಿ ಮೂಲಕ ಚಿತ್ರದುರ್ಗದ ಕಡೆ ಪ್ರಯಾಣ ಬೆಳೆಸಲಿದ್ದಾರೆ.

ತಿರುವನ್ವೇಲಿಯ ಬ್ರಾಹ್ಮಣ ಸಮುದಾಯದ ಗೋಪಾಲಕೃಷ್ಣ ಅಯ್ಯರ್ ಎಂಬವರು ತಮಿಳುನಾಡಿನಿಂದ ತನ್ನ ತೀರ್ಥಯಾತ್ರೆಯನ್ನು ಆರಂಭಿಸಿ ಅಲ್ಲಿನ ಕನ್ಯಾಕುಮಾರಿ, ಪಳನಿ, ರಾಮೇಶ್ವರ, ಮಧುರೈ ಮೊದಲಾದ ದೇವಸ್ಥಾನಗಳ ದರ್ಶನ ಮುಗಿಸಿ ಕರ್ನಾಟಕದ ಮಲೆ ಮಹದೇಶ್ವರ, ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಭಾಗಮಂಡಲ, ತಲಕಾವೇರಿ ಮೂಲಕ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಸೌತಡ್ಕದ ದರ್ಶನ ಪಡೆದು ಶುಕ್ರವಾರ ಧರ್ಮಸ್ಥಳಕ್ಕೆ ಆಗಮಿಸಿದರು.
ಇಲ್ಲಿಂದ ಚಿಕ್ಕಮಗಳೂರು ಮೂಲಕ ಚಿತ್ರದುರ್ಗ ತಲುಪಿ, ಮುಂದೆ ಬಿಜಾಪುರ, ಪಂಡರಾಪುರ, ಮುಂಬೈ,ಉತ್ತರಕಾಶಿ, ದೆಹಲಿ,ಆಗ್ರಾ ಮೂಲಕ ದೇಶದ 11 ರಾಜ್ಯಗಳ ಲ್ಲಿ ಸೈಕಲ್ ನಲ್ಲಿ ಸಂಚರಿಸಿ ಲಡಾಖ್ ಮೂಲಕ ಅಮರನಾಥ ಯಾತ್ರೆ ಕೈಗೊಳ್ಳುವ ಉದ್ದೇಶ ಹೊಂದಿದ್ದಾರೆ.

14 ತಿಂಗಳುಗಳ ಕಾಲ ಸೈಕಲ್ ಯಾತ್ರೆ ನಡೆಸಿ ತಮ್ಮ ಗುರಿಯನ್ನು ಮುಟ್ಟುವ ಇರಾದೆ ಹೊಂದಿದ್ದಾರೆ. ಕರ್ನಾಟಕ ಸೇರಿದಂತೆ ತಾನು ಪ್ರಯಾಣ ಬೆಳೆಸುವ ದಾರಿಯುದ್ದಕ್ಕೂ ಸಿಗುವ ದೇವಸ್ಥಾನ, ನದಿಗಳನ್ನು ಸಂದರ್ಶಿಸಿ ಅವುಗಳ ಪಾವಿತ್ರ್ಯತೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ.
ಆಯಾ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ ದಿನವೊಂದಕ್ಕೆ 15ರಿಂದ 20 ಕಿಮೀ ಸೈಕಲ್ ಪ್ರಯಾಣ ಬೆಳೆಸುತ್ತಾರೆ. ಶಾಲೆ, ದೇವಸ್ಥಾನ ಸಭಾಮಂಟಪಗಳಲ್ಲಿ ಸ್ಥಳೀಯ ಪಂಚಾಯಿತಿಯ ಅನುಮತಿ ಪಡೆದು ರಾತ್ರಿ ಆಶ್ರಯ ವ್ಯವಸ್ಥೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ದೇವಸ್ಥಾನಗಳಲ್ಲಿ ಊಟ ಇದ್ದಲ್ಲಿ ಅದನ್ನು ಸ್ವೀಕರಿಸಿ ಮುನ್ನಡೆಯುತ್ತಾರೆ. ಊಟದ ವ್ಯವಸ್ಥೆ ಇಲ್ಲದಿದ್ದಲ್ಲಿ ಹೋಟೆಲ್ ನ್ನು ಆಶ್ರಯಿಸದೆ ಸ್ವಂತ ಅಡುಗೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಬೇಕಾದ ಅಕ್ಕಿ, ಸಾಂಬಾರ್ ಪುಡಿ, ಸ್ಟವ್ ಇನ್ನಿತರ ವ್ಯವಸ್ಥೆಗಳನ್ನು ತಮ್ಮ ಸೈಕಲ್ ನಲ್ಲೇ ಕಟ್ಟಿಕೊಂಡಿದ್ದಾರೆ. ನಾಲ್ಕು ಧೋತಿ ನಾಲ್ಕು ಅಂಗವಸ್ತ್ರ ಹಾಗೂ ರಾತ್ರಿಗೆ ಅಗತ್ಯವಿರುವ ಸ್ಥಳಗಳಲ್ಲಿ ಬೇಕಾದ ಹೊದಿಕೆಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಕಾಫಿ, ಟೀ, ಬಿಸ್ಕಟ್ ಇತ್ಯಾದಿಗೆ ಮಾತ್ರ ಇತರರನ್ನು ಆಶ್ರಯಿಸಿದ್ದಾರೆ.

Leave a Reply

error: Content is protected !!