ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಬ್ಯಾನರ್ ಗೆ ಕಿಡಿಗೇಡಿಗಳ ಕಲ್ಲು ತೂರಾಟ: ಜಮಾಯಿಸಿದ ಅಭಿಮಾನಿಗಳು

ಶೇರ್ ಮಾಡಿ

ಪುತ್ತೂರು: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗರಿಷ್ಠ ಮತಗಳಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರಿಗೆ ಶುಭಕೋರಿ ಕಾವು ಪಂಚವಟಿನಗರದಲ್ಲಿ ಹಾಕಲಾಗಿದ್ದ ಬ್ಯಾನರ್‌ಗೆ ಜನರ ಎದುರಲ್ಲೇ ಕಿಡಿಗೇಡಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿ ತಪ್ಪಿಸಿಕೊಂಡ ಘಟನೆ ಮೇ 16ರಂದು ರಾತ್ರಿ ನಡೆದು ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಪುತ್ತಿಲ ಅಭಿಮಾನಿ ಬಳಗ ಕಾವು ಹೆಸರಿನಲ್ಲಿ ಅಭಿನಂದನೆ ಸಲ್ಲಿಸಿ ಕಾವಿನಲ್ಲಿ ಮೇ.15ರಂದು ರಾತ್ರಿ ಫ್ಲೆಕ್ಸ್ ಅಳವಡಿಸಲಾಗಿತ್ತು. ಫ್ಲೆಕ್ಸ್ ಅಳವಡಿಸುವ ಮುನ್ನ ಅರಿಯಡ್ಕ ಗ್ರಾ.ಪಂ ನಿಂದ ಶುಲ್ಕ ಪಾವತಿಸಿ ಅನುಮತಿಯನ್ನು ಪಡೆಯಲಾಗಿತ್ತು. ಮೇ 16ರಂದು ರಾತ್ರಿ ಜನರ ಎದುರಲ್ಲೇ ಕಿಡಿಗೇಡಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿ ಪರಾರಿಯಾಗಿತ್ತು.

ಘಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಪುತ್ತಿಲ ಅಭಿಮಾನಿಗಳು ಮತ್ತು ಸ್ಥಳೀಯರು ಸೇರಿ ಪೊಲೀಸರಿಗೆ ಮತ್ತು ಅರುಣ್ ಕುಮಾರ್ ಪುತ್ತಿಲ ಅವರಿಗೆ ಮಾಹಿತಿ ನೀಡಿದರು. ಸಂಪ್ಯ ಪೊಲೀಸರು ಮತ್ತು ಅರುಣ್ ಕುಮಾರ್ ಪುತ್ತಿಲ ಅವರು ಸ್ಥಳಕ್ಕಾಗಮಿಸಿ ನೆರೆದಿದ್ದ ಜನರನ್ನು ಸಮಾಧಾನ ಪಡಿಸಿ, ಘಟನೆಗೆ ಕಾರಣಕರ್ತರಾಗಿರುವ ಕಿಡಿಗೇಡಿಗಳನ್ನು ಹಿಡಿದು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುವ ಭರವಸೆ ನೀಡಿದರು. ಕಲ್ಲು ತೂರಾಟ ನಡೆಸಿರುವವರು ಸ್ಥಳಿಯರೇ ಆಗಿದ್ದು, ಈ ಬಗ್ಗೆ ಖಚಿತ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದು, ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಹಾಗಾಗಿ ಈ ಬಗ್ಗೆ ಯಾರೂ ವಿಚಲಿತರಾಗದಂತೆ ಪುತ್ತಿಲ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

error: Content is protected !!